×
Ad

ಧಾರ್ಮಿಕ, ಲೌಕಿಕ ಶಿಕ್ಷಣದ ಮೂಲಕ ಸಾಮರಸ್ಯದ ಸಂದೇಶ ರವಾನಿಸಿ : ಸಚಿವ ಯು.ಟಿ.ಖಾದರ್

Update: 2018-01-21 20:56 IST

ಮಡಿಕೇರಿ,ಜ.21 : ಪ್ರತಿಯೊಬ್ಬರೂ ಧಾರ್ಮಿಕ, ಲೌಕಿಕ ಶಿಕ್ಷಣ ಪಡೆಯುವ ಮೂಲಕ ಸಮಾಜಕ್ಕೆ ಶಾಂತಿ, ಸಾಮಾರಸ್ಯ ಮತ್ತು ಪ್ರೀತಿಯ ಸಂದೇಶ ಸಾರಬೇಕೆಂದು ಸಚಿವರಾದ ಯು.ಟಿ.ಖಾದರ್ ಕರೆ ನೀಡಿದ್ದಾರೆ.  

ಸುನ್ನಿ ಸ್ಟುಡೆಂಟ್ಸ್ ಫೆಡರೇಷನ್ ವತಿಯಿಂದ ನಾಪೋಕ್ಲು ಸಮೀಪದ ಕೊಟ್ಟಮುಡಿ ಮರ್ಕಝುಲ್ ಹಿದಾಯದಲ್ಲಿ ಎರಡು ದಿನಗಳ ಕಾಲ ನಡೆದ ರಾಜ್ಯ ಮಟ್ಟದ ಪ್ರತಿಭೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಎಸ್‍ಎಸ್‍ಎಫ್ ಸಂಘಟನೆ ಹೋಬಳಿ, ವಲಯ ಮಟ್ಟದಲ್ಲೂ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಇಸ್ಲಾಂನ ಧಾರ್ಮಿಕ ವಿಚಾರಗಳನ್ನು ಯುವಪೀಳಿಗೆಗೆ ಮನವರಿಕೆ ಮಾಡಿಕೊಡಬೇಕು ಆ ಮೂಲಕ ಧಾರ್ಮಿಕ ಯುವ ಪ್ರತಿಭೆಗಳನ್ನು ಗುರುತಿಸಿ ಸಮುದಾಯಕ್ಕೆ ಕೊಡುಗೆಯಾಗಿ ನೀಡಬೇಕೆಂದು ಸಲಹೆ ನೀಡಿದರು.

ಕಷ್ಟಗಳು ಎದುರಾದಾಗ ಧೈರ್ಯದಿಂದಲೇ ಎದರಿಸುವ ಮನೋಭಾವವನ್ನು ಯುವ ಪೀಳಿಗೆ ಮೈಗೂಡಿಸಿಕೊಳ್ಳುವಂತೆಯೂ ಸಚಿವ ಯು.ಟಿ.ಖಾದರ್ ಶಿಬಿರಾರ್ಥಿಗಳಿಗೆ ಕಿವಿಮಾತು ಹೇಳಿದರು.

ಬೆಂಗಳೂರು ವಕ್ಫ್ ಬೋರ್ಡ್‍ನ ಸದಸ್ಯ ಶಾಫಿ ಸಅದಿ ಮಾತನಾಡಿ, ವಿವಿಧ ರಾಜ್ಯ, ಜಿಲ್ಲೆಗಳ ಮೂಲೆಮೂಲೆಗಳಿಂದ ಯುವಪೀಳಿಗೆಯನ್ನು ಒಂದೇ ವೇದಿಕೆಯಡಿಯಲ್ಲಿ ಸೇರಿಸುವ ಕೆಲಸವನ್ನು ಎಸ್ಸೆಸೆಫ್ ಮಾಡಿದಲ್ಲದೇ, ಯುವಪ್ರತಿಭೆಗಳಿಗೆ ಸ್ವತಂತ್ರವಾಗಿ ತಮ್ಮ ಪ್ರತಿಭೆ ಬೆಳಗಿಸಲು ಅವಕಾಶ ಕಲ್ಪಿಸಿದೆ. ಇಸ್ಲಾಂನ ಅನುಯಾಯಿಗಳಾಗಿ, ಇಸ್ಲಾಂನ ಶಿಷ್ಟಾಚಾರಗಳನ್ನು ಯುವ ಸಮುದಾಯ ಅಳವಡಿಸಿಕೊಂಡು ಕಲೆ, ಸಂಸ್ಕೃತಿ, ಕ್ರೀಡೆ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ತಮ್ಮ ಛಾಪು ಮೂಡಿಸಬೇಕೆಂದು ಶಾಫಿ ಸಅದಿ ಕರೆ ನೀಡಿದರು.

ದಕ್ಷಿಣ ಕನ್ನಡ ವಕ್ಫ್ ಬೋರ್ಡ್ ಅಧ್ಯಕ್ಷ ಕಳತ್ತೂರು ಮೋಣು ಹಾಜಿ ಮಾತನಾಡಿ, ಇಸ್ಲಾಂನ ಅನುಯಾಯಿಗಳೆಲ್ಲರೂ ಏಕತೆ, ಒಗ್ಗಟ್ಟು ಪ್ರದರ್ಶಿಸುವ ಮೂಲಕ ಸಮಾಜದ  ಮುಖ್ಯವಾಹಿನಿಗೆ ಬರಬೇಕೆಂದು ಸಲಹೆ ನೀಡಿದರು. ಇಂದು ಇಸ್ಲಾಂ ಸಮುದಾಯಕ್ಕೆ ತಮ್ಮದೇ ಆದ ನಾಯಕತ್ವವಿದ್ದು, ಎಲ್ಲಾ ರೀತಿಯ ಸವಲತ್ತು ಸೌಕರ್ಯಗಳನ್ನು ಪಡೆಯಲು ಸಾಧ್ಯವಾಗುತ್ತಿದೆ. ಈ ಒಗ್ಗಟ್ಟು ಪ್ರದರ್ಶನ ಮತ್ತು ಏಕತೆ ಮೂಡಿಸಲು ಎಸ್ಸೆಸೆಫ್ನ ಪ್ರತಿಭೋತ್ಸವದಂತಹ ಕಾರ್ಯಕ್ರಮಗಳು ರಾಜ್ಯದ ಎಲ್ಲಾ ಕಡೆಗಳಲ್ಲೂ ಆಯೋಜನೆಯಾಗಬೇಕೆಂದು ಅಭಿಪ್ರಾಯಿಸಿದರಲ್ಲದೇ, ಯುವ ಸಮೂಹ ಇಸ್ಲಾಂನ ಎರಡು ಕಣ್ಣುಗಳಂತಿದ್ದು, ಹಿರಿಯರ ಧಾರ್ಮಿಕ ಕಾರ್ಯ ಚಟುವಟಿಕೆಗಳಿಗೆ ಸಂಪೂರ್ಣ ಬೆಂಬಲ ಮತ್ತು ಸಹಕಾರ ನೀಡಬೇಕೆಂದು ಶಿಬಿರದಲ್ಲಿ ಪಾಲ್ಗೊಂಡಿದ್ದ ಯುವ ಸಮೂಹಕ್ಕೆ ಕಿವಿಮಾತು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಎಸ್‍ಎಸ್‍ಎಫ್ ರಾಜ್ಯಾಧ್ಯಕ್ಷರಾದ ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ ವಹಿಸಿದ್ದರು

ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಮಂಡಳಿ ಅಧ್ಯಕ್ಷ ಹಾಜಿ ಕನಚೂರು ಮೋನು ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಸದಸ್ಯ ಶಾಫಿ ಸಹದಿ ಉಪಸ್ಥಿತರಿದ್ದರು. ಕರ್ನಾಟಕ ರಾಜ್ಯ ಎಸ್‍ವೈ ಎಸ್ ರಾಜ್ಯಾಧ್ಯಕ್ಷ ಜಿ.ಎಂ. ಕಾಮಿಲ್ ಸಖಾಫಿ, ಪ್ರಧಾನ ಕಾರ್ಯದರ್ಶಿ ರಶೀದ್ ರುಸುರಿ ಸಖಾಫಿ ಕರ್ನಾಟಕ ರಾಜ್ಯ ಸುನ್ನಿಜಮಾಯತ್‍ನ ಪ್ರಧಾನ ಕಾರ್ಯದರ್ಶಿ ಅಬೂರಸ್‍ಯನ್ ಮದನಿ ಕೊಡಗು ಜಿಲ್ಲೆ ವಕ್ಫ್ ಮಂಡಳಿಯ ಅಧ್ಯಕ್ಷ ಅಬ್ದುಲ್‍ರೆಹಮಾನ್, ಮಹಮದ್ ಉಸ್ತಾದ್ ಎಡಪಾಲ, ಉಸ್ಮಾನ್ ನಾಪೋಕ್ಲು, ಕೊಟ್ಟಮುಡಿಯ ಅಬೂಬಕರ್ ಹಂಸ, ಶಾಫಿ, ಕೊಡಗು ಜಿಲ್ಲಾ ವಕ್ಫ್ ಮಂಡಳಿ ಮಾಜಿ ಅಧ್ಯಕ್ಷ ಎಂ.ಬಿ. ಹಮೀದ್ ಪಾಲ್ಗೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News