ಶರಣರ ತತ್ವಾದರ್ಶಗಳನ್ನು ಅವಲೋಕನ ಮಾಡಿಕೊಳ್ಳಬೇಕಿದೆ: ಸುರೇಶ್‌ಅಂಗಡಿ

Update: 2018-01-21 15:38 GMT

ಬೆಳಗಾವಿ, ಜ.21: ಯಾವುದೇ ವಿಶ್ವವಿದ್ಯಾಲಯ ಇಲ್ಲದೆ 12ನೇ ಶತಮಾನದಲ್ಲಿ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರು ಅಪಾರ ಜ್ಞಾನ ಮತ್ತು ಸಮಾಜದ ಬಗೆಗೆ ಉತ್ತಮ ಕಳಕಳಿಯನ್ನು ಹೊಂದಿದ್ದರು ಎಂದು ಸಂಸದ ಸುರೇಶ್ ಅಂಗಡಿ ಹೇಳಿದ್ದಾರೆ.

ರವಿವಾರ ನಗರದ ಕುಮಾರ ಗಂಧರ್ವ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ, ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತ್ಯುತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅಂಬಿಗರ ಚೌಡಯ್ಯನವರ 12ನೇ ಶತಮಾನದ ತತ್ವಾದರ್ಶಗಳನ್ನು ಇಂದು ನಾವೇಲ್ಲರೂ ಅವಲೋಕನ ಮಾಡಿಕೊಂಡು ನಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳಬೇಕಾಗಿದೆ. ಸಮಾಜದಲ್ಲಿ ಇಂದು ನಾವೇಲ್ಲರು ಹಣ ಮತ್ತು ಅಪಾರ ಆಸ್ತಿಯನ್ನು ಗಳಿಸುವಲ್ಲಿ ಮುಂದಾಗಿದ್ದೇವೆ. ಆದರೆ ಶರಣರ ತತ್ವಗಳನ್ನು ಮರೆತು ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಸಮಾಜ ಸುಧಾರಣೆಯಲ್ಲಿ ಮಹಿಳೆಯರ ಪಾತ್ರವು ಅಪಾರವಾಗಿದ್ದು, ಅವರೊಂದಿಗೆ ನಾವೆಲ್ಲರೂ ಕೈ ಜೋಡಿಸಿ ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಶ್ರಮಿಸೋಣ ಎಂದು ಸುರೇಶ್ ಅಂಗಡಿ ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಿಗಿಮಠ ಮಾತನಾಡಿ, ಸಮಾಜದ ಓರೆ-ಕೋರೆಗಳನ್ನು ತಿದ್ದಿದ ಅಂಬಿಗರ ಚೌಡಯ್ಯನವರ 12ನೆ ಶತಮಾನದ ತತ್ವಗಳು ಇಂದಿಗೂ ಪ್ರಸ್ತುತ. ಜಾತಿ ಯಾವುದಾದರೇನು, ನಾವು ಮಾಡುವ ಕಾಯಕ ಉತ್ತಮವಾಗಿರಬೇಕು ಎಂದು ಹೇಳಿದ ಶರಣರು, ನಂಬಿದವರನ್ನು ಎಂದಿಗೂ ಕೈ ಬಿಟ್ಟಿಲ್ಲ ಎಂದರು.

ಕೇವಲ ಸರಕಾರದಿಂದ ಬರುವ ಸೌಲಭ್ಯಗಳಿಗೆ ಜೋತು ಬೀಳದೆ, ಕಷ್ಟಪಟ್ಟು ದುಡಿದು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವಲ್ಲಿ ಗಮನ ಹರಿಸಬೇಕು ಎಂದು ಅವರು ಸಾರ್ವಜನಿಕರಿಗೆ ಮನವಿ ಮಾಡಿದರು.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಎಸ್.ಎಂ.ಗಂಗಾಧರಯ್ಯ ಕಾರ್ಯಕ್ರಮದ ಕುರಿತು ಉಪನ್ಯಾಸ ನೀಡಿದರು. ಬೆಳಗಾ ದಕ್ಷಿಣ ಮತಕ್ಷೇತ್ರದ ಶಾಸಕ ಸಂಭಾಜಿ ಪಾಟೀಲ್, ಅಪರ ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀಶೈಲ ಕರಿಶೆಂಕರಿ, ಬಸವರಾಜ ಸುಣಗಾರ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News