ತುಮಕೂರು : ಬಗೆಹರಿಯದ ಬಿಜೆಪಿ ಬಣಗಳ ನಡುವಿನ ಗೊಂದಲ

Update: 2018-01-21 16:22 GMT

ತುಮಕೂರು,ಜ.21:ಜಿಲ್ಲಾ ಬಿಜೆಪಿಯ ಸೊಗಡು ಶಿವಣ್ಣ ಮತ್ತು ಜಿ.ಎಸ್.ಬಸವರಾಜು ಬಣಗಳ ನಡುವೆ ಇರುವ ಭಿನ್ನಾಭಿಪ್ರಾಯ ವನ್ನು ಬಗೆಹರಿಸಲು ರಾಜ್ಯ ಉಸ್ತುವಾರಿ ಪ್ರಕಾಶ್ ಜಾವೇಡ್ಕರ್ ನಡೆಸಿದ ಪ್ರಯತ್ನಗಳು ವಿಫಲವಾಗಿದ್ದು, ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿದ್ದ ಮಾಜಿ ಸಚಿವ ಎಸ್.ಶಿವಣ್ಣ, ಜಿಲ್ಲಾ ಕಾರ್ಯಕಾರಿಣಿಯಲ್ಲಿ ಭಾಗವಹಿಸದೆ ಗೈರಾಗಿದ್ದು,ಭಿನ್ನಮತ್ತ ಮತ್ತಷ್ಟು ಉಲ್ಬಣಗೊಂಡಿರುವುದಕ್ಕೆ ಸಾಕ್ಷಿಯಾಗಿದೆ.

ತುಮಕೂರಿನಲ್ಲಿ ರವಿವಾರ ಶ್ರೀದೇವಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಆಯೋಜನೆಗೊಂಡಿದ್ದ ಜಿಲ್ಲಾ ಕಾರ್ಯಕಾರಿಣಿ ಸಭೆ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಲು ಜಿಲ್ಲೆಗೆ ಆಗಮಿಸಿದ್ದ ಉಸ್ತುವಾರಿ ಪ್ರಕಾಶ್ ಜಾವೇಡ್ಕರ್,ನಗರದ ಪ್ರವಾಸಿ ಮಂದಿರಕ್ಕೆ ಮಾಜಿ ಸಚಿವ ಎಸ್.ಶಿವಣ್ಣ, ಶಾಸಕ ಬಿ.ಸುರೇಶಗೌಡ ಹಾಗೂ ಮಾಜಿ ಸಂಸದ ಜಿ.ಎಸ್.ಬಸವರಾಜು,ಜಿಲ್ಲಾಧ್ಯಕ್ಷ ಜೋತಿಗಣೇಶ್ ಅವರನ್ನು ಕರೆಯಿಸಿಕೊಂಡು ಇರುವ ಭಿನ್ನಾಭಿಪ್ರಾಯ ಬಗೆಹರಿಸಲು ಪ್ರಯತ್ನಿಸಿದ್ದರು.ಈ ವೇಳೆ ಪಕ್ಷದಲ್ಲಿರುವ ಭಿನ್ನಾಭಿಪ್ರಾಯ ಕುರಿತು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದಂತೆ ತಾಕೀತು ಮಾಡಿದರು ಎನ್ನಲಾಗಿದೆ.

ತುಮಕೂರು ಸೇರಿದಂತೆ 11 ಜಿಲ್ಲೆಗಳಲ್ಲಿ ಕಾರ್ಯಕರ್ತರನ್ನು ಒಗ್ಗೂಡಿಸಿ ಪಕ್ಷವನ್ನು ಬಲಗೊಳಿಸಿ,ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಇಬ್ಬರು ನಾಯಕರಿಗೆ ಹಲವು ಸಲಹೆ, ಸೂಚನೆಗಳನ್ನು ನೀಡಿದ ಅವರು, ಬಣಗಳಾಗಿ ಒಡೆಯಬೇಡಿ, ಗುಂಪುಗಾರಿಕೆ ಮಾಡಬೇಡಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಕೆಟ್ಟ ಹೆಸರು ತರಬೇಡಿ.ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿ ಪಕ್ಷ ಅಧಿಕಾರಕ್ಕೆ ಬರುವಂತೆ ಮಾಡಿ ಎಂದು ಕಟ್ಟು ನಿಟ್ಟಿನ ಎಚ್ಚರಿಕೆ ನೀಡಿದರು ಎಂದು ತಿಳಿದು ಬಂದಿದೆ.

ಈ ವೇಳೆ ಸೊಗಡು ಶಿವಣ್ಣ ಬಣಕ್ಕೆ ಸೇರಿದ ಕೆ.ಪಿ.ಮಹೇಶ್ ಮತ್ತಿತತರು ಪ್ರಕಾಶ್ ಜಾವೇಡ್ಕರ್ ಅವರಿಗೆ ಮೂಲ ಬಿಜೆಪಿ ಕಾರ್ಯಕರ್ತರಿಗೆ ಜಿಲ್ಲೆಯ ಕಾರ್ಯಕಾರಿಣಿಯಲ್ಲಿ,ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುವಂತೆ ಮನವಿಯೊಂದನ್ನು ಸಲ್ಲಿಸಿದ್ದು, ಮನವಿ ಪತ್ರ ಮಾಧ್ಯಮಗಳಿಗೆ ಲಭ್ಯವಾಗಿದೆ.

ರಹಸ್ಯ ಸಭೆಯ ನಂತರ ಹೊರಬಂದ ಜಾವೇಡ್ಕರ್ ಮಾಧ್ಯಮಗಳೊಂದಿಗೆ ಮಾತನಾಡಲು ನಿರಾಕರಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News