ಚುಂಚನಗಿರಿಯನ್ನು ಭೂಕೈಲಾಸವಾಗಿಸಿದ ಚುಂಚಶ್ರೀ : ಎಸ್.ಎಂ.ಶಂಕರ್

Update: 2018-01-21 16:37 GMT

ಮದ್ದೂರು, ಜ.21: ಚುಂಚನಗಿರಿ ಕ್ಷೇತ್ರವನ್ನು ಭೂಕೈಲಾಸವಾಗಿಸಿದ ಹಿರಿಮೆ ಲಿಂಗೈಕ್ಯ ಡಾ.ಶ್ರೀಬಾಲಗಂಗಾಧರನಾಥ ಸ್ವಾಮೀಜಿಗಳದ್ದು ಎಂದು ವಿಧಾನಪರಿಷತ್ ಮಾಜಿ ಸದಸ್ಯ ಎಸ್.ಎಂ.ಶಂಕರ್ ಬಣ್ಣಿಸಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ಚುಂಚಶ್ರೀ ಗೆಳೆಯರ ಬಳಗ ಹಾಗೂ  ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಸಂಘ ರವಿವಾರ ಆಯೋಜಿಸಿದ್ದ ಬಾಲಗಂಗಾಧರನಾಥ ಸ್ವಾಮೀಜಿ ಅವರ 74ನೇ ಜಯಂತ್ಯುತ್ಸವ ಹಾಗೂ ಬಿಜಿಎಸ್ ವೈದ್ಯ ಶ್ರೀ ಸೇವಾರತ್ನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಾಮಾನ್ಯ ಕ್ಷೇತ್ರವಾಗಿದ್ದ ಆದಿಚುಂಚನಗಿರಿಯನ್ನು ಹಳ್ಳಿಹಳ್ಳಿಗಳಲ್ಲಿ ಧಾನ್ಯ ಸಂಗ್ರಹದಿಂದ ಪ್ರಾರಂಭಿಸಿ ಅಮೇರಿಕಾದಲ್ಲಿನ ಭಕ್ತರವರೆಗೂ ಅವರವರ ಶಕ್ತಾನುಸಾರ ಕಾಣಿಕೆ ಸಂಗ್ರಹಿಸಿ ಶಿಕ್ಷಣ, ಆರೋಗ್ಯ ಹಾಗೂ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಶ್ರೀಗಳು ಮಾಡಿದ ಸಾಧನೆ ಅಪಾರವಾದುದು ಎಂದು ಅವರು ಸ್ಮರಿಸಿದರು.

ಡಾ.ನಿರ್ಮಲಾನಂದನಾಥ ಸ್ವಾಮೀಜಿಯವರು ಕೂಡ ಹಿರಿಯ ಶ್ರೀಗಳು ಹಾಕಿಕೊಟ್ಟ ದಾರಿಯಲ್ಲೇ ಸಾಗುತ್ತಿದ್ದಾರೆಂದು ಶ್ಲಾಘಿಸಿದ ಅವರು, ಚುಂಚಶ್ರೀ ಬಳಗ, ಕೆಂಪೇಗೌಡ ಒಕ್ಕಲಿಗರ ಸಂಘವು ಶ್ರೀಗುರುವಿನ ಸ್ಮರಣೆ ಮತ್ತು ಅವರ ಹೆಸರಿನಲ್ಲಿ ಸಾಧಕರನ್ನು ಸನ್ಮಾನಿಸುತ್ತಿರುವುದು ಸ್ವಾಗತಾರ್ಹ ಎಂದರು.
ಅಧ್ಯಕ್ಷತೆವಹಿಸಿದ್ದ ಚುಂಚಶ್ರೀ ಗೆಳೆಯರ ಬಗಳದ ಅಧ್ಯಕ್ಷ ಡಾ.ಬಿ.ಕೃಷ್ಣೇಗೌಡ ಮಾತನಾಡಿ, ಬಾಲಗಂಗಾಧರನಾಥ ಶ್ರೀಗಳು ಹಿಂದುಳಿದ ವರ್ಗಗಳ ಜನರ ಕಲ್ಯಾಣಕ್ಕಾಗಿ ಶ್ರಮಿಸಿದರು. ಪ್ರತಿ ಜನಾಂಗಕ್ಕೂ ಒಬ್ಬ ಸ್ವಾಮೀಜಿಯನ್ನು ನೇಮಿಸಿ ಮಠ ಮಾಡಿಕೊಟ್ಟು ಅವುಗಳ ಸ್ವಾವಲಂಬನೆಗೆ ಕೊಡುಗೆ ನೀಡಿದರು ಎಂದರು.

ಇದೇ ವೇಳೆ ಖ್ಯಾತ ವೈದ್ಯ ಡಾ.ವಿ.ಎಲ್.ನಂದೀಶ್ ದಂಪತಿಗೆ ಬಿಜಿಎಸ್ ವೈದ್ಯಶ್ರೀ ಸೇವಾರತ್ನ ಪ್ರಶಸ್ತಿಯನ್ನು ಪ್ರದಾನಿಸಿ ಗೌರವಸಾಲಾಯಿತು.
ಮನ್‍ಮುಲ್ ಅಧ್ಯಕ್ಷ ಕದಲೂರು ರಾಮಕೃಷ್ಣ, ಪುರಸಭಾಧ್ಯಕ್ಷೆ ಲತಾ ಬಸವರಾಜು, ಸದಸ್ಯೆ ಭಾಗ್ಯ ಸತೀಶ್, ನಿವೃತ್ತ ಅಧಿಕಾರಿ ಸಿ.ರಾಮಣ್ಣ, ಮುಖ್ಯ ಶಿಕ್ಷಕ ಸಿ.ಎಸ್.ಶಂಕರಯ್ಯ,  ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ವಿ.ಸಿ.ಉಮಾಶಂಕರ್, ತಾಲೂಕು ಅಧ್ಯಕ್ಷ ತಿಪ್ಪೂರು ರಾಜೇಶ್, ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಸಂಘದ ತಾಲೂಕು ಅಧ್ಯಕ್ಷ ಸಿದ್ದೇಗೌಡ, ಪದಾಧಿಕಾರಿಗಳಾದ ಸಿ.ಸುರೇಶ್, ಲಕ್ಷ್ಮಮ್ಮ, ವಿ.ಟಿ.ರವಿಕುಮಾರ್, ಎಸ್.ಚಂದ್ರು. ದೊರೆಸ್ವಾಮಿ, ಗುರುಲಿಂಗಯ್ಯ, ಕೆ.ಶಿವಕುಮಾರ್ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News