ಮದ್ದೂರು : ಚೀಟಿ ಹಣ ಕೊಡಿಸಲು ಒತ್ತಾಯಿಸಿ ಗ್ರಾಮಸ್ಥರ ಧರಣಿ

Update: 2018-01-21 16:38 GMT

ಮದ್ದೂರು, ಜ.21: ಚೀಟಿ ವ್ಯವಹಾರದಲ್ಲಿ 1.50 ಕೋಟಿ ರೂ. ಅವ್ಯಹಾರ ನಡೆಸಿ ಗ್ರಾಮದಿಂದ ಪರಾರಿಯಾಗಿರುವ ರಾಜು ಎಂಬುವರನ್ನು ಪತ್ತೆಹಚ್ಚಿ, ಚೀಟಿ ಹಣ ಕೊಡಿಸುವಂತೆ ಒತ್ತಾಯಿಸಿ ತಾಲೂಕಿನ ಮಲ್ಲನಕುಪ್ಪೆ ಗ್ರಾಮಸ್ಥರು ರವಿವಾರ ಕೆಸ್ತೂರು ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು.

20 ವರ್ಷಗಳಿಂದ ಕೇಬಲ್ ರಾಜು ಅವರು ಗ್ರಾಮದಲ್ಲಿ ಎಲೆಕ್ಟ್ರೀಕಲ್ ಹಾಗೂ ಕೇಬಲ್ ಕೆಲಸದ ಜತೆಗೆ ಚೀಟಿ ಹಾಗೂ ಲೇವಾದೇವಿ ಮಾಡುತ್ತಿದ್ದರು. ಇತ್ತೀಚಿಗೆ ಚೀಟಿ ವ್ಯವಹಾರ ನಷ್ಟವಾಗಿತ್ತು. 270 ಮಂದಿ ಚೀಟಿದಾರದಲ್ಲಿ 100 ಮಂದಿಗೆ ಮಾತ್ರ ಚೀಟಿ ಹಣ ನೀಡಿ, 170 ಮಂದಿ ಚೀಟಿ ಹಣ ನೀಡದೆ ಗ್ರಾಮದಲ್ಲಿದ್ದ ಮನೆಯನ್ನು ಬೇರೆಯವರಿಗೆ ಮಾರಿ ಕುಟುಂಬ ಸಮೇತವಾಗಿ ಪರಾರಿಯಾಗಿದ್ದಾರೆ ಎಂದು ಅವರು ಹೇಳಿದರು.

ಅಶೋಕ್ ಎಂಬುವರು ರಾಜು ಅವರ ಮನೆಯನ್ನು ನಾನು ತೆಗೆದುಕೊಂಡು ಆ ಹಣದಲ್ಲಿ ನಿಮಗೆ ಚೀಟಿ ಹಣ ನೀಡುತ್ತೇನೆ ಎಂದು ಹೇಳಿದ್ದರು. ಆದರೆ, ಅವರು ರಾತ್ರೋರಾತ್ರಿ ರಾಜು ಅವರಿಂದ ಮನೆಯನ್ನು ಬರೆಸಿಕೊಂಡು, ನಮಗೂ ಹಣ ಕೊಡದೆ ಮೋಸಮಾಡಿದ್ದಾರೆ ಎಂದು ಅವರು ಆರೋಪಿಸಿದರು.

ಮನೆಯನ್ನು ಅಶೋಕ್ ಅವರ ಹೆಸರಿಗೆ ರಿಜಿಸ್ಟರ್ ಮಾಡದೆ ಬಹಿರಂಗ ಹರಾಜು ಹಾಕಿ ಹಣ ಕೊಡಿಸಬೇಕೆಂದು ಒತ್ತಾಯಿಸಿ ಪಿಎಸ್‍ಐ ಮಂಚೇಗೌಡ ಅವರಿಗೆ ಮನವಿ ಸಲ್ಲಿಸಿದರು.

ಸಂತೋಷ್, ಶಿವಲಿಂಗಯ್ಯ, ಪುಟ್ಟತಾಯಮ್ಮ, ಇಂದ್ರಮ್ಮ, ರೇಣುಕಾ, ಮಹಾದೇವು, ತಮ್ಮಣ್ಣ, ಮರಿಯಪ್ಪ, ಮಹದೇವಣ್ಣ, ವೆಂಕಟೇಶ್, ಇತರರು ಪ್ರತಿಭಟನೆಯ ನೇತೃತ್ವವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News