ಮಹಿಳೆಯರ ಆರೋಗ್ಯ ರಕ್ಷೆಗೆ ವಿಶೇಷ ಶಿಬಿರ: ಅನಂತ್ ಕುಮಾರ್

Update: 2018-01-21 16:49 GMT

ಬೆಂಗಳೂರು, ಜ.21: ಇಂದಿನ ಜೀವನದಲ್ಲಿ ಮಹಿಳೆಯರು ತಮ್ಮ ಮನೆಯಲ್ಲಿರುವ ಸದಸ್ಯರ ಆರೋಗ್ಯದ ಬಗ್ಗೆ ಗಮನ ನೀಡುತ್ತಾರೆ. ಆದರೆ, ತಮ್ಮ ವೈಯುಕ್ತಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದಿಲ್ಲ. ಅಂತಹ ಎಲ್ಲ ಮಹಿಳೆಯರಿಗಾಗಿ ಈ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸಲಾಗಿದೆ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೇಳಿದ್ದಾರೆ.

ರವಿವಾರ ಗಿರಿನಗರದ ವಿಜಯಭಾರತಿ ಶಾಲೆಯಲ್ಲಿ ಬೆಂಗಳೂರು ದಕ್ಷಿಣದ ನಿವಾಸಿಗಳ ಸಮಗ್ರ ಆರೋಗ್ಯ ರಕ್ಷಣೆಗಾಗಿ ರೂಪಿಸಿರುವ ಆರೋಗ್ಯಚೇತನದ ಮೊದಲ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈ ಆರೋಗ್ಯ ಚೇತನ ಸೇವೆಯನ್ನು ಬೆಂಗಳೂರು ದಕ್ಷಿಣ ಕ್ಷೇತ್ರದ ಎಲ್ಲಾ ಬಡಾವಣೆಗಳಲ್ಲೂ ಆಯೋಜಿಸಲಾಗುವುದು. ಇದರಿಂದಾಗಿ, ಈ ಭಾಗದ ಎಲ್ಲ ಮಹಿಳೆಯರು ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಕೊಳ್ಳಲು ಅನುಕೂಲವಾಗುತ್ತದೆ ಎಂದು ಅನಂತಕುಮಾರ್ ಹೇಳಿದರು.

1974ರಲ್ಲಿ ತಮ್ಮ ತಾಯಿ ಗಿರಿಜಾ ಶಾಸ್ತ್ರಿಯವರಿಗೆ ಕ್ಯಾನ್ಸರ್‌ರೋಗ ಬಂದು ಅದರ ಚಿಕಿತ್ಸೆಗಾಗಿ ಪ್ರತಿದಿನ ನೋಲ್ವೊಡೆಕ್ಸ್ ಎಂಬ ಮಾತ್ರೆ ಕೊಡುತ್ತಿದ್ದರು. ಆ ಒಂದು ಮಾತ್ರೆಯ ಬೆಲೆ 20 ರೂ.ಗಳು, ಒಂದು ದಿನಕ್ಕೆ 2 ಬಾರಿ ಅಂದರೆ ಪ್ರತಿದಿನ 40 ರೂ., ಒಂದು ತಿಂಗಳಿಗೆ 1200ರೂ.ಖರ್ಚಾಗುತ್ತಿತ್ತು ಎಂದು ಅವರು ಹೇಳಿದರು.

ಆ ಕಾಲದಲ್ಲಿ ತಂದೆಯವರಿಗೆ ಪ್ರತಿ ತಿಂಗಳ ವೇತನ 1200ರೂ. ಅದರಲ್ಲಿ ಮನೆಯ ಖರ್ಚನ್ನು ನಿರ್ವಹಿಸುವುದೋ, ತಾಯಿಯವರ ಮಾತ್ರೆಗೆ ಖರ್ಚು ಮಾಡುವುದೋ ಎಂಬ ಚಿಂತೆಯಲ್ಲಿ ಇಡೀ ಕುಟುಂಬ ಇರುತ್ತಿತ್ತು. ಇಂತಹ ಹಲವು ಕುಟುಂಬಗಳು ಇಂದಿಗೂ ಇವೆ. ಅವರೆಲ್ಲರಿಗೂ ಇಂತಹ ಕಷ್ಟದ ಸ್ಥಿತಿ ಬಾರದಿರಲೆಂದು ನಮ್ಮ ಸರಕಾರದಲ್ಲಿ ಜನೌಷಧಿ ಮಳಿಗೆಗಳನ್ನು ತೆರೆದಿದ್ದೇವೆ ಎಂದು ಅನಂತ್ ಕುಮಾರ್ ಭಾವುಕರಾಗಿ ನುಡಿದರು.
ಕಳೆದ 3 ವರ್ಷಗಳ ಹಿಂದೆ ಕೇವಲ 99 ಇದ್ದ ಜನೌಷಧಿ ಮಳಿಗೆಗಳ ಸಂಖ್ಯೆ ಮೋದಿ ಸರಕಾರ ಬಂದ ಮೇಲೆ ಮೂರುವರೆ ವರ್ಷಗಳಲ್ಲಿ 3 ಸಾವಿರಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗಿದೆ ಎಂದು ಅವರು ಹೇಳಿದರು.

ಇದೇ ಸಂದರ್ಭದಲ್ಲಿ ಶ್ರೀ ಶಂಕರ ಕ್ಯಾನ್ಸರ್ ಸಂಸ್ಥೆಯ ಮುಖ್ಯಸ್ಥ ಡಾ.ಶ್ರೀನಾಥ, ಅದಮ್ಯ ಚೇತನದ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್, ಶಾಸಕ ರವಿ ಸುಬ್ರಮಣ್ಯ, ಬಿಬಿಎಂಪಿ ಸದಸ್ಯೆ ನಂದಿನಿ ವಿಜಯವಿಠ್ಠಲ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News