ಗುಂಡ್ಲುಪೇಟೆಯಲ್ಲಿ ಯಡಿಯೂರಪ್ಪ ನೇತೃತ್ವದ ಕರ್ನಾಟಕ ಪರಿವರ್ತನಾ ಯಾತ್ರೆ

Update: 2018-01-21 17:27 GMT

ಗುಂಡ್ಲುಪೇಟೆ,ಜ.21: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ನಡೆಯುತ್ತಿರುವ ಬಿಜೆಪಿಯ ನವ ಕರ್ನಾಟಕ ಪರಿವರ್ತನಾ ಯಾತ್ರೆ ಗಡಿ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ಅದ್ದೂರಿಯಾಗಿ ನಡೆಯಿತು.

ಗುಂಡ್ಲುಪೇಟೆ ಪಟ್ಟಣದ ದಿ. ಡಿ.ದೇವರಾಜ್ ಅರಸ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ನವಕರ್ನಾಟಕ ಪರಿವರ್ತನಾ ಯಾತ್ರೆಯ ಕಾರ್ಯಕ್ರಮವು ರವಿವಾರ ರಾತ್ರಿ ನಡೆಯಿತು.

ಚಾಮರಾಜನಗರ ಜಿಲ್ಲಾ ಕೇಂದ್ರದಿಂದ ತೆರಕಣಾಂಬಿ ಮಾರ್ಗವಾಗಿ ಗುಂಡ್ಲುಪೇಟೆಗೆ ಆಗಮಿಸಿದ ಪರಿವರ್ತನಾ ಯಾತ್ರೆಗೆ ಸಾರ್ವಜನಿಕರಿಂದ ಭವ್ಯವಾದ ಸ್ವಾಗತ ಸಿಕ್ಕಿದ್ದು ಗಮನಾರ್ಹವಾಗಿತ್ತು. 

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಯಡಿಯೂರಪ್ಪ ಕಳೆದ ಆರೇಳು ತಿಂಗಳ ಹಿಂದೆ ರಾಜ್ಯದಲ್ಲಿ ನಡೆದ ಗುಂಡ್ಲುಪೇಟೆ ಮತ್ತು ನಂಜನಗೂಡು ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಸೋತಿದ್ದಾರೆ ಇದಕ್ಕೆ ರಾಜ್ಯ ಸರ್ಕಾರದ ಸಚಿವರಾದ ಡಿ.ಕೆ. ಶಿವಕುಮಾರ್ ರವರ ಕುತಂತ್ರ ರಾಜಕಾರಣವೇ ಕಾರಣ ಎಂದು ಆರೋಪಿಸಿದರು.

ಸಿದ್ದರಾಮಯ್ಯರವರೇ ನಿಮ್ಮ ದರ್ಪ ಇನ್ನು ಮುಂದೆ ನಡೆಯದು, ರಾಜ್ಯದ ಮತದಾರರು ಜಾಗೃತರಾಗಿದ್ದಾರೆ ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಚುನಾವಣೆ ವೇಳೆ ನಿಮ್ಮ ಸರ್ಕಾರಕ್ಕೆ ತಕ್ಕ ಪಾಠ ಕಲಿಸುತ್ತಾರೆ, ಅಧಿಕಾರದ ಅಮಲಿನಲ್ಲಿ ದುರಂಕಾರ ರಾಜಕಾರಣ ಮಾಡುತ್ತಿರುವ ಸಿದ್ದರಾಮಯ್ಯರವರಿಗೆ ರಾಜ್ಯದ ಅಭಿವೃದ್ದಿ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಿಕೊಡುವ ಬಗ್ಗೆ ಚಿಂತನೆ ಇಲ್ಲ ಎಂದು ದೂರಿದರು.

ಇದೇ ವೇಳೆ ವೇದಿಕೆಯಲ್ಲಿ ಹಾಜರಿದ್ದ ಗುಂಡ್ಲುಪೇಟೆ ಕ್ಷೇತ್ರದ ಅಭ್ಯರ್ಥಿ ಸಿ.ಎಸ್. ನಿರಂಜನ್ ಕುಮಾರ್ ಮಾತನಾಡಿ, ತಾನು ಮೂರು ಭಾರಿ ಗುಂಡ್ಲುಪೇಟೆ ಕ್ಷೇತ್ರದಲ್ಲಿ ನಡೆದ ಚುನಾವಣೆಯಲ್ಲಿ ಸ್ಪರ್ದೆ ಮಾಡಿ ಸೋತಿದ್ದೇನೆ, ಆದರೂ ದೃತಿಗೆಡದೆ ಇದ್ದೇನೆ ಈ ಭಾರಿ ನಡೆಯುವ ಚುನಾವಣೆಯಲ್ಲಿ ಕ್ಷೇತ್ರದ ಮತದಾರರು ತಮ್ಮನ್ನು ಬೆಂಬಲಿಸುತ್ತಾರೆ ಅನ್ನೋ ನಂಬಿಕೆ ಇದೆ ಎಂದು ಹೇಳಿದರು.

ಗುಂಡ್ಲುಪೇಟೆ ತಾಲ್ಲೂಕಿನ ತೆರಕಣಾಂಬಿ ಗ್ರಾಮದಲ್ಲಿ ನಕಲಿ ವೈದ್ಯೆಯಿಂದ ದೃಷ್ಟಿ ಕಳೆದು ಕೊಂಡ ದೀಕ್ಷಿತ ತನ್ನ ತಾಯಿಯೊಂದಿಗೆ ಆಗಮಿಸಿ ಯಡಿಯೂರಪ್ಪರವರಿಗೆ ಮನವಿ ಪತ್ರ ಸಲ್ಲಿಸಿ ದೀಕ್ಷಿತಾಳಿಗೆ ದೃಷ್ಟಿ ಬರುವಂತೆ ವೈದ್ಯಕೀಯ ಚಿಕಿತ್ಸೆಗೆ ನೆರವು ಕೋರಿ , ಈ ಘಟನೆಗೆ ಕಾರಣರಾದ ನಕಲಿ ವೈದ್ಯರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಸೂಚನೆ ನೀಡುವಂತೆ ಮನವಿ ಪತ್ರ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ, ಮಾಜಿ ಸಂಸದೆ ತೇಜಸ್ವಿನಿ, ಶಿವಣ್ಣ ಸೇರಿದಂತೆ ಹಲವಾರು ಗಣ್ಯರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News