ಪರಿಶ್ರಮದಿಂದ ಮಾತ್ರ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧ್ಯ : ಜಿಲ್ಲಾಧಿಕಾರಿ ಸಲಹೆ

Update: 2018-01-21 17:42 GMT

ಮಡಿಕೇರಿ,ಜ.21 : ಆತ್ಮವಿಶ್ವಾದ ಜೊತೆಗೆ ನಿರಂತರ ಪರಿಶ್ರಮದಿಂದ ಮಾತ್ರ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದು ಜಿಲ್ಲಾಧಿಕಾರಿ ಶ್ರೀ ವಿದ್ಯಾ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ಪ್ರಬುದ್ಧ ನೌಕರರ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ನಗರದ ಜೂನಿಯರ್ ಕಾಲೇಜು ಆವರಣದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಸಭಾಂಗಣದಲ್ಲಿ "ಸ್ಪರ್ಧಾತ್ಮಕ ಪರೀಕ್ಷೆಯ ಪೂರ್ವಭಾವಿ ಸಿದ್ಧತೆ ಕುರಿತು ದಲಿತ ವಿದ್ಯಾರ್ಥಿಗಳಿಗಾಗಿ ನಡೆದ ಕಾರ್ಯಗಾರವನ್ನು ಉದ್ಘಾಟಿಸಿ ಜಿಲ್ಲಾಧಿಕಾರಿ ಮಾತನಾಡಿದರು.

ವಿದ್ಯಾರ್ಥಿಗಳು ಪರೀಕ್ಷೆಗಳ ಕುರಿತು ಹೆಚ್ಚು ಆಸಕ್ತಿಯನ್ನು ಹೊಂದಿರುತ್ತಾರೆ. ಆದರೆ ಹೆಚ್ಚಿನ ಅಭ್ಯರ್ಥಿಗಳಿಗೆ ಪರೀಕ್ಷೆಗಳ ಬಗ್ಗೆ ಗೊಂದಲಗಳಿರುತ್ತದೆ. ಇದನ್ನು ನಿವಾರಿಸಿಕೊಳ್ಳುವ ಕಾರ್ಯ ಮೊದಲು ಆಗಬೇಕೆಂದರು. ವಿವಿಧ ಕೋರ್ಸ್‍ಗಳು ಲಭ್ಯವಿದೆಯಾದರೂ ವಿದ್ಯಾರ್ಥಿಗಳು ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸುವ ಆತ್ಮಾವಿಶ್ವಾಸವನ್ನು ಹೊಂದಿರಬೇಕು ಎಂದು ತಿಳಿಸಿದರು.

ನಾಗರಿಕ ಸೇವಾ ಪರೀಕ್ಷೆ ಮೂಲಕ ಉನ್ನತ ಹುದ್ದೆಯನ್ನು ಅಲಂಕರಿಸಬಹುದು. ಅಲ್ಲದೆ  ನಾಯಕತ್ವದ ಗುಣವನ್ನು ಬೆಳೆಸಿಕೊಂಡು  ಸಾರ್ವಜನಿಕರೊಂದಿಗೆ  ನಿರಂತರ ಸಂಪರ್ಕ ಹೊಂದಿ ಜನ ಸಾಮಾನ್ಯರ ಸೇವೆ ಮಾಡಬಹುದಾಗಿದೆ ಎಂದರು.

ಇತರರ ಮಾತಿಗೆ ಕಿವಿಗೊಡದೆ ತಮ್ಮ ಆಸಕ್ತಿಯ ವಿಷಯವನ್ನು ಆಯ್ಕೆಮಾಡಿಕೊಂಡು  ಪರಿಪೂರ್ಣ ಮಾಹಿತಿಯನ್ನು ಹೊಂದಬೇಕು. ಹಳೆ ಮಾದರಿ ಪ್ರಶ್ನೆ ಪತ್ರಿಕೆ, ಪುಸ್ತಕಗಳು, ದಿನಪತ್ರಿಕೆಗಳನ್ನು ನಿರಂತರವಾಗಿ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಒಂದು ವಿಷಯದ ಬಗ್ಗೆ  ನಿರಂತರವಾಗಿ  ಗಮನಹರಿಸಿದ್ದಲ್ಲಿ  ಸ್ಪರ್ಧಾತ್ಮಕ ಪರಿಕ್ಷೇಗಳಲ್ಲಿ ಸುಲಭವಾಗಿ  ಯಶಸ್ಸನ್ನು  ಸಾಧಿಸಲು ಸಾಧ್ಯ ಎಂದು  ಜಿಲ್ಲಾಧಿಕಾರಿ ವಿದ್ಯಾರ್ಥಿಗಳಿಗೆ  ಸಲಹೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್ ಮಾತನಾಡಿ, ಜೀವನದಲ್ಲಿ  ಪ್ರತಿಯೊಬ್ಬರಿಗೂ ಮಹತ್ವದ್ದನ್ನು ಸಾಧಿಸುವ ಕನಸಿರುತ್ತದೆ. ಆದರೆ ಹೆಚ್ಚಿನ ಮಂದಿ ಇದು ತಮ್ಮಿಂದ ಸಾಧ್ಯವಿಲ್ಲ ಎಂಬ ನಕಾರಾತ್ಮಕ ಭಾವನೆಯನ್ನು  ಹೊಂದಿರುತ್ತಾರೆ. ವಿದ್ಯಾರ್ಥಿಗಳು ಇಂತಹ ನಕಾರಾತ್ಮಕ ಭಾವನೆಯನ್ನು ತೊಡೆದು ಹಾಕಿ ಸಕಾರಾತ್ಮಕ ಭಾವನೆಯನ್ನು ಬೆಳೆಸಿಕೊಂಡು ಸ್ವಯಂ ಪ್ರೇರಣೆಯಿಂದ  ಓದಿನ ಬಗ್ಗೆ  ಗಮನ ಹರಿಸಬೇಕು ಎಂದು  ಹೇಳಿದರು.

ಉತ್ತಮ ಬದುಕನ್ನು ರೂಪಿಸಿಕೊಳ್ಳುವ ನಂಬಿಕೆ ಇದ್ದಲ್ಲಿ ಯಾವುದೇ ಕ್ಷೇತ್ರದಲ್ಲಿ ಯಶಸ್ಸು  ಸಾಧಿಸಲು ಸಾಧ್ಯ.  ಪ್ರತಿ  ವಿಷಯದಲ್ಲೂ  ಆಳವಾದ ಜ್ಞಾನ,  ನಮ್ಮ  ಸ್ಥಳೀಯ ವಿದ್ಯಾಮಾನಗಳ ಬಗ್ಗೆ  ಮಾಹಿತಿ ಹಾಗೂ ಪ್ರಚಲಿತ ಘಟನೆಗಳ ಬಗ್ಗೆ ತಿಳುವಳಿಕೆ ಇದ್ದಲ್ಲಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ಸರಳವಾಗಿ ಗೆಲುವು ಸಾಧಿಸಲು ಸಾಧ್ಯ ಎಂದರು.

ಪರೀಕ್ಷೆ ಬರೆಯಲು ತರಬೇತಿ ಅನಿವಾರ್ಯವಲ್ಲ. ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಇಂದು ಅಂತರ್‍ಜಾಲದಲ್ಲೂ  ಹೆಚ್ಚಿನ ಮಾಹಿತಿ ಲಭ್ಯ. ಇಂತಹ ಅವಕಾಶವನ್ನು ವಿದ್ಯಾರ್ಥಿಗಳು ಸೂಕ್ತ ರೀತಿಯಲ್ಲಿ  ಬಳಸಿಕೊಳ್ಳಬೇಕು.    ಯುವಜನತೆ ಸಮಾಜಿಕ ಜಾಲತಾಣಗಳ ಮೊರೆ ಹೋಗುತ್ತಿದ್ದು,  ಮಾಹಿತಿ ವಿನಿಮಯ, ಓದು ಕಡಿಮೆಯಾಗುತ್ತಿದೆ.  ಮೊಬೈಲ್ ಎಂಬ ಸಾಧನದಿಂದ ಇತ್ತೀಚಿನ ಪೀಳಿಗೆಗಳು ಸಂಪೂರ್ಣ ಮುಳುಗಿದ್ದು,  ಸಂವಹನ  ಪ್ರಕ್ರಿಯೆ  ಕಡಿಮೆಯಾಗಿದೆ ಎಂದು  ವಿಷಾಧಿಸಿದ ಎಸ್‍ಪಿ ರಾಜೇಂಧ್ರ ಪ್ರಸಾದ್  ನಿರಂತರ ಓದಿನಿಂದ ಮಾತ್ರ  ಯಶಸ್ಸು ಸಾಧ್ಯ ಎಂದರು.   

ಐಎಎಸ್, ಐಪಿಎಸ್ ಅಧಿಕಾರಿಗಳು ಸಮಾಜಕ್ಕೆ ಸೇವೆ ನೀಡುವ ನಿಟ್ಟಿನಲ್ಲಿ  ಕೆಲಸ ನಿರ್ವಹಿಸಬೇಕು. ನಾಗರಿಕ ಸೇವೆ ಮಾಡುವ ಅಭಿಲಾಷೆಯಿಂದ ಕ್ಷೇತ್ರಕ್ಕೆ ಆಗಮಿಸಿದವರು ಸಮಾಜದ ಕಣ್ಣಾಗಿ ಕೆಲಸ ನಿರ್ವಹಿಸಿದ್ದಲ್ಲಿ  ಮಾತ್ರ  ಉತ್ತಮ ಅಧಿಕಾರಿಗಳಾಗಲು  ಸಾಧ್ಯ ಎಂದು  ಕಿವಿ ಮಾತು ಹೇಳಿದರು.

ಇದೇ ಸಂದರ್ಭ ನಾಗರಿಕ ಸೇವಾ ಪರೀಕ್ಷೆ ಕುರಿತು ಜಿಲ್ಲಾಧಿಕಾರಿ ಶ್ರೀವಿದ್ಯಾ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್  ಸಮಗ್ರ ಮಾಹಿತಿ ನೀಡಿ, ಪರೀಕ್ಷೆಯ ವಿವಿಧ ಆಯಾಮಗಳ ಕುರಿತು ವಿದ್ಯಾರ್ಥಿಗಳೊಂದಿಗೆ  ಚರ್ಚೆ ನಡೆಸಿದರು.
ಜಿಲ್ಲಾ ಆಸ್ಪತ್ರೆಯ ಉಪ ಮುಖ್ಯ ವೈದ್ಯಾಧಿಕಾರಿ ಡಾ.ಹೆಚ್.ವಿ.ದೇವದಾಸ್,  ಡಾ.ಸತೀಶ್, ದಲಿತ  ಸಂಘರ್ಷ  ಸಮಿತಿಯ  ವಿಭಾಗೀಯ ಸಂಚಾಲಕ  

ಎನ್.ವೀರಭದ್ರಯ್ಯ, ಜಿಲ್ಲಾ ಸಂಚಾಲಕ ಹೆಚ್.ಎಲ್.ದಿವಾಕರ್ ಮತ್ತಿತರರು  ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News