×
Ad

ಕಾಡಾನೆ ದಾಳಿಗೆ ಬೆಳೆಗಾರ ಬಲಿ: ಅರಣ್ಯ ಇಲಾಖೆ ವಿರುದ್ಧ ಸಾರ್ವಜನಿಕರ ಆಕ್ರೋಶ, ಸ್ವಯಂ ಪ್ರೇರಿತ ಬಂದ್

Update: 2018-01-22 20:33 IST

ಮಡಿಕೇರಿ, ಜ.22 : ಕಾಡಾನೆ ದಾಳಿಗೆ ವ್ಯಕ್ತಿಯೊರ್ವರು ಬಲಿಯಾದ ಘಟನೆ ಸಿದ್ದಾಪುರದ ಕರಡಿಗೋಡುವಿನಲ್ಲಿ ನಡೆದಿದೆ.

ಕರಡಿಗೋಡು ಗ್ರಾಮದ ನಿವಾಸಿ ಬೆಳೆಗಾರ ಕುಕ್ಕುನೂರು ಮೋಹನ್ ದಾಸ್ (68) ಎಂಬುವವರೇ ಮೃತ ವ್ಯಕ್ತಿ. ಕರಡಿಗೋಡುವಿನಲ್ಲಿರುವ ತನ್ನ ಕಾಫಿ ತೋಟದಲ್ಲಿ ಕಾರ್ಮಿಕರನ್ನು ಬಿಟ್ಟು ಮಧ್ಯಾಹ್ನ ಮನೆಗೆ ಊಟಕ್ಕೆ ತೆರಳುತ್ತಿದ್ದ ಸಂದರ್ಭ ಏಕಾಏಕಿ ಕಾಡಾನೆ ಹಿಂಡು ದಾಳಿ ನಡೆಸಿದ ಪರಿಣಾಮ ಮೋಹನ್ ದಾಸ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರು ಪತ್ನಿ ಹಾಗೂ ಮೂವರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. 

ವಿರಾಜಪೇಟೆ ಶಾಸಕರಾದ ಕೆ.ಜಿ.ಬೋಪಯ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಶಿವು ಮಾದಪ್ಪ, ಜೆಡಿಎಸ್ ಅಧ್ಯಕ್ಷರಾದ ಸಂಕೇತ್ ಪೂವಯ್ಯ, ಡಿ.ಎಫ್.ಓ ಮರಿಯಾ ಕ್ರಿಸ್ತರಾಜ್, ಎ.ಸಿ.ಎಫ್ ರೋಶಿನಿ ಸೇರಿದಂತೆ ಇತರ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಸ್ವಯಂ ಪ್ರೇರಿತ ಬಂದ್

ಕಾಡಾನೆ ಹಾವಳಿ ತಡೆಗೆ ಶಾಶ್ವತ ಪರಿಹಾರ ಸೂಚಿಸಬೇಕೆಂದು ಆಗ್ರಹಿಸಿ ಸಿದ್ದಾಪುರದಲ್ಲಿ ಸ್ವಯಂ ಪ್ರೇರಿತ ಬಂದ್ ನಡೆಸಿದ ವಿವಿಧ ಕಾರ್ಮಿಕ ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳು ಸರಕಾರದ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿದವು. 

ಜೆಡಿಎಸ್ ಅಧ್ಯಕ್ಷ ಸಂಕೇತ್ ಪೂವಯ್ಯ ಮಾತನಾಡಿ, ವನ್ಯಜೀವಿ ಉಪಟಳದ ಬಗ್ಗೆ ಹಲವು ಬಾರಿ ಅರಣ್ಯ ಸಚಿವರಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಸ್ಪಂದನೆ ದೊರೆತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಚಿವರು ಶೀಘ್ರ ಜಿಲ್ಲೆಗೆ ಭೇಟಿ ನೀಡಿ ಈ ಗಂಭೀರ ಸಮಸ್ಯೆಯ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಕೊಡಗು ಬಂದ್‍ಗೆ ಕರೆ ನೀಡುವುದಾಗಿ ಎಚ್ಚರಿಕೆ ನೀಡಿದರು. ಆನೆ ದಾಳಿಯಿಂದ ಬಲಿಯಾದವರಿಗೆ ಕೇವಲ 5 ಲಕ್ಷ ರೂ.ಗಳ ಚೆಕ್‍ನ್ನು ನೀಡಿ ಕೈತೊಳೆದುಕೊಳ್ಳುತ್ತಿದೆ. ಮೋಹನ್ ದಾಸ್ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡಬೇಕೆಂದು ಸಂಕೇತ್ ಪೂವಯ್ಯ ಒತ್ತಾಯಿಸಿದರು.

ಇತ್ತೀಚಿನ ದಿನಗಳಲ್ಲಿ ಸಿದ್ದಾಪುರದ ಸುತ್ತಮುತ್ತ ಕಾಡಾನೆಗಳ ಹಿಂಡು ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿದ್ದು, ರಾತ್ರಿ ಹಗಲೆನ್ನದೆ ರಾಜಾರೋಷವಾಗಿ  ತಿರುಗಾಡುತ್ತಿವೆ. ಇದರಿಂದ ಶಾಲಾ ವಿದ್ಯಾರ್ಥಿಗಳು ಕಾರ್ಮಿಕರು ಹಾಗೂ ಸಾರ್ವಜನಿಕರು ಭಯ ಭೀತರಾಗಿದ್ದಾರೆ ಎಂದು ಸಂಘ, ಸಂಸ್ಥೆಗಳ ಪ್ರಮುಖರು ಸರ್ಕಾರ ಹಾಗೂ ಅರಣ್ಯಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಅರಣ್ಯಾಧಿಕಾರಿಗಳು ಮೃತ ಮೋಹನ್ ದಾಸ್ ಕುಂಟುಂಬಕ್ಕೆ ರೂ.2 ಲಕ್ಷ ಪರಿಹಾರದ ಚೆಕ್‍ನ್ನು ಇದೇ ಸಂದರ್ಭ ವಿತರಿಸಿದರು. ಉಳಿದ ರೂ.3 ಲಕ್ಷವನ್ನು ಬಳಿಕ ನೀಡುವುದಾಗಿ ತಿಳಿಸಿದರು. 

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News