×
Ad

ಅತಿಥಿಗಳ ಸೋಗಿನಲ್ಲಿ ಆಗಮಿಸಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಎಗರಿಸಿದರು!

Update: 2018-01-22 21:02 IST

ಶಿವಮೊಗ್ಗ, ಜ. 22: ಅತಿಥಿಗಳ ಸೋಗಿನಲ್ಲಿ ಕಲ್ಯಾಣ ಮಂಟಪಕ್ಕೆ ಆಗಮಿಸಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಅಪಹರಿಸಿ ಪರಾರಿಯಾಗಿರುವ ಘಟನೆ ನಗರದ ಗಾಂಧಿ ಬಜಾರ್ ರಸ್ತೆಯಲ್ಲಿರುವ ಕಾಳಿಕಾ ಪರಮೇಶ್ವರಿ ಕಲ್ಯಾಣ ಮಂಟಪದಲ್ಲಿ ನಡೆದಿದೆ. 

ಶಿವಮೊಗ್ಗ ನಗರದ ಬಡಾವಣೆಯೊಂದರ ನಿವಾಸಿ ರಾಘವೇಂದ್ರರ ಕುಟುಂಬಿಕರು ಈ ಕಲ್ಯಾಣ ಮಂಟಪದಲ್ಲಿ ವಿವಾಹ ಕಾರ್ಯಕ್ರಮ ಆಯೋಜಿಸಿದ್ದರು. ಈ ವೇಳೆ ಅತಿಥಿಗಳ ಸೋಗಿನಲ್ಲಿ ಆಗಮಿಸಿದ ಕಳ್ಳರು ಅತ್ಯಂತ ಚಾಣಾಕ್ಷತನದಿಂದ ವಧುವಿನ ಕೊಠಡಿಗೆ ತೆರಳಿದ್ದಾರೆ. 

ನಂತರ ಕೊಠಡಿಯಲ್ಲಿಟ್ಟಿದ್ದ ನೆಕ್ಲೆಸ್, ಚಿನ್ನದ ಸರ ಸೇರಿದಂತೆ ಸರಿ ಸುಮಾರು 2.50 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಎಗರಿಸಿ ಪರಾರಿಯಾಗಿದ್ದಾರೆ. ಪರಿಶೀಲನೆಯ ವೇಳೆ ಕಳವು ಕೃತ್ಯ ಬೆಳಕಿಗೆ ಬಂದಿದೆ. ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಘಟನಾ ಸ್ಥಳಕ್ಕೆ ಅಪರಾಧ ವಿಭಾಗದ ಸಬ್ ಇನ್ಸ್ ಪೆಕ್ಟರ್ ಜಗದೀಶ್‍ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪರಿಶೀಲನೆ: ಕಲ್ಯಾಣ ಮಂಟಪದಲ್ಲಿ ಅಳವಡಿಸಲಾಗಿರುವ ಸಿ.ಸಿ ಕ್ಯಾಮರಾದ ದೃಶ್ಯಾವಳಿಗಳನ್ನು ಪೊಲೀಸರು ಸಂಗ್ರಹಿಸಿ, ಪರಿಶೀಲನೆ ನಡೆಸುತ್ತಿದ್ದಾರೆ. ಕಳ್ಳರ ಬಗ್ಗೆ ಸುಳಿವು ಲಭ್ಯವಾಗಿದೆ ಎನ್ನಲಾಗಿದ್ದು, ಇದರ ಆಧಾರದ ಮೇಲೆ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News