ಶಿವಮೊಗ್ಗ: ಜಿಲ್ಲೆಯಲ್ಲಿ ಮರಳಿನ ಕೊರತೆ; ಜಿಲ್ಲಾಡಳಿತದ ವೈಫಲ್ಯಕ್ಕೆ ಈಶ್ವರಪ್ಪ ಆಕ್ರೋಶ
ಶಿವಮೊಗ್ಗ, ಜ. 22: ಜಿಲ್ಲೆಯಲ್ಲಿ ತಲೆದೋರಿರುವ ಮರಳು ಸಮಸ್ಯೆಗೆ ಸಂಬಂಧಿಸಿದಂತೆ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪರವರು ಜಿಲ್ಲಾಡಳಿತದ ವಿರುದ್ದ ಹರಿಹಾಯ್ದಿದ್ದಾರೆ. ನಾಗರಿಕರಿಗೆ ಸಕಾಲದಲ್ಲಿ ಮರಳು ಪೂರೈಕೆ ಮಾಡುವಂತೆ ತಾಕೀತು ಮಾಡಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ ಅಧ್ಯಕ್ಷತೆಯಲ್ಲಿ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಕೆ.ಎಸ್.ಈಶ್ವರಪ್ಪ ಮಾತನಾಡಿದರು. 'ಜಿಲ್ಲೆಯಲ್ಲಿ ಮರಳು ಸಿಗದೆ ಜನರು ಪರದಾಡುತ್ತಿದ್ದಾರೆ. ನೀವು ಕೋರ್ಟ್-ಕಚೇರಿ ಎಂದು ಓಡಾಡಿಕೊಂಡು ಜನರನ್ನು ಅಲೆದಾಡಿಸುತ್ತಿದ್ದಿರಿ. ತಿನ್ನುವವರಿಗೆ ಅವಕಾಶ ಕೊಟ್ಟು ಜನಸಾಮಾನ್ಯರು ಮರಳಿಗಾಗಿ ಸಾಯುವಂತೆ ಮಾಡುತ್ತಿದ್ದಿರಿ. ನಿಮಗೆ ಹೇಳುವವರು-ಕೇಳುವವರು ಯಾರು ಇಲ್ಲವೆ?' ಎಂದು ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮರಳು ಲೂಟಿ ಹೊಡೆಯುವವರು ನಿರಾಂತಕವಾಗಿದ್ದಾರೆ. ಮರಳಿನ ಬೆಲೆ ಗಗನಕ್ಕೇರಿದ್ದು, ಜನಸಾಮಾನ್ಯರು ಖರೀದಿಸಲು ಸಾಧ್ಯವಾಗದಂತಿದೆ. ಇಲ್ಲಿಯವರೆಗೂ ಜಿಲ್ಲಾಡಳಿತದಿಂದ ಎಷ್ಟು ಪ್ರಮಾಣದ ಮರಳು ವಿತರಣೆ ಮಾಡಲಾಗಿದೆ ಎಂಬುವುದನ್ನು ಸಭೆಗೆ ತಿಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಅಪರ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ ಮಾತನಾಡಿ, ಸರಿಸುಮಾರು 30 ಸಾವಿರ ಲೋಡ್ ಮರಳು ವಿತರಣೆ ಮಾಡಲಾಗಿದೆ ಎಂದರು. ಇದರಿಂದ ತೃಪ್ತರಾಗದ ಈಶ್ವರಪ್ಪ, ಇಷ್ಟೊಂದು ಮರಳು ಕೊಟ್ಟಿದ್ದರೆ ಜಿಲ್ಲೆಯ ಜನ ಮರಳಿನ ಅಲಭ್ಯತೆ ಬಗ್ಗೆ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. 4 ತಿಂಗಳಿಂದ ಮರಳು ಸಿಗದೆ ಪರದಾಡುತ್ತಿದ್ದಾರೆ. 1200 ಅರ್ಜಿಗಳು ಮರಳು ಕೋರಿ ಬಂದಿವೆ. ಇವುಗಳಲ್ಲಿ ಎಷ್ಟು ಅರ್ಜಿಯನ್ನು ವಿಲೇವಾರಿ ಮಾಡಿದ್ದೀರಿ. ಒಬ್ಬ ಗುತ್ತಿಗೆದಾರ ತಡೆಯಾಜ್ಞೆ ತಂದ ಹಿನ್ನೆಲೆಯಲ್ಲಿ ಜಿಲ್ಲೆಯ ಜನರಿಗೆ ಮರಳು ಸಿಗದಂತೆ ಏಕೆ ಮಾಡಿದ್ದೀರಿ. ಅದೊಂದು ಕ್ವಾರೆ ಬಿಟ್ಟು ಉಳಿದವುಗಳಿಂದ ಮರಳು ವಿತರಣೆ ಮಾಡಬಹುದಾಗಿತ್ತು. ಕಾನೂನು ಹೋರಾಟ ಮಾಡುವುದಕ್ಕೆ ನೀವಿದ್ದಿರಾ ಎಂದು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿಧಾನಪರಿಷತ್ ಸದಸ್ಯ ಎಂ.ಬಿ. ಭಾನುಪ್ರಕಾಶ್, ನಿಮ್ಮ ಕಾನೂನು ಹೋರಾಟ ಏನೇ ಆದರೂ ಜನರು ಮಾತ್ರ ಸಾಯುವಂತಾಯಿತು. ಟೆಂಡರ್ ನಿಯಮವನ್ನು ಏಕೆ ಪರಿಗಣಿಸಿಲ್ಲ. ಆ ಪ್ರಕಾರವೇ ಮರಳು ಕೊಡಬಹುದಿತ್ತು. ಗುತ್ತಿಗೆದಾರನ ವಿರುದ್ದ ಹೋರಾಟ ಮಾಡಲು ಹೋಗಿದ್ದರಿಂದ ಜನರು ಮಾತ್ರ ಪರಿತಪಿಸುವಂತಾಯಿತು ಎಂದು ಹೇಳಿದರು.
ಅಧ್ಯಕ್ಷತೆಯನ್ನು ಉಸ್ತವಾರಿ ಸಚಿವ ಕಾಗೋಡು ತಿಮ್ಮಪ್ಪ ವಹಿಸಿದ್ದರು. ಜಿಲ್ಲಾಧಿಕಾರಿ ಡಾ. ಎಂ. ಲೋಕೇಶ್, ಜಿಪಂ ಸಿಇಓ ರಾಕೇಶ್‍ಕುಮಾರ್, ಜಿಪಂ ಉಪಾಧ್ಯಕ್ಷೆ ವೇದಾ ವಿಜಯಕುಮಾರ್ ಹಾಜರಿದ್ದರು.