ಮೈಸೂರು: ಅನಂತಕುಮಾರ್ ಹೆಗಡೆ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

Update: 2018-01-22 17:11 GMT

ಮೈಸೂರು,ಜ.22: ಸಂವಿಧಾನ ಬದಲಾವಣೆ ಮಾಡಬೇಕೆಂದು ಹೇಳಿದ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆಯವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ವಿರುದ್ಧ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಪ್ರತಿಭಟನೆ ನಡೆಯಿತು.

ಮೈಸೂರು ನ್ಯಾಯಾಲಯದ ಎದುರು ಸೋಮವಾರ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ, ಅನಂತಕುಮಾರ್ ಹೆಗಡೆ ಅವರು ಸಂವಿಧಾನವನ್ನು ಬದಲಾಯಿಸಬೇಕೆಂದು ಹೇಳಿ ಡಾ.ಬಿ.ಆರ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನಕ್ಕೆ ಅವಮಾನ ಮಾಡಿದ್ದಾರೆ. ಸಂಸದ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಅನಂತಕುಮಾರ ಹೆಗಡೆ ಅವರನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮ ಸಚಿವ ಸಂಪುಟದಿಂದ ವಜಾಗೊಳಿಸಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇವರ ವಿರುದ್ಧ ದೇಶದ್ರೋಹದ ಅಡಿಯಲ್ಲಿ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿದರು. 

ಅನಂತಕುಮಾರ ಹೆಗಡೆ ಅವರು ಬಹಿರಂಗವಾಗಿ ಕ್ಷಮೆಯಾಚಿಸಬೇಕು. ಇದೇ ರೀತಿಯ ಹೇಳಿಕೆಗಳನ್ನು ಮುಂದುವರಿಸಿದ್ದೇ ಆದಲ್ಲಿ ಅವರು ಭಾಗವಹಿಸುವ ಎಲ್ಲಾ ಕಾರ್ಯಕ್ರಮಗಳಿಗೆ ಯುವ ಕಾಂಗ್ರೆಸ್ ಸಮಿತಿಯ ವತಿಯಿಂದ ಮುತ್ತಿಗೆ ಹಾಕಿ ಅವರನ್ನು ಘೇರಾವ್ ಮಾಡಲಾಗುವುದು ಎಂದು ಎಚ್ಚರಿಸಿದರಲ್ಲದೇ ಅವರ ಪ್ರತಿಕೃತಿ ದಹಿಸಿದರು.

ಪ್ರತಿಭಟನೆಯಲ್ಲಿ ಕೆಪಿಸಿ ಕಾರ್ಯದರ್ಶಿ ಸಿ.ನರೇಂದ್ರ, ಕ.ವಿ.ಕಾ ನಿರ್ದೇಶಕ ಶಾಂತಮೂರ್ತಿ, ಬಂಡೀಪಾಳ್ಯ ವಿಜಯಕುಮಾರ್, ದೀಪಕ್ ಕುಮಾರ್, ಮಂಜುನಾಥ್, ರಾಮಸ್ವಾಮಿ, ಹರೀಶ್, ಪ್ರಸನ್ನಕುಮಾರ್, ನಾಗರಾಜ್, ಬೆಳವಾಡಿ ಮಂಜು ರಫೀಕ್, ರಿಜ್ವಾನ್ ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News