ದೇಶದಲ್ಲಿ ನಮ್ಮ ಸಾರಿಗೆ ಸಂಸ್ಥೆಯ ಸೇವೆಯೇ ಅತ್ಯುತ್ತಮ: ಎಚ್.ಎಂ.ರೇವಣ್ಣ
ಮಂಡ್ಯ, ಜ.22: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಸಾರ್ವಜನಿಕರಿಗೆ ಸೇವೆ ನೀಡುವಲ್ಲಿ ದೇಶದಲ್ಲಿ 210 ಬಾರಿ ಪ್ರಶಸ್ತಿ ಪಡೆದಿದ್ದು, ಸಾರ್ವಜನಿಕರಿಗೆ ನೀಡುತ್ತಿರುವ ಸೇವೆ ಇತರೆ ರಾಜ್ಯಗಳಿಗಿಂತ ಅತ್ಯುತ್ತಮವಾದದ್ದಾಗಿದೆ ಎಂದು ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಹೇಳಿದ್ದಾರೆ.
ಮದ್ದೂರು ತಾಲೂಕಿನ ಕೊಪ್ಪ ಗ್ರಾಮದಲ್ಲಿ ಸೋಮವಾರ ನೂತನ ಬಸ್ ನಿಲ್ದಾಣದ ಉದ್ಘಾಟನೆ ಹಾಗೂ ಅಪಘಾತ ರಹಿತ ಚಾಲಕರಿಗೆ ಬೆಳ್ಳಿಪದಕ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ದೇಶದ ಅಭಿವೃದ್ಧಿಗೆ ಸಾರಿಗೆ ಸಂಪರ್ಕ ಅವಶ್ಯಕವಾಗಿದೆ ಎಂದರು.
ಹಳ್ಳಿಯಲ್ಲಿನ ಸಾರ್ವಜನಿಕರಿಗೆ ಸೇವೆ ನೀಡುವಲ್ಲಿ ಸಾರಿಗೆ ಸಂಸ್ಥೆಯ ಬಸ್‍ಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿವೆ. ಈ ನಿಟ್ಟಿನಲ್ಲಿ ಸರಕಾರ ಮಂಡ್ಯ ವಿಭಾಗದ ಸಾರಿಗೆ ವ್ಯವಸ್ಥೆಗಾಗಿ 93 ಹೊಸ ಬಸ್‍ಗಳನ್ನು ನೀಡಿದೆ. 32 ಗುಂಟೆ ವಿಸ್ತೀರ್ಣದಲ್ಲಿ 171 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ಬಸ್ ನಿಲ್ದಾಣವನ್ನು ನಿರ್ಮಿಸಲಾಗಿದೆ. ನಿಲ್ದಾಣದ ಹೆಚ್ಚುವರಿ ಅಭಿವೃದ್ಧಿಗೆ 1.40 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಅವರು ಹೇಳಿದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಶಿಸ್ತುಬದ್ದವಾಗಿ, ಅತಿ ಹೆಚ್ಚು ದಿನ ಕರ್ತವ್ಯ ನಿರ್ವಹಿಸಿ, ಅಪರಾಧ ರಹಿತ ಮತ್ತು ಅಪಘಾತ ರಹಿತ 598 ಚಾಲಕರಿಗೆ ಗಣರಾಜ್ಯತ್ಸೋವದಂದು ಪ್ರಶಸ್ತಿ ನೀಡಿ ಗೌರವಿಸಲಾಗುವುದು, ಅವರ ಬೆನ್ನು ತಟ್ಟುವ ಕೆಲಸವನ್ನು ಮಾಡಲಾಗುವುದು ಎಂದು ಅವರು ತಿಳಿಸಿದರು.
ಸರಕಾರವು ಜನರ ಶ್ರೇಯೋಭಿವೃದ್ಧಿಗೆ ಹಲವಾರು ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದಿದ್ದು, ಸಾರ್ವಜನಿಕರು ಸಮರ್ಪಕವಾಗಿ ಸದ್ಭಳಕೆ ಮಾಡಿಕೊಳ್ಳಲು ಮುಂದಾಗಬೇಕು. ಬಿ.ಪಿಎಲ್ ಕಾರ್ಡ್ ಫಲಾನುಭವಿಗಳಿಗೆ ಜಾತಿ ಭೇದವಿಲ್ಲದೇ, ಸರಕಾರದ ಯೋಜನೆಗಳನ್ನು ಮುಟ್ಟಿಸುವಲ್ಲಿ ನಾವು ಯಶಸ್ವಿಯಾಗಿದ್ದೆವೆ ಎಂದು ಸಚಿವರು ನುಡಿದರು.
ಶಾಸಕ ಎನ್.ಚಲುವರಾಯಸ್ವಾಮಿ ಮಾತನಾಡಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಚಾಲಕರು ಅಪಘಾತ ಮಾಡದೇ ವೃತ್ತಿ ಬದುಕನ್ನು ಪೂರೈಸಬೇಕು ಎಂದು ಸಲಹೆ ನೀಡಿದರು.
ಸರಕಾರ ನಾಗಮಂಗಲ ಕ್ಷೇತ್ರದ ಅಭಿವೃದ್ಧಿಗೆ ಅತಿ ಹೆಚ್ಚು ಅನುದಾನವನ್ನು ನೀಡಿದೆ. ಕ್ಷೇತ್ರದಲ್ಲಿ ಲೋಕೋಪಯೋಗಿ ರಸ್ತೆಗಳ ಕಾಮಗಾರಿ ಪೂರ್ಣಗೊಂಡಿದೆ ಹಾಗೂ ಮೂಲಭೂತ ಸೌಕರ್ಯವನ್ನು ಜನತೆಗೆ ತಲುಪಿಸುವಲ್ಲಿ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಿದ್ದೇನೆ ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಶಿಸ್ತುಬದ್ದವಾಗಿ, ಅತಿ ಹೆಚ್ಚು ದಿನ ಕರ್ತವ್ಯ ನಿರ್ವಹಿಸಿದ, ಅಪರಾಧ ರಹಿತ ಮತ್ತು ಅಪಘಾತ ರಹಿತ ಕಾರ್ಯನಿರ್ವಹಿಸಿದ ಜಿಲ್ಲೆಯ ಸಾರಿಗೆ ಸಂಸ್ಥೆಯ 31 ಚಾಲಕರನ್ನು ಬೆಳ್ಳಿಪದಕ ಹಾಗೂ ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಲಾಯಿತು.
ವಿಧಾನಪರಿಷತ್ ಸದಸ್ಯರಾದ ಕೆ.ಟಿ.ಶ್ರೀಕಂಠೇಗೌಡ, ಎನ್.ಅಪ್ಪಾಜಿಗೌಡ, ಜಿಪಂ ಸದಸ್ಯೆ ರೇಣುಕಾ ರಾಮಕೃಷ್ಣ, ಮದ್ದೂರು ತಾಲೂಕು ಪಂಚಾಯತ್ ಅಧ್ಯಕ್ಷೆ ಜಯಲಕ್ಷ್ಮಿ ಜಯರಾಮು, ಗ್ರಾಮ ಪಂಚಾಯತ್ ಅಧ್ಯಕ್ಷ ಜಗದೀಶ್ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.