ಅಭಿವೃದ್ಧಿಯಲ್ಲಿ ದೇಶಕ್ಕೆ ಹಿನ್ನಡೆ

Update: 2018-01-23 03:53 GMT

ಕೇವಲ ನೋಟು ನಿಷೇಧ ಮತ್ತು ಜಿಎಸ್‌ಟಿಯನ್ನು ಮುಂದಿಟ್ಟುಕೊಂಡು ನನ್ನ ಆಡಳಿತವನ್ನು ವಿಶ್ಲೇಷಿಸಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿಯವರು ಮನವಿ ಮಾಡಿದ್ದಾರೆ. ತೀರಾ ಇತ್ತೀಚಿನವರೆಗೂ ಜಿಎಸ್‌ಟಿ ಮತ್ತು ನೋಟು ನಿಷೇಧವನ್ನೇ ತನ್ನ ಹೆಗ್ಗಳಿಕೆಯೆಂದು ಸಾಧಿಸಲು ಹೆಣಗುತ್ತಿದ್ದವರು, ಅದು ಭಾರತದ ಆರ್ಥಿಕತೆಯ ಮೇಲೆ ಬೀರುತ್ತಿರುವ ದುಷ್ಪರಿಣಾಮವನ್ನು ಕಂಡು, ತಮ್ಮ ಧಾಟಿಯನ್ನು ಬದಲಿಸಿದ್ದಾರೆ. ಈ ಮೂಲಕ ಅವರು ನೋಟು ನಿಷೇಧ ಮತ್ತು ಜಿಎಸ್‌ಟಿಯ ವೈಫಲ್ಯವನ್ನು ಒಪ್ಪಿಕೊಂಡಂತಾಗಿದೆ. ನೋಟು ನಿಷೇಧದಿಂದ ಕಪ್ಪು ಹಣ ಹೊರಬರಲಿಲ್ಲ. ಇದೇ ಸಂದರ್ಭದಲ್ಲಿ ಆರ್‌ಬಿಐಗೆ ಭಾರೀ ಆರ್ಥಿಕ ಹೊರೆ ಬಿತ್ತು. ಗ್ರಾಮೀಣ ಅರ್ಥವ್ಯವಸ್ಥೆ ಸಂಪೂರ್ಣ ಕುಸಿಯಿತು. ಇತ್ತ ಜಿಎಸ್‌ಟಿಯಿಂದ ಯಾವ ಉತ್ಪಾದನೆಯ ಬೆಲೆಯೂ ಇಳಿಯುವ ಸೂಚನೆಗಳಿಲ್ಲ. ಜೊತೆಗೆ ಹಲವು ಉತ್ಪಾದನೆಗಳ ಬೆಲೆ ಏರಿಕೆಯಾಯಿತು. ಸರಕಾರ ಪದೇ ಪದೇ ಜಿಎಸ್‌ಟಿ ತೆರಿಗೆಯನ್ನು ಇಳಿಸುತ್ತಾ ಏರಿಸುತ್ತಾ ಕಾಲ ಜನರನ್ನು ಸಮಾಧಾನಗೊಳಿಸಲು ಯತ್ನಿಸುತ್ತಿದೆ. ಅಂದರೆ ಅವೈಜ್ಞಾನಿಕವಾದ ಜಿಎಸ್‌ಟಿ ತೆರಿಗೆ ಮಾರುಕಟ್ಟೆಯನ್ನು ಗೊಂದಲಕ್ಕೆ ತಳ್ಳಿದೆ.

ಸರಿ, ಇವೆರಡನ್ನು ಬದಿಗಿಟ್ಟು ನರೇಂದ್ರ ಮೋದಿಯ ಯಾವ ಸಾಧನೆಗಳನ್ನು ನಾವು ಹೊಗಳಬೇಕು? ಪಟೇಲರ ಪುತ್ಥಳಿ, ಶಿವಾಜಿ ಪಾರ್ಕ್, ರಾಮಾಯಣ ಮ್ಯೂಸಿಯಂ, ಬುಲೆಟ್ ಟ್ರೈನ್ ಇವುಗಳ ಮೂಲಕ ನರೇಂದ್ರ ಮೋದಿಯ ಸಾಧನೆಯನ್ನು ಅಳೆಯಬೇಕೇ? ಜನರು ಆರ್ಥಿಕ ಬಿಕ್ಕಟ್ಟಿನಿಂದ ನರಳುತ್ತಿರುವ ಈ ಹೊತ್ತಿನಲ್ಲಿ ಅವರಿಂದ ಸಂಗ್ರಹಿಸಿರುವ ಸಹಸ್ರಾರು ಕೋಟಿ ರೂಪಾಯಿಯನ್ನು ಈ ಸ್ಮಾರಕವೆನ್ನುವ ಗೋರಿಗಳಿಗೆ ಚೆಲ್ಲುವುದರಿಂದ ದೇಶದ ಅರ್ಥವ್ಯವಸ್ಥೆಯ ಮೇಲೆ ಏನಾದರೂ ಪರಿಣಾಮವಾಗುತ್ತದೆಯೇ? ಜನರಿಗೆ ಆ ದುಡ್ಡು ಮರಳುವುದಾದರೂ ಹೇಗೆ? ಜನರನ್ನು ಭಾವನಾತ್ಮಕವಾಗಿ ಮರುಳು ಮಾಡುವ ಒಂದೇ ಉದ್ದೇಶದಿಂದ ಇಂತಹ ಸ್ಮಾರಕಗಳಿಗೆ ಸರಕಾರ ಹಣ ವ್ಯಯ ಮಾಡುತ್ತಿದೆ. ಅಭಿವೃದ್ಧಿ ಮತ್ತೆ ಹಿಂದೆ ಬೀಳುತ್ತಿದೆ. ನೋಟು ನಿಷೇಧ ಮತ್ತು ಜಿಎಸ್‌ಟಿಯನ್ನು ಬದಿಗಿಟ್ಟು ದೇಶದ ಅಭಿವೃದ್ಧಿಯನ್ನು ಚರ್ಚಿಸುವುದಕ್ಕೆ ಸಾಧ್ಯವೇ ಇಲ್ಲ ಎನ್ನುವಂತಹ ಸ್ಥಿತಿ ನಿರ್ಮಾಣವಾಗಿದೆ. ಅಷ್ಟರ ಮಟ್ಟಿಗೆ ಅದು ಬೇರೆ ಬೇರೆ ರೀತಿಯಲ್ಲಿ ದೇಶದ ಆರ್ಥಿಕ ಸಂರಚನೆಯ ಮೇಲೆ ದುಷ್ಪರಿಣಾಮವನ್ನು ಬೀರಿದೆ.

ಹೊಸ ಉದ್ಯೋಗಗಳನ್ನು ಸೃಷ್ಟಿಸುವುದಿರಲಿ, ಇರುವ ಉದ್ಯೋಗಳನ್ನೇ ಕಳೆದುಕೊಂಡು ಲಕ್ಷಾಂತರ ಮಂದಿ ಬೀದಿಗೆ ಬಿದ್ದಿದ್ದಾರೆ. ನೋಟು ನಿಷೇಧ ಮತ್ತು ಜಿಎಸ್‌ಟಿ ಗ್ರಾಮೀಣ ಪ್ರದೇಶದ ಮಾರುಕಟ್ಟೆಯನ್ನು ಛಿದ್ರಗೊಳಿಸಿದೆ. ಸಣ್ಣ ಸಣ್ಣ ವ್ಯಾಪಾರಿಗಳು, ಉದ್ಯಮಿಗಳ ನಡುವನ್ನು ಮುರಿದಿದೆ. ಕೃಷಿ ಉದ್ಯಮದ ಮೇಲೂ ಭಾರೀ ಪರಿಣಾಮವನ್ನು ಬೀರಿದೆ. ಶೀಘ್ರದಲ್ಲೇ ಎಲ್ಲವೂ ಸರಿಯಾಗುತ್ತದೆ ಎನ್ನುವ ನಂಬಿಕೆಯೂ ಹುಸಿಯಾಗಿದೆ. ಇದರ ಜೊತೆಗೆ ಬಿಜೆಪಿಯ ಸಾಂಸ್ಕೃತಿಕ ರಾಜಕಾರಣ ಹೈನೋದ್ಯಮವನ್ನು ನಾಶ ಮಾಡುತ್ತಿದೆ. ದನಸಾಕಿಯಾದರೂ ಬದುಕಿಕೊಳ್ಳುತ್ತೇನೆ ಎನ್ನುವ ರೈತರು ಹಟ್ಟಿಯಲ್ಲಿರುವ ದನಗಳನ್ನು ಬೀದಿಗೆ ಅಟ್ಟುವಂತಹ ಸ್ಥಿತಿ ನಿರ್ಮಾಣವಾಗಿದೆ. ಒಂದೆಡೆ ಭಾರೀ ಪ್ರಮಾಣದಲ್ಲಿ ಗೋಮಾಂಸ ರಫ್ತಿಗೆ ಪ್ರೋತ್ಸಾಹ ನೀಡುತ್ತಲೇ, ಬಡವರು ಮಾತ್ರ ಕಸಾಯಿಖಾನೆಗೆ ತಮ್ಮ ಅನುಪಯುಕ್ತ ದನಗಳನ್ನು ಮಾರದಂತೆ ಕೈ ಕಟ್ಟಿ ಹಾಕಿದೆ. ಗ್ರಾಮೀಣ ಹಟ್ಟಿಗಳನ್ನು ನಾಶ ಮಾಡಿ ಬೃಹತ್ ಫಾರ್ಮ್‌ಗಳಿಗೆ ಹೆಬ್ಬಾಗಿಲನ್ನು ತೆರೆಯಲು ಹೊರಟಿದೆ.

ಗ್ರಾಮೀಣ ಪ್ರದೇಶದ ಯುವಕರು ಸಂಸ್ಕೃತಿ ರಕ್ಷಣೆಯನ್ನೇ ಉದ್ಯೋಗವೆಂದು ತಿಳಿದುಕೊಂಡು ವಿವಿಧ ಸಂಘಟನೆಗಳಿಗೆ ಸದಸ್ಯರಾಗುತ್ತಿದ್ದಾರೆ. ಕತ್ತಿ ದೊಣ್ಣೆಗಳ ಜೊತೆಗೆ ಬೀದಿಗಳಲ್ಲಿ ಕ್ರಿಮಿನಲ್‌ಗಳಾಗಿ ಮಾರ್ಪಾಡುಗೊಳ್ಳುತ್ತಿದ್ದಾರೆ. ಅಭಿವೃದ್ಧಿ ಎಂದರೆ ಶ್ರೀಮಂತರು ಇನ್ನಷ್ಟು ಶ್ರೀಮಂತರಾಗುವುದು ಎಂದು ಮೋದಿ ಬಲವಾಗಿ ನಂಬಿದ್ದಾರೆ ಮತ್ತು ಅವರ ಮೂಲಕವೇ ಜಗತ್ತು ಭಾರತವನ್ನು ನೋಡುತ್ತದೆ ಎನ್ನುವುದು ಅವರ ದೃಷ್ಟಿಕೋನ. ಬುಲೆಟ್ ಟ್ರೇನ್‌ನ್ನು ಪ್ರಧಾನಿ ಮೋದಿಯವರು ಈ ರೀತಿ ವ್ಯಾಖ್ಯಾನಿಸುತ್ತಾರೆ ‘‘ಅಹ್ಮದಾಬಾದ್‌ನಿಂದ ಮುಂಬೈಗೆ ಬುಲೆಟ್ ಟ್ರೇನ್ ಹೊರಡಿಸಿದರೆ ಇಡೀ ವಿಶ್ವ ಭಾರತದತ್ತ ನೋಡುತ್ತದೆ. ಪ್ರಯಾಣಿಕರು ಆ ಬುಲೆಟ್ ಟ್ರೈನ್‌ನಲ್ಲಿ ಪ್ರಯಾಣಿಸದಿದ್ದರೂ ಪರವಾಗಿಲ್ಲ.’’ ಹೀಗೆಂದು ಮೋದಿಯವರೇ ಭಾಷಣವೊಂದರಲ್ಲಿ ಹೇಳುತ್ತಾರೆ. ಅವರ ಪ್ರಕಾರ ಚೀನಾ ಬರೇ ‘ಶಾಂೈ’ಯನ್ನು ತೋರಿಸಿ ತಾನು ಅಭಿವೃದ್ಧಿ ಹೊಂದಿದ್ದೇನೆ ಎಂದು ವಿಶ್ವಕ್ಕೆ ತೋರಿಸಿಕೊಳ್ಳುತ್ತಿದೆ. ಅಂತೆಯೇ ನಾವು ಕೂಡ ಅಭಿವೃದ್ಧಿಯ ಕೆಲವು ಭ್ರಮೆಗಳನ್ನು ಸೃಷ್ಟಿಸಿ ವಿಶ್ವಕ್ಕೆ ವಂಚಿಸಬೇಕು. ಅಂದರೆ ಅವರ ಪ್ರಕಾರ ಈ ದೇಶದ ತಳಮಟ್ಟದ ಜನರು ಅಭಿವೃದ್ಧಿಯ ಪಾಲುದಾರರಾಗಬೇಕಾಗಿಲ್ಲ. ಅಂಬಾನಿ, ಅದಾನಿಯಂತಹ ಒಂದೆರಡು ಹೆಸರುಗಳನ್ನು ಇನ್ನಷ್ಟು ಶ್ರೀಮಂತಗೊಳಿಸಿ ಭಾರತ ಅಭಿವೃದ್ಧಿಯತ್ತ ಸಾಗುತ್ತಿದೆ ಎಂದು ವಿಶ್ವಕ್ಕೆ ತೋರಿಸಿದರಾಯಿತು.

ಮೋದಿಯವರ ಅಭಿವೃದ್ಧಿಯ ಪರಿಕಲ್ಪನೆ ಫಲಕೊಡುತ್ತಿದೆ. ಇಂದು ಭಾರತದ ಶೇ. 73ರಷ್ಟು ಸಂಪತ್ತು ಶೇ. 1ರಷ್ಟು ಇರುವ ಶ್ರೀಮಂತರ ಕೈಯಲ್ಲಿದೆ ಎನ್ನುವುದನ್ನು ನೂತನ ಜಾಗತಿಕ ಸಮೀಕ್ಷೆಯೊಂದು ಹೇಳುತ್ತಿದೆ. 2017ರ ಸಾಲಿನಲ್ಲಿ ದೇಶದ ಒಟ್ಟು ಜನಸಂಖ್ಯೆಯ ಅರ್ಧದಷ್ಟಿರುವ 67 ಕೋಟಿ ಕಡು ಬಡವರ ಆದಾಯದಲ್ಲಿ ಒಂದು ಶೇಕಡವಷ್ಟೇ ಏರಿಕೆಯಾಗಿದೆ. ಅಂದರೆ ನೂತನ ಸರಕಾರದ ಎಲ್ಲ ನೀತಿಗಳೂ ಬಡವರಿಂದ ಕಿತ್ತು ಶ್ರೀಮಂತರಿಗೆ ನೀಡುವಲ್ಲಿ ಯಶಸ್ವಿಯಾಗಿದೆ. ಪರಿಣಾಮವಾಗಿಯೇ ಅದು ಭಾರತದ ಅಭಿವೃದ್ಧಿ ಸೂಚ್ಯಂಕದ ಮೇಲೆ ಆಘಾತವನ್ನು ನೀಡಿದೆ. ವಿಶ್ವ ಆರ್ಥಿಕ ವೇದಿಕೆ ಸೋಮವಾರ ಬಿಡುಗಡೆಗೊಳಿಸಿರುವ ಸಮಗ್ರ ಅಭಿವೃದ್ಧಿ ಸೂಚ್ಯಂಕ ಪಟ್ಟಿಯಲ್ಲಿ ಭಾರತ 62ನೇ ಸ್ಥಾನದಲ್ಲಿದೆ. ಯಾವ ಪಾಕಿಸ್ತಾನವನ್ನು ನಾವು ಪ್ರತಿದಿನ ಹೀಯಾಳಿಸುತ್ತಾ ಬರುತ್ತಿದ್ದೇವೆಯೋ, ಆ ಪಾಕಿಸ್ತಾನಕ್ಕಿಂತಲೂ ನಮ್ಮ ಅಭಿವೃದ್ಧಿ ಸೂಚ್ಯಂಕ ಕೆಳ ಮಟ್ಟದಲ್ಲಿದೆ.

ಇದು ಭಾರತದ ಪಾಲಿಗೆ ನಿಜಕ್ಕೂ ಅವಮಾನ ಕಾರಿ ಸಂಗತಿಯಾಗಿದೆ. ಈ ಸೂಚ್ಯಂಕ ಪಟ್ಟಿಯನ್ನು ತಯಾರಿಸುವಾಗ ಜನರ ಜೀವನ ಮಟ್ಟ, ಪರಿಸರ ಧಾರಣಾಶೀಲ ಸಾಮರ್ಥ್ಯ, ಸಾಲ ಇತ್ಯಾದಿಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಬರೇ ಅದಾನಿ, ಅಂಬಾನಿಯನ್ನು ಮುಂದಿಟ್ಟುಕೊಂಡು ಈ ವರದಿಯನ್ನು ತಯಾರಿಸಲಾಗುವುದಿಲ್ಲ. ದುರಂತವೆಂದರೆ, ದೇಶದಲ್ಲಿ ಅಪೌಷ್ಟಿಕತೆ, ಬಡತನ, ನಿರುದ್ಯೋಗ ಹೆಚ್ಚುತ್ತಿರುವಂತೆಯೇ ಸಾಮಾಜಿಕ ವಲಯಗಳಿಗೆ ನೀಡುತ್ತಿರುವ ಅನುದಾನದಲ್ಲಿ ಕಡಿತವಾಗುತ್ತಿದೆ. ಇದೇ ಸಂದರ್ಭದಲ್ಲಿ ಆ ಹಣವನ್ನು ಶಸ್ತ್ರಗಳಿಗೆ ವ್ಯಯಿಸುವುದಕ್ಕೆ ಮುಂದಾಗಿದೆ. ನರೇಂದ್ರ ಮೋದಿಯ ಮೇಕ್ ಇನ್ ಇಂಡಿಯಾ ಕೂಡ ನಿರೀಕ್ಷಿತ ಫಲ ನೀಡಿಲ್ಲ. ಭಾರೀ ಬಂಡವಾಳವೂ ಹರಿದು ಬರುತ್ತಿಲ್ಲ. ತನ್ನ ವೈಫಲ್ಯವನ್ನು ಮುಚ್ಚಿ ಹಾಕಲು ಸಂಘಪರಿವಾರ ವಿಜ್ಞಾನವನ್ನು, ವೈಚಾರಿಕ ಚಿಂತನೆಗಳನ್ನು ಅವಹೇಳನ ಮಾಡುತ್ತಿದೆ. ಭಾವನಾತ್ಮಕವಾಗಿ ಕೆರಳಿಸಿ ಜನರ ಗಮನವನ್ನು ಬೇರೆ ದಿಕ್ಕಿಗೆ ಹರಿಸುತ್ತಿದೆ. ಇದು ಹೀಗೇ ಮುಂದುವರಿದರೆ ದೇಶದಲ್ಲಿ ಆಂತರಿಕ ಕಲಹಗಳು ಆರಂಭವಾಗಬಹುದು. ಅದು ದೇಶವನ್ನು ವಿಚ್ಛಿದ್ರಗೊಳಿಸಬಹುದು.

ಹಿಂಸಾಚಾರ ಒಮ್ಮೆ ಸ್ಫೋಟಗೊಂಡರೆ ಅದು ದೇಶವನ್ನು ಇನ್ನಷ್ಟು ಹಿಂದಕ್ಕೆ ಒಯ್ಯಬಹುದು. ಆದುದರಿಂದ ಜನರ ತೆರಿಗೆಯ ಹಣವನ್ನು ಭಾವನಾತ್ಮಕವಾಗಿ ಶೋಷಿಸುವುದಕ್ಕೆ ವ್ಯಯಿಸುವುದನ್ನು ಕೈ ಬಿಡಬೇಕು. ಆಯುಷ್ ಎನ್ನುವ ಭ್ರಮೆಯನ್ನು ಮುಂದಿಟ್ಟುಕೊಂಡು ಹಲವು ನಕಲಿ ಬಾಬಾಗಳು ಸರಕಾರದ ಹಣವನ್ನು ದೋಚುತ್ತಿದ್ದಾರೆ. ಆ ಹಣ ಸರಕಾರಿ ಆಸ್ಪತ್ರೆಗಳಿಗೆ ವ್ಯಯವಾಗಬೇಕು. ಸಾವಯವ ಹೆಸರಿನಲ್ಲಿ ಕೃಷಿಕರಲ್ಲದ ರಾಜಕೀಯ ಕಾರ್ಯಕರ್ತರು ಹಣವನ್ನು ನುಂಗುತ್ತಿದ್ದಾರೆ. ಆ ಹಣ ನಿಜವಾದ ಕೃಷಿಕರಿಗೆ ಸರಿಯಾದ ಮಾರ್ಗದಲ್ಲಿ ತಲುಪುವಂತೆ ನೋಡಿಕೊಳ್ಳಬೇಕು. ಗೋವುಗಳು ಧರ್ಮಶಾಸ್ತ್ರದ ಭಾಗವಲ್ಲ, ಅರ್ಥಶಾಸ್ತ್ರದ ಭಾಗ ಎನ್ನುವುದನ್ನು ಒಪ್ಪಿಕೊಂಡು ಅದನ್ನು ಸಾಕುವುದಕ್ಕೆ, ಮಾರುವುದಕ್ಕೆ ವಿಧಿಸಲಾಗಿರುವ ಅನಗತ್ಯ ಕಾನೂನನ್ನು ತೆಗೆದು ಹಾಕಬೇಕು. ವಿಜ್ಞಾನದ ಕುರಿತಂತೆ ಗಿಣಿ ಜ್ಯೋತಿಷಿಗಳು, ರಾಜಕಾರಣಿಗಳು ಮಾತನಾಡದಂತೆ ಅವರ ತುಟಿಗಳನ್ನು ಹೊಲಿದು, ನಿಜವಾದ ಅರ್ಥದಲ್ಲಿ ವಿಜ್ಞಾನ, ತಂತ್ರಜ್ಞಾನವನ್ನು ಬೆಳೆಸುವುದಕ್ಕೆ ಹಣವನ್ನು ಹೂಡಬೇಕು. ‘ಹಿಂದುತ್ವ’ ಮತ್ತು ‘ಅಭಿವೃದ್ಧಿ’ ಜೊತೆಯಾಗಿ ಸಾಗಲಾರದು ಎನ್ನುವುದನ್ನು ಅರ್ಥಮಾಡಿಕೊಂಡ ದಿನ ನಮ್ಮ ಅಭಿವೃದ್ಧಿ ಸೂಚ್ಯಂಕ ಏರತೊಡಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News