'ಕಡಿಮೆ ಸಾಗಾಟ ವೆಚ್ಚದ ಲಾಭ ಪರೋಕ್ಷವಾಗಿ ಬೆಳೆಗಾರರಿಗೆ'

Update: 2018-01-23 10:14 GMT

ಕುಶಾಲನಗರ, ಜ. 23: ದೇಶದಿಂದ ರಫ್ತಾಗುತ್ತಿರುವ ಕಾಫಿ ಬೆಳೆಯಲ್ಲಿ ಶೇಕಡಾ 90ರಷ್ಟು ಮಂಗಳೂರು ಬಂದರು ಮೂಲಕವೇ ನಡೆಯುತ್ತಿದ್ದು, ಕಡಿಮೆ ಸಾಗಾಟ ವೆಚ್ಚದ ಲಾಭ ಬೆಳೆಗಾರರಿಗೂ ಪರೋಕ್ಷವಾಗಿ ಲಭ್ಯವಾಗುತ್ತಿದೆ ಎಂದು ನವ ಮಂಗಳೂರು ಬಂದರು ಟ್ರಸ್ಟ್‌ನ ಅಧ್ಯಕ್ಷ ಸುರೇಶ್ ಶಿರ್ವಾರ್ಡ್‌ಕರ್ ಸಂತಸ ವ್ಯಕ್ತಪಡಿಸಿದರು.

ಕುಶಾಲನಗರದಲ್ಲಿ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್, ಕಾಫಿ ಕ್ಯೂರರ್ಸ್‌ ಹಾಗೂ ಸಂಬಂಧಿತ ವಾಣಿಜ್ಯೋದ್ಯಮಿಗಳೊಂದಿಗೆ ಸಂವಾದ ಸಭೆಯಲ್ಲಿ ಮಾತನಾಡಿದ ಅವರು, ಇದೀಗ ರಾಜ್ಯದಲ್ಲಿ ಬೆಳೆಯುತ್ತಿರುವ ಕಿರು ಸೌತೆಕಾಯಿ ಕೂಡಾ ರಫ್ತಾಗುತ್ತಿದ್ದು, ಬೆಳೆಗಾರರ ಆರ್ಥಿಕ ಅಭಿವೃದ್ಧಿಗೆ ನೆರವಾಗಿದೆ. ಮಂಗಳೂರು ಬಂದರನ್ನು ಇನ್ನೂ 33 ಎಕರೆ ವಿಸ್ತರಿಸಲು ಯೋಜನೆ ಹಮ್ಮಿಕೊಂಡಿದ್ದು, ನೂತನ ತಂತ್ರಜ್ಞಾನವನ್ನು ಬಳಸಿ ಸರಕು ವಾಹನಗಳು ಯಾವುದೇ ಅಡೆತಡೆ ಇಲ್ಲದೆ ಪ್ರವೇಶಾವಕಾಶ ಪಡೆಯಲು ಅನುಕೂಲವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕಾಫಿ ಕ್ಯೂರರ್ಸ್ಸ್‌ ಸಂಘದ ಅಧ್ಯಕ್ಷ ಪ್ರವೀಣ್ ಮಾತನಾಡಿ, ಅತ್ಯಂತ ಶುಚಿತ್ವ ಕಾಪಾಡಿ ಕೊಂಡು ಬರುತ್ತಿರುವ ಮಂಗಳೂರು ಬಂದರು ದೇಶದಲ್ಲೇ ವಿಶಿಷ್ಟ ಸ್ಥಾನ ಹೊಂದಿದೆ ಎಂದರು.

ಮಾಜೀ ಸಚಿವ ಹಾಗೂ ರಫ್ತುದಾರ ನಾಗರಾಜಶೆಟ್ಟಿ ಹಾಗೂ ಇತರರು ಅಭಿಪ್ರಾಯ ಹಂಚಿ ಕೊಂಡರು. ಸ್ವಾಗತ ಭಾಷಣ ಮಾಡಿದ ಜಿಲ್ಲಾ ಚೇಂಬರ್ ಮಾಜಿ ಅಧ್ಯಕ್ಷ ಜಿ.ಚಿದ್ವಿಲಾಸ್, ಈಗಿನ ಜಿಲ್ಲಾಧಿಕಾರಿಗಳು ಸಂಸ್ಥೆಗಳ ಸಾಮೂಹಿಕ ಜವಾಬ್ದಾರಿಯಡಿ ಕೊಡಗಿಗೂ ಆರ್ಥಿಕ ನೆರವು ನೀಡಲು ಪ್ರಸ್ತಾಪಿಸಿರುವುದನ್ನು ಅಧ್ಯಕ್ಷರ ಗಮನಕ್ಕೆ ತಂದರಲ್ಲದೆ, ಈ ಬಗ್ಗೆ ಯೋಜನೆ ರೂಪಿಸಿ ಜಿಲ್ಲೆಯ ಅಭಿವೃದ್ಧಿಗೆ ನೆರವಾಗಬೇಕೆಂದರು.

ಸಂಸ್ಥೆಯ ಹಿರಿಯ ಉಪ ಸಂಚಾರಿ ವ್ಯವಸ್ಥಾಪಕ ನವನೀತ್ ಕುಮಾರ್ ಸಂಸ್ಥೆಯ ಚಟುವಟಿಕೆಗಳ ಬಗ್ಗೆ ವಿವರಿಸುವುದರೊಂದಿಗೆ ವಂದನಾರ್ಪಣೆ ಮಾಡಿದರು. ಸಹಾಯಕ ಸಂಚಾರಿ ವ್ಯವಸ್ಥಾಪಕರ ಎಂ.ಸಿ.ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು. ಬಂದರು ಅಧಿಕಾರಿ ಸುರೇಶ್ ಬಾಬು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News