ಎರಡನೇ ಮಹಾಯುದ್ಧದಲ್ಲಿ ಹೋರಾಡಿದ ಭಾರತೀಯ ಮೇಜರ್ ಎಫ್‌ಕೆಕೆ ಸರ್ಕಾರ್ ನಿಧನ

Update: 2018-01-23 12:57 GMT

ಅಲಹಾಬಾದ್, ಜ.23: ಹಿರಿಯ ಭಾರತೀಯ ಯೋಧ ನಿವೃತ್ತ ಮೇಜರ್ ಎಫ್.ಕೆ.ಕೆ ಸರ್ಕಾರ್ ಅವರು ತಮ್ಮ 101ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅತ್ಯಂತ ಸುದೀರ್ಘ ಕಾಲ ಜೀವಿಸಿದ್ದ ಭಾರತೀಯ ಯೋಧ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದರು.

ಅಸ್ಸಾಂ ರೆಜಿಮೆಂಟ್‌ನ 2ನೇ ಬೆಟಾಲಿಯನ್‌ನ ಸದಸ್ಯರಾಗಿದ್ದ ಸರ್ಕಾರ್ ಎರಡನೇ ಮಹಾಯುದ್ಧ, 1947-48ರ ಭಾರತ-ಪಾಕ್ ಯುದ್ಧ ಮತ್ತು 1962ರ ಭಾರತ-ಚೀನಾ ಯುದ್ಧದಲ್ಲಿ ಭಾಗವಹಿಸಿದ್ದ ಹಿರಿಮೆಯನ್ನೂ ಗಳಿಸಿದ್ದಾರೆ.

ಭಾರತೀಯ ಸೇನಾ ಅಕಾಡೆಮಿಯ ಹಳೆವಿದ್ಯಾರ್ಥಿಯಾಗಿದ್ದ ಸರ್ಕಾರ್ ಅವರು ನ್ಯಾಶನಲ್ ಕೆಡೆಟ್ ಕೋರ್ಪ್ಸ್ (ಎನ್‌ಸಿಸಿ) ಯನ್ನು ದೇಶಾದ್ಯಂತ ಸ್ಥಾಪಿಸಿದ ಮೊದಲ ಹಂತದ ಅಧಿಕಾರಿಗಳ ಪೈಕಿ ಓರ್ವರಾಗಿದ್ದಾರೆ. ಕೊನೆಯುಸಿರಿನವರೆಗೂ ಅವರ ನೆನಪಿನ ಶಕ್ತಿ ಬಹಳ ತೀಕ್ಷ್ಣವಾಗಿತ್ತು ಮತ್ತು 95ರ ಹರೆಯದಲ್ಲೂ ಅವರು ‘ಸೈನಿಕನ ನೆನಪುಗಳು’ (ದ ಮೆಮೊರಿಸ್ ಆಫ್ ಎ ಸೋಲ್ಜರ್) ಪುಸ್ತಕವನ್ನು ಬರೆದಿದ್ದರು.

ಸರ್ಕಾರ್ ಅವರ ಅಂತ್ಯಕ್ರಿಯೆ ರಾಜಪುರ ರುದ್ರಭೂಮಿಯಲ್ಲಿ ನಡೆಯಿತು. ಸೇನೆಯ ಹಿರಿಯ ಅಧಿಕಾರಿಗಳು ಹಿರಿಯ ಸೇನಾನಿಯ ಸಮಾಧಿಯ ಮೇಲೆ ಪುಷ್ಪಗುಚ್ಛಗಳನ್ನು ಇರಿಸಿ ಗೌರವ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News