ದೇಶದ 73 ಶೇ. ಸಂಪತ್ತು 1 ಶೇ.ಶ್ರೀಮಂತರ ಪಾಲಾಗುವುದು ಯಾಕೆಂದು ಡಾವೋಸ್ ನಲ್ಲಿ ತಿಳಿಸಿ

Update: 2018-01-23 14:40 GMT

ಹೊಸದಿಲ್ಲಿ, ಜ.23: ಸ್ವಿಝರ್‌ಲ್ಯಾಂಡ್‌ನ ಡಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಭಾಷಣವನ್ನು ಮುಗಿಸುತ್ತಿದ್ದಂತೆ, ಅವರು ಭಾರತದಲ್ಲಿ ಹೆಚ್ಚುತ್ತಿರುವ ಆದಾಯ ಅಸಮಾನತೆಯ ಬಗ್ಗೆಯೂ ವೇದಿಕೆಯಲ್ಲಿ ಮಾತನಾಡಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.

ಭಾರತದ ಶ್ರೀಮಂತ ಮತ್ತು ಬಡವರ್ಗದ ಮಧ್ಯೆ ಹೆಚ್ಚುತ್ತಿರುವ ಅಂತರದ ಮೇಲೆ ಬೆಳಕು ಚೆಲ್ಲಿದ ಓಕ್ಸ್‌ಫಾಮ್ ಸಮೀಕ್ಷೆಯ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಈ ಆಗ್ರಹವನ್ನು ಮಾಡಿದ್ದಾರೆ. ಅಂತಾರಾಷ್ಟ್ರೀಯ ಹಕ್ಕುಗಳ ಸಂಸ್ಥೆಯಾದ ಓಕ್ಸ್‌ಫಾಮ್ ಸೋಮವಾರದಂದು ಬಿಡುಗಡೆ ಮಾಡಿದ ಸಮೀಕ್ಷೆಯ ವರದಿಯಲ್ಲಿ ಭಾರತದಲ್ಲಿ ಸೃಷ್ಟಿಯಾಗುವ ಸಂಪತ್ತಿನಲ್ಲಿ 73 ಶೇ. ಕೇವಲ 1 ಶೇ. ಶ್ರೀಮಂತರ ಪಾಲಾಗುತ್ತಿದೆ ಎಂದು ತಿಳಿಸಿತ್ತು.

ಮಂಗಳವಾರದಂದು ವಿಶ್ವ ಆರ್ಥಿಕ ವೇದಿಕೆಯಲ್ಲಿ ದಿಕ್ಸೂಚಿ ಭಾಷಣ ಮಾಡಿದ ಪ್ರಧಾನಿ ಮೋದಿ ಈ ವಿಷಯದ ಬಗ್ಗೆ ಜಾಗತಿಕ ನಾಯಕರ ಮುಂದೆ ಮಾತನಾಡಬೇಕು ಎಂದು ರಾಹುಲ್ ಗಾಂಧಿ ಸಲಹೆ ನೀಡಿದ್ದಾರೆ.

ವಿಶ್ವ ಆರ್ಥಿಕ ವೇದಿಕೆಯಲ್ಲಿ ಇತರ ವಿಷಯಗಳೊಂದಿಗೆ ಆರ್ಥಿಕ ಮತ್ತು ಲಿಂಗ ಅಸಮಾನತೆಯು ಪ್ರಮುಖವಾಗಿ ಚರ್ಚಿಸಲ್ಪಡುವ ವಿಷಯವಾಗಲಿದ್ದು, ಓಕ್ಸ್‌ಫಾಮ್‌ನ ವಾರ್ಷಿಕ ಸಮೀಕ್ಷೆಯ ಮೇಲೆಯೂ ಎಲ್ಲರ ಗಮನ ಹರಿಯಲಿದೆ ಮತ್ತು ಸಮೀಕ್ಷೆಯ ವರದಿಯೂ ಚರ್ಚೆಗೆ ಒಳಗಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಕಳೆದ ವರ್ಷದ ಓಕ್ಸ್‌ಫಾಮ್ ಸಮೀಕ್ಷೆಯಲ್ಲಿ ದೇಶದಲ್ಲಿ ಉತ್ಪತ್ತಿಯಾಗುವ 58 ಶೇ. ಸಂಪತ್ತು ಕೇವಲ ಒಂದು ಶೇ. ಭಾರತೀಯರ ಶ್ರೀಮಂತರ ಪಾಲಾಗಿದೆ. ಇದು ಜಾಗತಿಕ ಗರಿಷ್ಟವಾಗಿರುವ 50 ಶೇ.ಕ್ಕೂ ಅಧಿಕ ಎಂದು ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News