ಬಿಎಸ್ಪಿ ಜನಜಾಗೃತಿ ಬೈಕ್ ರ್ಯಾಲಿಗೆ ಚಾಲನೆ: ಅತಂತ್ರ ವಿಧಾನಸಭೆ ನಿರ್ಮಾಣಕ್ಕೆ ಎನ್.ಮಹೇಶ್ ಕರೆ

Update: 2018-01-23 15:40 GMT

ಮಂಡ್ಯ, ಜ.23: ಮುಂಬರುವ ಚುನಾವಣೆಯಲ್ಲಿ ಅತಂತ್ರ ವಿಧಾನಸಭೆ ನಿರ್ಮಿಸುವ ಮೂಲಕ ಸರಕಾರ ರಚನೆಯಲ್ಲಿ ಬಹುಜನರು ನಿರ್ಣಾಯಕ ಪಾತ್ರವಹಿಸಬೇಕು ಎಂದು ಬಿಎಸ್ಪಿ ರಾಜ್ಯಾಧ್ಯಕ್ಷ ಎನ್.ಮಹೇಶ್ ಕರೆ ನೀಡಿದ್ದಾರೆ.

ಮಂಗಳವಾರ ನಗರದಲ್ಲಿ ನಡೆದ ಪ್ರಜಾಪ್ರಭುತ್ವ ಉಳಿಸುವ ಕಡೆಗೆ ಆನೆಯ ನಡಿಗೆ ಜನ ಜಾಗೃತಿ ಬೈಕ್ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಅತಂತ್ರ ವಿಧಾನಸಭೆ ನಿರ್ಮಿಸುವುದೇ ಬಿಎಸ್ಪಿ ಗುರಿಯಾಗಿದೆ ಎಂದರು.

ಅನಂತಕುಮಾರ ಹೆಗಡೆ ಬೀದಿಯಲ್ಲಿ ನಿಂತು ಸಂವಿಧಾನ ಬದಲಾಯಿಸುತ್ತೇನೆ ಎನ್ನುವುದನ್ನು ಬಿಟ್ಟು ತಾಕತ್ತಿದ್ದರೆ ಸಂಸತ್‍ನಲ್ಲಿ ಹೇಳಿ ಸಾಧಿಸಲಿ ಎಂದು ಸವಾಲು ಹಾಕಿದ ಅವರು, ಇಂತಹ ‘ಹುಚ್ಚುನಾಯಿಗಳು’ ಬೀದಿಯಲ್ಲೇ ನಿಂತಿರುವಂತೆ ಮತದಾರರು ಬುದ್ದಿ ಕಲಿಸಬೇಕಾಗಿದೆ ಎಂದು ಸಲಹೆ ನೀಡಿದರು.

ಪ್ರಧಾನಮಂತ್ರಿ ನರೇಂದ್ರಮೋದಿ ಮಹಾಸುಳ್ಳುಗಾರ. ಸುಳ್ಳುಗಳನ್ನೇ ಹೇಳುತ್ತಾ ನಾಲ್ಕುವರ್ಷದಿಂದ ಜನರನ್ನು ಯಾಮಾರಿಸಿಕೊಂಡು ಬಂದಿದ್ದಾರೆ. ಸ್ವಿಸ್ ಬ್ಯಾಂಕ್‍ನಿಂದ ಕಪ್ಪುಹಣ ತಂದು ದೇಶದ ಜನರ ಖಾತೆಗೆ ಜಮಾ ಮಾಡುವುದಾಗಿ ಹೇಳಿ ಇದುವರೆಗೂ ಜಮೆ ಮಾಡಿಲ್ಲ ಎಂದು ಅವರು ಹೇಳಿದರು.

ಕೇಂದ್ರದ ಬಿಜೆಪಿ ಸರಕಾರ ಬಡತನ, ನಿರುದ್ಯೋಗ, ಅಪೌಷ್ಠಿಕತೆಯಂತಹ ಜ್ವಲಂತ ಸಮಸ್ಯೆಗಳನ್ನು ನಿರ್ಲಕ್ಷಿಸಿ, ಜಾತಿ ಜಾತಿಗಳನ್ನು, ಧರ್ಮ ಧರ್ಮಗಳನ್ನು ಎತ್ತಿಕಟ್ಟಿ ದೇಶಾದ್ಯಂತ ಕೋಮು ಗಲಭೆ ಸೃಷ್ಠಿಸುತ್ತಾ ದೇಶಪ್ರೇಮದ ಹೆಸರಲ್ಲಿ ದೇಶವನ್ನೊಡೆಯುವ ಕುತಂತ್ರ ನಡೆಸುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಸುಮಾರು 50 ವರ್ಷ ದೇಶವನ್ನಾಳಿದ ಕಾಂಗ್ರೆಸ್ ಜನರಿಗೆ ಉತ್ತಮ ಶಿಕ್ಷಣ, ಉದ್ಯೋಗ, ಭೂಮಿ, ಬಂಡವಾಳ ಒದಗಿಸುವ ಯೋಜನೆಗಳ ಬದಲಾಗಿ ಅನ್ನಭಾಗ್ಯ, ಕ್ಷೀರಭಾಗ್ಯ, ಮೊಟ್ಟೆ ಭಾಗ್ಯ, ತಾಳಿಭಾಗ್ಯದಂತಹ ಚಾರಿಟಿ ಯೋಜನೆಗಳನ್ನು ಜಾರಿಗೊಳಿಸಿ ಬಹುಸಂಖ್ಯಾತ ಪ್ರಜೆಗಳನ್ನು ದೈನೇಸಿಗಳನ್ನಾಗಿ ಮಾಡುತ್ತಿದೆ ಎಂದು ಅವರು ಟೀಕಿಸಿದರು.

ಶೇ.1ರಷ್ಟಿರುವ ಜನರ ಕೈಯಲ್ಲಿ ಶೇ.58ರಷ್ಟು ಸಂಪತ್ತು ಸಂಗ್ರಹವಾಗಿದೆ, ಶೇ.50ರಷ್ಟು ಜನರ ಬಳಿ ಕೇವಲ ಶೇ.2ರಷ್ಟು ಆಸ್ತಿ ಇದೆ, ಇಂತಹ ಅಸಮತೋಲನ ಸೃಷ್ಟಿಗೆ ಕಾಂಗ್ರೆಸ್ ಮತ್ತು ಬಿಜೆಪಿ ಸರಕಾರಗಳೇ ಕಾರಣ, ಇದನ್ನು ಹೋಗಲಾಡಿಸಲು ಬಹುಜನರ ಕೈಗೆ ಅಧಿಕಾರ ಬರಬೇಕು ಎಂದು ಅವರು ಪ್ರತಿಪಾದಿಸಿದರು.

ಬಿಎಸ್ಪಿ ರಾಜ್ಯಪ್ರಧಾನ ಕಾರ್ಯದರ್ಶಿಗಳಾದ ಎಂ.ಕೃಷ್ಣಮೂರ್ತಿ, ಎಸ್.ಸಿದ್ದಯ್ಯ,  ಜಿಲ್ಲಾಧ್ಯಕ್ಷ  ನರಸಿಂಹಮೂರ್ತಿ, ಸಂಚಾಲಕರಾದ ಸಿದ್ದರಾಜು, ಆಟೋ ದೀನೇಶ್, ವಜ್ರಮುನಿ ಬಹುಜನ್, ಅಶೋಕ್‍ಮೌರ್ಯ, ಇತರರು ರ್ಯಾಲಿಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News