×
Ad

ಸಿದ್ದಾಪುರ: ಕಾಡಾನೆ ಹಾವಳಿ ತಡೆಗಟ್ಟಲು ಒತ್ತಾಯಿಸಿ ಧರಣಿ

Update: 2018-01-23 22:17 IST

ಸಿದ್ದಾಪುರ (ಕೊಡಗು), ಜ.23: ಜಿಲ್ಲೆಯಲ್ಲಿ ಕಾಡಾನೆ ಹಾವಳಿ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ಕಾರ್ಮಿಕರು, ಬೆಳೆಗಾರರು ಸೇರಿದಂತೆ 38 ಜೀವಗಳನ್ನು ಕಾಡಾನೆಗಳು ಬಲಿ ತೆಗೆದುಕೊಂಡಿದ್ದರೂ ಅರಣ್ಯ ಇಲಾಖೆ ಮತ್ತು ಸರಕಾರಗಳು ಶಾಶ್ವತ ಪರಿಹಾರ ರೂಪಿಸಲು ಮುಂದಾಗುತ್ತಿಲ್ಲ ಎಂದು ಆರೋಪಿಸಿ ಬೇಳೆಗಾರರು, ಕಾರ್ಮಿಕ ಸಂಘಟನೆಗಳು ಹಾಗೂ ವಿವಿಧ ರಾಜಕೀಯ ಪಕ್ಷಗಳು ಸೇರಿ ಸಿದ್ದಾಪುರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ಇಲ್ಲಿನ ಬಸ್ ನಿಲ್ದಾಣದ ಮೂಲಕ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಟ್ರಾಫಿಕ್ ಬಳಿ ರಸ್ತೆ ತಡೆ ನಡೆಸಿ, ಮಾನವ ಸರಪಳಿ ರಚಿಸಿ ಅರಣ್ಯ ಇಲಾಖೆ ಹಾಗೂ ರಾಜ್ಯ ಮತ್ತು ಕೇಂದ್ರ ಸರಕಾರಗಳ ವಿರುದ್ಧ ಧಿಕ್ಕಾರ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ಬಸ್ ನಿಲ್ದಾಣದಲ್ಲಿ ಪ್ರತಿಭಟನಾ ಸಭೆಯಲ್ಲಿ ಕಾರ್ಮಿಕ ಮುಖಂಡ ಮಹದೇವ್ ಮಾತನಾಡಿ, ಕಾಡಾನೆ ದಾಳಿಗೆ ಬಲಿಯಾದರೆ 5 ಲಕ್ಷ ಪರಿಹಾರ ನೀಡಿ ಕೈ ತೊಳೆದುಕೊಳ್ಳುವ ಸರಕಾರಗಳು, ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲವಾಗಿದೆ. ಜಿಲ್ಲೆಯ ಜನಪ್ರತಿನಿಧಿಗಳು ವಿಧಾನಸಭೆ ಹಾಗೂ ಸಂಸತ್ತಿನಲ್ಲಿ ಸಮಸ್ಯೆಯ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಆರೋಪಿಸಿದರು.

ಕಾರ್ಮಿಕ ಮುಖಂಡ ಪಿ.ಆರ್ ಭರತ್ ಮಾತನಾಡಿ, ಕಾಫಿ ತೋಟಗಳಿಗೆ ಕಾಡಾನೆಗಳು ಲಗ್ಗೆ ಇಟ್ಟಿರುವ ಪರಿಣಾಮ ಹಲವು ಜೀವಗಳು ಕಳೆದುಕೊಂಡಿದ್ದು, ರೈತರು ಬೆಳೆದ ಬೆಳೆಗಳನ್ನೂ ನಾಶಗೊಳಿಸುತ್ತಿದೆ. ಕಾರ್ಮಿಕರು, ಬೆಳೆಗಾರರು ಎಂಬ ಬೇದವಿಲ್ಲದೆ ಎಲ್ಲರೂ ಒಟ್ಟಾಗಿ ಜಿಲ್ಲೆಯಲ್ಲಿ ಬೃಹತ್ ಹೋರಾಟ ರೂಪಿಸಲು ಮುಂದಾಗಬೇಕೆಂದರು.

ಮಾಜಿ ಎಂಎಲ್‍ಸಿ ಅರುಣ್ ಮಾಚಯ್ಯ ಮಾತನಾಡಿ, ಕಾಡಾನೆ ಹಾವಳಿ ಬಗ್ಗೆ ಅರಣ್ಯ ಅಧಿಕಾರಿಗಳು ಸರ್ಕಾರಕ್ಕೆ ಯಾವ ರೀತಿ ವರದಿ ಸಲ್ಲಿಸುತ್ತಿದ್ದಾರೆ ಎಂಬುವುದರ ಬಗ್ಗೆ ಅನುಮಾನ ಮೂಡುತ್ತಿದೆ. ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯೇ ಪರಿಸ್ಥಿತಿ ಮಿತಿ ಮೀರಲು ಕಾರಣ ಎಂದರು.

ಪ್ರತಿಭಟನೆಯಲ್ಲಿ ನಂದ ಸುಬ್ಬಯ್ಯ, ದೇವಣಿರ ಸುಜಯ್, ಅನಿಲ್ ಶೆಟ್ಟಿ, ರೆಜಿತ್ ಕುಮಾರ್, ಮುಸ್ತಫ, ರಮೇಶ್, ಹನೀಫ, ಬೈಜು, ಉಮ್ಮರ್ ಹಾಜಿ ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.

ಪೊಲೀಸ್ ಠಾಣೆ ಮುತ್ತಿಗೆ: ಕರಡಿಗೋಡು ನಿವಾಸಿ ಮೋಹನ್‍ದಾಸ್ ಕಾಡಾನೆ ತುಳಿತಕ್ಕೆ ಒಳಗಾಗಿ ಮೃತಪಟ್ಟಿದ್ದು, ಅರಣ್ಯ ಇಲಾಖೆ ಉನ್ನತ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂಬುದಾಗಿ ಆರೋಪಿಸಿ ಅಧಿಕಾರಿಗಳ ವಿರುದ್ದ ಕರಡಿಗೋಡು ನಿವಾಸಿ ಸೋಮಣ್ಣ ಎಂಬವರು ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ ಪ್ರಕರಣ ದಾಖಲಿಸಿ ಕೊಳ್ಳದೆ ಇರುವ ಕಾರಣ ಪ್ರತಿಭಟನಾಕಾರರು ಸಿದ್ದಾಪುರ ಠಾಣೆಗೆ ಮುತ್ತಿಗೆ ಹಾಕಿ ಎಫ್‍ಐಆರ್ ದಾಖಲಿಸುವಂತೆ ಪಟ್ಟು ಹಿಡಿದರು. ಒತ್ತಡಕ್ಕೆ ಮಣಿದು ಹಾಗೂ ನ್ಯಾಯಾಲಯದ ಆದೇಶದಂತೆ ಸಿದ್ದಾಪುರ ಪಿಎಸೈ ಅರಣ್ಯ ಅಧಿಕಾರಿಗಳಾದ, ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಾಣಾಧಿಕಾರಿ ಲಿಂಗರಾಜು, ಮಡಿಕೇರಿ ಉಪ ಅರಣ್ಯ ಸಂಕ್ಷಣಾಧಿಕಾರಿ ಮರಿಯ ಕ್ರಸ್ಟರಾಜ್ ಮತ್ತು ವಿರಾಜಪೇಟೆ ವಲಯ ಅರಣ್ಯ ಅಧಿಕಾರಿ ಗಂಗಾಧರ್ ವಿರುದ್ದ ಐಪಿಸಿ 304(ಎ) ಪ್ರಕರಣ ದಾಖಲಿಸಿ ಕೊಂಡಿದ್ದಾರೆ.

ಆರೋಪಿಗಳ ಬಂಧನಕ್ಕೆ ಒತ್ತಾಯ: ಕಾಡಾನೆ ದಾಳಿಗೆ ಬೆಳೆಗಾರ ಸಾವನ್ನಪ್ಪಿರುವ ಘಟನೆಗೆ ಸಂಬಂಧಿಸಿದಂತೆ ಅರಣ್ಯಾಧಿಕಾರಿಗಳ ಮೇಲೆ ಪ್ರಕರಣ ದಾಖಲಾಗಿದ್ದು, 48 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸದಿದ್ದರೆ ಜಿಲ್ಲೆಯ ಕಾರ್ಮಿಕರು ಹಾಗೂ ಬೆಳೆಗಾರರು ಒಟ್ಟು ಸೇರಿ ಮಡಿಕೇರಿಯಲ್ಲಿ ಬೃಹತ್ ಹೋರಾಟ ರೂಪಿಸುವುದಾಗಿ ರೈತ ಸಂಘ ಹಾಗೂ ವಿವಿಧ ಕಾರ್ಮಿಕ ಸಂಘಟನೆಗಳ ಪ್ರಮುಖರು ಪತ್ರಿಕಾಗೋಷ್ಟಿಯಲ್ಲಿ ಎಚ್ಚರಿಸಿದ್ದಾರೆ. 

ಗೋಷ್ಟಿಯಲ್ಲಿ ಹೇಮಚಂದ್ರ, ದೇವಣಿರ ಸುಜಯ್, ದರ್ಮಜ ಉತ್ತಪ್ಪ, ಪಿ.ಆರ್ ಭರತ್, ಮಹದೇವ, ಗಣಪತಿ ಇದ್ದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News