ಗ್ರಾಮದ ಸ್ವಚ್ಛತೆಯ ಜವಾಬ್ದಾರಿ ನಮ್ಮದೇ: ಬಿ.ಸುರೇಶ್‍ಗೌಡ

Update: 2018-01-23 16:52 GMT

ತುಮಕೂರು,ಜ.23: ನಮ್ಮ ಮನೆ, ಗ್ರಾಮವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನನ್ನ ಜವಾಬ್ದಾರಿ ಎಂದು ವಿದ್ಯಾರ್ಥಿಗಳು ಅರಿತುಕೊಂಡಾಗ ಮಾತ್ರ ಸ್ವಚ್ಛ ಭಾರತ ನಿರ್ಮಾಣವಾಗುತ್ತದೆ ಎಂದು ತುಮಕೂರು ಗ್ರಾಮಾಂತರ ಶಾಸಕ ಬಿ.ಸುರೇಶ್‍ಗೌಡ ಅಭಿಪ್ರಾಯಪಟ್ಟಿದ್ದಾರೆ.

ತುಮಕೂರು ತಾಲೂಕು ಹೊನಸಿಗೆರೆ ಸರಕಾರಿ ಶಾಲೆಯಲ್ಲಿ ಕೇಂದ್ರ ವಾರ್ತಾ ಇಲಾಖೆ ಮತ್ತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛ ಭಾರತ ಚಲನಚಿತ್ರ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸ್ವಚ್ಛ ಭಾರತ ನಿರ್ಮಾಣಕ್ಕೆ ವಿದ್ಯಾರ್ಥಿಗಳ ಸಹಕಾರ ಅಗತ್ಯವಾಗಿದ್ದು, ವಿದ್ಯಾರ್ಥಿಗಳು ಸಹಕಾರ ನೀಡಿದರೆ ಪರಿಶುದ್ಧ ಸಮಾಜ ನಿರ್ಮಾಣವನ್ನು ಕಾಣಬಹುದಾಗಿದೆ ಎಂದರು.

ಸ್ವಚ್ಛ ಭಾರತ ನಿರ್ಮಾಣ ಮಾಡಬೇಕೆಂಬುದು ಮಹಾತ್ಮಗಾಂಧೀಜಿ ಅವರ ಕನಸನ್ನು ನನಸಾಗಿಸುವ ದೃಷ್ಠಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರು ಸ್ವಚ್ಛ ಭಾರತ ಅಭಿಯಾನವನ್ನು ಪ್ರಾರಂಭಿಸಿ ಜನರಲ್ಲಿ ಅರಿವು ಮೂಡಿಸಿ ಸ್ವಚ್ಛ ಭಾರತ ನಿರ್ಮಾಣ ಮಾಡಲು ಶ್ರಮಿಸುತ್ತಿದ್ದಾರೆ.ಇದಕ್ಕೆ ಯುವಕರು, ವಿದ್ಯಾರ್ಥಿಗಳ ಸಹಕಾರ ಅಗತ್ಯವಾಗಿದ್ದು, ನಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಹೇಗೆ ಸ್ವಚ್ಛವಾಗಿಟ್ಟುಕೊಳ್ಳಬೇಕೆಂಬುದನ್ನು ವಿದ್ಯಾರ್ಥಿಗಳು ಅರಿತುಕೊಂಡು, ಅಕ್ಕಪಕ್ಕದವರಿಗೆ ತಿಳುವಳಿಕೆಯನ್ನು ನೀಡುವಂತೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಈ ವೇಳೆ ಮಕ್ಕಳಿಗೆ ಸ್ವಚ್ಛ ಭಾರತ ಅಭಿಯಾನದ ಬಗ್ಗೆ ಚಿತ್ರವನ್ನು ತೊರಿಸಿ ಅರಿವು ಮೂಡಿಸಲಾಯಿತು.

ಕಾರ್ಯಕ್ರಮದಲ್ಲಿ ಕೇಂದ್ರ ಮತ್ತು ರಾಜ್ಯ ಪ್ರಸಾರ ಸಂಸ್ಥೆಯ ಹೇಮಂತ್, ಹೊನಸಿಕೆರೆ ಶಾಲೆಯ ಮುಖ್ಯಶಿಕ್ಷಕಿ ಜಗದಾಂಬ, ಗ್ರಾಮದ ಹಿರಿಯರಾದ ರುದ್ರಪ್ಪ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News