ದಾವಣಗೆರೆ: ನೇತಾಜಿ ಸುಭಾಷ್ ಚಂದ್ರಬೋಸ್ 121ನೇ ಜನ್ಮ ದಿನಾಚರಣೆ

Update: 2018-01-23 16:58 GMT

ದಾವಣಗೆರೆ,ಜ.23 : ನೇತಾಜಿ ಸುಭಾಷ್ ಚಂದ್ರಬೋಸ್ ನೆನಪಿನಲ್ಲಿ ಉಳಿಯುವಂಥಹ ವ್ಯಕ್ತಿತ್ವ. ಅವರು ಕನಸು ಸಂಪೂರ್ಣ ಶಿಕ್ಷಣ, ಹಸಿವು ಮುಕ್ತ, ಧರ್ಮ, ಜಾತಿ ಮೀರಿದ ಸಮಾಜ ನಿರ್ಮಾಣವಾಗಬೇಕಾದ ಅನಿವಾರ್ಯತೆ ಇದೆ ಎಂದು ಎಐಎಂಎಸ್‍ಎಸ್ ರಾಜ್ಯ ಕಾರ್ಯದರ್ಶಿ ಶೋಭಾ ಹೇಳಿದರು. 

ನಗರದ ಬಾಪೂಜಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮಂಗಳವಾರ ಎಐಡಿಎಸ್‍ಒ ಸಂಘಟನೆ ವತಿಯಿಂದ ಹಮ್ಮಿಕೊಂಡಿದ್ದ ನೇತಾಜಿ ಸುಭಾಷ್ ಚಂದ್ರಬೋಸ್ ಅವರ 121ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸುಭಾಷ್ ಚಂದ್ರಭೋಸ್ ಸುಂದರ ಭಾರತ ನಿರ್ಮಾಣದ ಕನಸ ಕಂಡಿದ್ದು, ಸಾಕಾರಗೊಳ್ಳಬೇಕಾದರೆ ಯುವ ಪೀಳಿಗೆಯ ಜವಾಬ್ದಾರಿಗಳು ಸಾಕಷ್ಟು ಇದೆ ಎಂದರು.

ಧರ್ಮ ಮತ್ತು ಜಾತಿ ವ್ಯಕ್ತಿ ಮನೆಯ ಒಳಗೆ ಇದ್ದಾಗ ಮಾತ್ರ ಆಚರಣೆಯಾಗಬೇಕು. ಆತ ಮನೆಯಿಂದ ಹೊರಬಂದ ಮೇಲೆ ಇಡೀ ದೇಶ ಮತ್ತು ಸಮಾಜದ ಹಿತಕ್ಕಾಗಿಯೇ ದುಡಿಯುವ ತವಕವಿರಬೇಕು. ಇಂತಹ ಭಾವನೆ ಸುಭಾಷ್ ಚಂದ್ರಭೋಸ್ ಅವರಲ್ಲಿ ಇತ್ತು. ವಿಶೇಷವಾಗಿ ಸಾಮಾಜಿಕ ಸಮಸ್ಯೆಗಳಿಗೆ ಸಂಘರ್ಷದ ರೂಪ ಕೊಟ್ಟಿದ್ದಾರೆ ಎಂದು ಬಣ್ಣಿಸಿದರು.

ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ತಿಪ್ಪೇಸ್ವಾಮಿ ಮಾತನಾಡಿ, ಸುಭದ್ರ ರಾಷ್ಟ್ರ ನಿರ್ಮಾಣಕ್ಕೆ ರಾಜಕೀಯ ಬದಲಾವಣೆಯಾದರೆ ಸಾಲದು. ಸಾಂಸ್ಕೃತಿಕ ಬದಲಾವಣೆಯೂ ಆಗಬೇಕು. ಇಂದಿನ ಸರ್ಕಾರಗಳು ದುಡಿಯುವ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡದೇ, ವಿದ್ವಾವಂತರಿಗೆ ಉದ್ಯೋಗ ನೀಡದೆ ಉಚಿತ ವೈಫೈ, ಇಂಟರ್ ಸೇವೆಗಳನ್ನು ನೀಡಿ ಯುವಜನರು ದುಡಿಮೆಯಿಂದ ವಿಮುಖರಾಗುವಂತೆ ಮಾಡುತ್ತಿವೆ ಎಂದರು.

ಬಾಪೂಜಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯ ಕೆ.ಎಸ್. ವೀರೇಶ್ ಮಾತನಾಡಿ, ಮಹನೀಯರ ಜಯಂತಿ ಆಚರಣೆ ಉದ್ದೇಶ ಈಡೇರುತ್ತಿಲ್ಲ. ಕೇವಲ ಭಾಷಣ ಮತ್ತು ಹೇಳಿಕೆಗೆ ಹೊರತಾಗಿದೆ. ಆವರ ತತ್ವಾದರ್ಶ ಪಾಲನೆ ಮಾಡುವವರೇ ಇಲ್ಲದಂತಾಗಿದೆ. ದೇಶದಲ್ಲಿ ಹಳೆಯ ಸಮಸ್ಯೆಗೆ ಮುಕ್ತಿ ಇಲ್ಲ ಭವಿಷ್ಯದ ಸಮಸ್ಯೆಗೆ ಪರಿಹಾರವಿಲ್ಲ ಎನ್ನುವ ವಾತಾವರಣ ನಿರ್ಮಾಣವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಎಐಡಿವೈಒ ಉಪಾಧ್ಯಕ್ಷ ಮಧು ತೊಗಲೇರಿ ಮತ್ತಿತರರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News