ಕುದುರೆಮುಖ ರಾಷ್ಟ್ರೀಯ ಉದ್ಯಾನವನದಿಂದ ಹೊರಬಂದ ಎಸ್ಸಿಎಸ್ಟಿ ಕುಟುಂಬಗಳಿಗೆ ಪರಿಹಾರ : ಎಂ.ಕೆ.ಶ್ರೀರಂಗಯ್ಯ

Update: 2018-01-23 17:18 GMT

ಚಿಕ್ಕಮಗಳೂರು, ಜ.23: ಕುದುರೆ ಮುಖ ರಾಷ್ಟ್ರೀಯ ಉದ್ಯಾನವನದಿಂದ ಹೊರ ಬಂದಿರುವ 25 ಎಸ್ಸಿ ಎಸ್ಟಿ ಕುಟುಂಬಗಳಿಗೆ ಪರಿಹಾರ ನೀಡಲಾಗಿದೆ. 8 ರಿಂದ 10 ಕುಟುಂಬಗಳ ಸಮಸ್ಯೆ ಹಾಗೆ ಉಳಿದಿದೆ ಎಂದು ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಹೇಳಿದರು.

ಅವರು ಮಂಗಳವಾರ ಜಿಲ್ಲಾಧಿಕಾರಿ ಕಛೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಅವರು ತಮ್ಮ ಜಾಗದಲ್ಲಿ ಅಡಕೆ, ವೆನಿಲ್ಲಾ ಬೆಳೆದಿದ್ದರು ಎಂಬ ಕಾರಣಕ್ಕೆ ಅದಕ್ಕನುಗುಣವಾದ ಪರಿಹಾರ ನೀಡಬೇಕು ಎಂಬುದು ಅವರ ಬೇಡಿಕೆಯಾಗಿದೆ ಎಂದು ನುಡಿದರು.

ಜಿಲ್ಲೆಯ ವಿವಿಧ ಭಾಗದಲ್ಲಿ ಕಾಣಿಸಿಕೊಂಡಿರುವ ಕುಡಿವ ನೀರಿನ ಸಮಸ್ಯೆ ಪರಿಹರಿಸಲು ಗ್ರಾಪಂ ಗಳಿಗೆ ಬಿಡುಗಡೆಯಾಗಿರುವ 14 ನೇ ಹಣಕಾಸು ಬಳಸುವಂತೆ ಸೂಚಿಸಲಾಗಿದೆ. ಕಳೆದ ವರ್ಷ ಸರಿಯಾಗಿ ಮಳೆ ಬಾರದೆ ಅಂತರ್ಜಲ ವೃದ್ಧಿಯಾಗಿಲ್ಲ. ಬಯಲು ಭಾಗದ ಕಡೂರು, ತರೀಕೆರೆ ಮತ್ತು ಚಿಕ್ಕಮಗಳೂರಿನ ಕೆಲ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಅಲ್ಲಿ ಟ್ಯಾಂಕರ್ ಮೂಲಕ ನೀರು ಕೊಡಲಾಗುತ್ತಿದೆ. ಕುಡಿಯುವ ನೀರಿನ ಸಮಸ್ಯೆಗೆ ಮೊದಲ ಆದ್ಯತೆ ನೀಡಬೇಕು. ಕಾಮಗಾರಿ ಬೇಕಿದ್ದರೆ ಮುಂದಿನ ವರ್ಷ ಮಾಡಬಹುದು ಎಂದು ಜನಪ್ರತಿನಿಗಳು ಮತ್ತು ಪಿಡಿಓ ಗಳಿಗೆ ಮನವರಿಕೆ ಮಾಡಲಾಗಿದೆ ಎಂದು ಹೇಳಿದರು.

ಮಾತೃಪೂರ್ಣ ಯೋಜನೆ ಮಲೆನಾಡು ಭಾಗದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಯಶಸ್ಸು ಕಾಣದ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆ ಮೇರೆಗೆ ಮಲೆನಾಡು ಗುಡ್ಡಗಾಡು ಪ್ರದೇಶದಲ್ಲಿ ಈ ಯೋಜನೆಗೆ ಆಗುವ ಅಡಚಣೆ ಸಂಬಂಧ ಇತ್ತೀಚೆಗೆ ನಡೆದ ಅಧಿಕಾರಿಗಳ ಸಭೆಯಲ್ಲಿ ಚರ್ಚಿಸಲಾಗಿದೆ. ಗರ್ಭಿಣಿ, ಬಾಣಂತಿಯರು ದೂರದ ಗುಡ್ಡಗಾಡಿನಿಂದ ಅಂಗನವಾಡಿ ಕೇಂದ್ರಕ್ಕೆ ಬಂದು ಪೌಷ್ಠಿಕ ಆಹಾರ ಪಡೆಯಲು ಕಷ್ಟವಾಗುತ್ತಿದೆ ಎಂಬ ದೂರುಗಳು ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ ಸಭೆ ನಡೆಸಿ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಸಂಬಂಧ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆಯುಕ್ತರಿಗೆ ಪ್ರಸ್ತಾವನೆ ಸಲ್ಲಿಸಿದ್ದು, ಪರಿಶೀಲನೆ ಹಂತದಲ್ಲಿದೆ ಎಂದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News