ಶಾಸಕರ ವರ್ತನೆ, ಕಾರ್ಯವೈಖರಿಗಳು ಶಕುನಿಗೆ ಹೋಲುತ್ತವೆ: ಗಾಯತ್ರಿ ಶಾಂತೇಗೌಡ

Update: 2018-01-23 17:30 GMT

ಚಿಕ್ಕಮಗಳೂರು, ಜ.23: ಶಾಸಕ ರವಿ ಅವರ ವರ್ತನೆಗಳು, ಕಾರ್ಯವೈಖರಿ, ಹಾವಭಾವಗಳು ಶಕುನಿಯನ್ನು ಹೋಲುವಂತಿವೆ ಎಂದು ವಿಧಾನ ಪರಿಷತ್ ಮಾಜಿ ಶಾಸಕಿ ಎ.ವಿ.ಗಾಯತ್ರಿ ಶಾಂತೇಗೌಡ ಹೇಳಿದ್ದಾರೆ.

ಅವರು ಈ ಕುರಿತು ಮಂಗಳವಾರ ಹೇಳಿಕೆ ನೀಡಿದ್ದು, ಸಿಎಂ ಸಿದ್ದರಾಮಯ್ಯರ ಹಾವಭಾವ ದುರ್ಯೋಧನ ಪಾತ್ರಕ್ಕೆ ಹೋಲುತ್ತವೆ ಎಂದು ಹೇಳಿರುವ ಶಾಸಕ ಸಿ.ಟಿ.ರವಿ ಅವರ ಹೇಳಿಕೆಗೆ ಮಂಗಳವಾರ ಪ್ರತಿಕ್ರಿಯಿಸಿರುವ ಗಾಯತ್ರಿ ಶಾಂತೇಗೌಡ, ಕೌರವರ ಜೊತೆಯಲ್ಲಿದ್ದುಕೊಂಡೆ ಅವರುಗಳನ್ನು ನಾಶ ಮಾಡಿದ ರೀತಿಯಲ್ಲೇ ಶಾಸಕರು ಈ ಕ್ಷೇತ್ರದಲ್ಲಿ ಶಕುನಿ ರೀತಿಯಲ್ಲಿ ಕ್ಷೇತ್ರವನ್ನು ಅಭಿವೃದ್ಧಿ ವಿಚಾರದಲ್ಲಿ ಹಾಳುಗೆಡವಿದ್ದಾರೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಪಾಂಡವರ ಪಕ್ಷ, ಬಿಜೆಪಿ ಕೌರವರ ಪಕ್ಷ ಎಂಬ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಅವರು, ಇಂತಹ ಶಕುನಿಗಳಿಂದ ಕೌರವರ ಪಕ್ಷ ಬಿಜೆಪಿ ನಾಶವಾಗುತ್ತದೆ. ಆ ಪಕ್ಷವನ್ನು ನಾಶ ಮಾಡಲು ಬೇರೆಯವರ ಅಗತ್ಯ ಇಲ್ಲ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಸರ್ಕಾರದಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ ನಡೆದಿದೆ ಎಂದು ಶಾಸಕರು ಹೇಳಿರುವುದು ಒಂದು ರೀತಿಯಲ್ಲಿ ಹಾಸ್ಯಾಸ್ಪದವಾಗಿದೆ. ಕೌರವರ ಪಕ್ಷ ರಾಜ್ಯದಲ್ಲಿ ಆಡಳಿತ ನಡೆಸುವ ಸಂದರ್ಭದಲ್ಲಿ ಭ್ರಷ್ಟಾಚಾರ ನಡೆಸಿರುವ ಯಾವ ಮಂತ್ರಿಗಳು ಹಾಗೂ ಯಾವ ಮುಖ್ಯಮಂತ್ರಿ ಜೈಲು ಸೇರಿ ಬಂದಿದ್ದಾರೆ ಎಂಬುದನ್ನು ರಾಜ್ಯದ ಜನರು ಬಲ್ಲವರಾಗಿದ್ದಾರೆ. ರಾಜ್ಯದ ಇತಿಹಾಸದಲ್ಲಿ ಜೈಲು ಸೇರಿರುವ ಮುಖ್ಯಮಂತ್ರಿ ಯಾವ ಪಕ್ಷದಲ್ಲಿದ್ದರು ಎಂಬುವ ಬಗ್ಗೆ ಶಾಸಕರು ಒಮ್ಮೆ ನೆನಪಿಸಿಕೊಳ್ಳಬೇಕು. ತಮ್ಮ ಮನೆ ಮುಂದೆ ಆಳುದ್ದ ಗುಂಡಿ ಬಿಟ್ಟುಕೊಂಡು ಎದುರು ಮನೆಯ ಗೇಣುದ್ದ ಗುಂಡಿ ಮುಚ್ಚಿಸುವ ಕೆಲಸ ಶೋಭೆ ತರುವುದಿಲ್ಲ ಎಂಬುದನ್ನು ಶಾಸಕರು ಮನಗಾಣಬೇಕು ಎಂದು ತಿಳಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ರಾಜಕೀಯ ಜೀವನದಲ್ಲಿ ಒಂದೇ ಒಂದು ಭ್ರಷ್ಟಾಚಾರ ಪ್ರಕರಣ ಇಲ್ಲದಿದ್ದರೂ ಮೊಸರಿನಲ್ಲಿ ಕಲ್ಲು ಹುಡುಕುವ ವ್ಯರ್ಥ ಪ್ರಯತ್ನವನ್ನು ಶಾಸಕರು ಮಾಡುತ್ತಿದ್ದಾರೆ. ರಾಜ್ಯದಲ್ಲಿ ಹಿಂದೆಂದೂ ಕಂಡರಿಯದಷ್ಟು ಅಭಿವೃದ್ಧಿ ಕಾರ್ಯಗಳು, ಜನಪರ, ಸಮಾಜಮುಖಿ ಕಾರ್ಯಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದಿವೆ. ಅದನ್ನು ಸಹಿಸಿಕೊಳ್ಳಲಾರದೆ ಬಿಟ್ಟಿ ಪ್ರಚಾರಕ್ಕಾಗಿ ಈ ರೀತಿಯ ಹೇಳಿಕೆಗಳನ್ನು ಶಾಸಕರು ನೀಡುತ್ತಿದ್ದಾರೆ. ಅವರ ವರ್ತನೆಗಳು ಶಕುನಿ ರೀತಿಯಲ್ಲಿವೆ ಎಂಬುದಕ್ಕೆ ಅವರ ಹೇಳಿಕೆಗಳೇ ಸಾಕ್ಷಿಯಾಗಿವೆ ಎಂದು ಟೀಕಿಸಿದ್ದಾರೆ.

ಕೊಟ್ಟ ಮಾತಿಗೆ ತಪ್ಪದ ರಾಜ್ಯ ಸರ್ಕಾರ ನಮ್ಮದು. ಚುನಾವಣೆಯಲ್ಲಿ ಕೊಟ್ಟಿದ್ದ ಭರವಸೆಗಳಲ್ಲಿ ಬಹುತೇಕ ಈಡೇರಿವೆ ಎಂಬುದು ಹೆಮ್ಮೆಪಡುವ ವಿಚಾರ ಎಂದಿರುವ ಅವರು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಬಿಜೆಪಿ ಸರ್ಕಾರ ಇದ್ದ ಸಂದರ್ಭದಲ್ಲಿ ಎಷ್ಟೆಷ್ಟು ಕೆರೆಗಳ ಹೂಳು ತೆಗೆಯಲಾಗಿದೆ? ಹೇಗೆ ಅಭಿವೃದ್ಧಿಪಡಿಸಲಾಗಿದೆ ಎಂಬ ಬಗ್ಗೆ ಮಾಹಿತಿಗಳು ನಮ್ಮ ಬಳಿ ಇವೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News