ಪರಿವರ್ತನಾ ರ್ಯಾಲಿಯಿಂದ ರಾಜ್ಯದ ಜ್ವಲಂತ ಸಮಸ್ಯೆ ಅರಿತಿದ್ದೇನೆ: ಬಿ.ಎಸ್.ಯಡಿಯೂರಪ್ಪ

Update: 2018-01-23 17:39 GMT

ಮೈಸೂರು,ಜ.23: ನವ ಕರ್ನಾಟಕ ನಿರ್ಮಾಣ ಯಾತ್ರೆ ಯಶಸ್ವಿಯಾಗಿ 84 ನೇ ದಿನಕ್ಕೆ ಕಾಲಿಟ್ಟಿದೆ. ಈವರೆಗೆ 10 ಸಾವಿರ ಕಿಲೋ ಮೀಟರ್ ಪರಿವರ್ತನಾ ಯಾತ್ರೆ ಹಮ್ಮಿಕೊಂಡಿದ್ದೇನೆ. ಇದೊಂದು ದಾಖಲೆಯಾಗಿದ್ದು, 2 ಕೋಟಿ ಜನರನ್ನು ಉದ್ದೇಶಿಸಿ ಮಾತನಾಡಿದಂತಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ಮೈಸೂರಿನಲ್ಲಿ ಪರಿವರ್ತನಾ ರ್ಯಾಲಿ ನಡೆಸುತ್ತಿರುವ ಬಿ.ಎಸ್.ಯಡಿಯೂರಪ್ಪ, ಮಂಗಳವಾರ ಖಾಸಗಿ ಹೋಟೆಲ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಪರಿವರ್ತನಾ ಯಾತ್ರೆ ಪ್ರವಾಸದಿಂದ ಪ್ರತಿಯೊಂದು ಕ್ಷೇತ್ರದ ಜ್ವಲಂತ ಸಮಸ್ಯೆ ಅರಿತಿದ್ದೇನೆ. 224 ಕ್ಷೇತ್ರಗಳ ಅಭ್ಯರ್ಥಿಗಳನ್ನು ಗುರುತಿಸಲು ಪರಿವರ್ತನಾ ಯಾತ್ರೆ ಸಹಕಾರಿಯಾಗಿದೆ. ಪರಿವಾರ, ತಳವಾರ ಸಮುದಾಯ ಎಸ್.ಟಿ ಸೇರಿಸಲು ಪ್ರಯತ್ನಿಸುತ್ತೇನೆ. ರಾಜ್ಯದಲ್ಲಿ ಎಲ್ಲಿಯೂ ಕೆರೆ ಕಟ್ಟೆ ತುಂಬಿಲ್ಲ. ಸಿದ್ದರಾಮಯ್ಯ ರೈತರ ಕಷ್ಟ ಕೇಳುತ್ತಿಲ್ಲ. ಹೀಗಾಗಿ ಪರಿವರ್ತನಾ ಯಾತ್ರೆ ಉದ್ದಕ್ಕೂ ನಾನು ರೈತರಿಗೆ ಒಂದೇ ಭರವಸೆ ನೀಡಿದ್ದೇನೆ. ನಾನು ಪ್ರತಿವರ್ಷ 20 ಸಾವಿರ ಕೋಟಿ ಹಣ ನೀರಾವರಿಗೆ ಮೀಸಲಿಟ್ಟು 5 ವರ್ಷಗಳಲ್ಲಿ ರೈತರ ಸಮಸ್ಯೆ ಸಂಪೂರ್ಣ ಬಗೆಹರಿಸುವ ಭರವಸೆ ನೀಡಿದ್ದೇನೆ. ರಾಜ್ಯದಲ್ಲಿ ಸಿದ್ದರಾಮಯ್ಯ ತುಘಲಕ್ ದರ್ಬಾರ್ ನಡೆಸುತ್ತಿದ್ದಾರೆ. ಕಷ್ಟ ಹೇಳಿಕೊಳ್ಳಲು ಸಿದ್ದರಾಮಯ್ಯ ಕೈಗೆ ಸಿಗುತ್ತಿಲ್ಲ. ಯಾವುದೇ ನಿಯಮಗಳಿಲ್ಲದೆ ರಾಜ್ಯದಲ್ಲಿ ಅಧಿಕಾರಿಗಳ ವರ್ಗಾವಣೆಯಾಗುತ್ತಿದೆ. ಇದು ಸಿದ್ದರಾಮಯ್ಯನವರಿಗೆ ಛೀಮಾರಿ ಹಾಕಲು ಕಾರಣವಾಗಿದೆ ಎಂದರು.

ಉತ್ತರ ಪ್ರದೇಶದ ಫಲಿತಾಂಶ ಕರ್ನಾಟಕದಲ್ಲಿ ಮರುಕಳಿಸುತ್ತದೆ. ಚುನಾವಣಾ ಪೂರ್ವ ಸಮೀಕ್ಷೆಗಳ ಬಗ್ಗೆ ನಾನು ಯಾವುದೇ ಟೀಕೆ ಮಾಡಲ್ಲ. ಚುನಾವಣೆಗೆ ಒಂದು ತಿಂಗಳು ಇರುವಾಗ ಬರುವ ಸಮೀಕ್ಷೆಯಲ್ಲಿ ನಿಜಾಂಶ ಗೊತ್ತಾಗುತ್ತದೆ. ಮಹದಾಯಿ ವಿಚಾರವಾಗಿ ಬೆಂಗಳೂರಿಗೆ ಬಂದು ಪ್ರತಿಭಟನೆ ಮಾಡಿದವರೆಲ್ಲರೂ ಕಾಂಗ್ರೆಸ್ ಪ್ರೇರಿತ ರೈತರು ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅತಂತ್ರ ಸ್ಥಿತಿಯಲ್ಲಿದ್ದಾರೆ. ಹೀಗಾಗಿ ಬೇರೆ ಕ್ಷೇತ್ರದ ಹುಡುಕಾಟದಲ್ಲಿದ್ದಾರೆ. ನಿಮಗೆ ಬಜೆಟ್ ಮಂಡನೆ ಮಾಡಲು ಸಾಧ್ಯವಿಲ್ಲ. ಯಾಕೆಂದರೆ ಚುನಾವಣೆ ನೀತಿ ಸಂಹಿತೆ ಜಾರಿಯಾಗಲಿದೆ. ಮುಖ್ಯಮಂತ್ರಿ ಬಗ್ಗೆ ಯಾರೂ ಕೂಡ ಮೃದು ಧೋರಣೆ ತೋರಲು ಸಾಧ್ಯವಿಲ್ಲ. ದಪ್ಪ ಚರ್ಮದ ಸರ್ಕಾರ ಮತ್ತು ಬಹುಮತ ಇದೆ ಎಂದು ಸರ್ವಾಧಿಕಾರದ ಆಡಳಿತ ನಡೆಸುತ್ತಿದ್ದಾರೆ. ಇದಕ್ಕೆ ಜನ ತಕ್ಕ ಪಾಠ ಕಲಿಸುತ್ತಾರೆ. ನಿಮ್ಮ ಮೇಲಿನ ಎಲ್ಲ ಪ್ರಕರಣವನ್ನು ಸಿಓಡಿ ಯಿಂದ ಖುಲಾಸೆ ಮಾಡಿಸಲು ನಿಂತಿದ್ದೀರಾ? ನಿಮ್ಮ ವಿರುದ್ದ ಚಾರ್ಜ್ ಶೀಟ್ ತಯಾರು ಮಾಡುತ್ತಿದ್ದೇವೆ. ಇದನ್ನು ಪ್ರತಿ ಮನೆಗೂ ಹಂಚುತ್ತೇವೆ. ನಿಮ್ಮೆಲ್ಲ ಶಾಸಕರ ಮಾನ ಮರ್ಯಾದೆ ಹರಾಜು ಹಾಕುತ್ತೇವೆ ಎಂದು ಸಿದ್ದರಾಮಯ್ಯನವರ ವಿರುದ್ಧ ವಾಗ್ದಾಳಿ ನಡೆಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಕೋಟೆ ಶಿವಣ್ಣ, ನಗರಾಧ್ಯಕ್ಷ ಡಾ.ಬಿ.ಹೆಚ್.ಮಂಜುನಾಥ್, ಸಂಸದ ಪ್ರತಾಪ್ ಸಿಂಹ, ಮಾಜಿ ಸಚಿವ ಎಸ್.ಎ.ರಾಮದಾಸ್, ಪ್ರಭಾಕರ ಶಿಂಧೆ ಸೇರಿದಂತೆ ಹಲವರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News