ಭಾರತದ ವರ್ಚಸ್ಸಿಗೆ ಕಳಂಕ ಈ ಮಲಹೊರುವ ವ್ಯವಸ್ಥೆ

Update: 2018-01-24 04:58 GMT

‘‘ಈ ದೇಶದಲ್ಲಿ ಮಲ ಹೊರುವ ಪದ್ಧತಿ ಅಸ್ತಿತ್ವದಲ್ಲೇ ಇಲ್ಲ’’ ‘‘ಕಾರ್ಮಿಕರನ್ನು ಮ್ಯಾನ್ ಹೋಲ್‌ಗಳಿಗೆ ಇಳಿಸುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ’’ ಇಂತಹ ಹೇಳಿಕೆಗಳನ್ನು ತಿಂಗಳಿಗೊಮ್ಮೆಯಾದರೂ ಅಧಿಕಾರಿಗಳು, ರಾಜಕಾರಣಿಗಳು ನೀಡುತ್ತಾ ಬಂದಿದ್ದಾರೆ. ಆದರೆ ಅದರ ಬೆನಿಗೇ ಮಲಹೊರುವ ವ್ಯವಸ್ಥೆಗೆ ಕಾರ್ಮಿಕರು ಬಲಿಯಾದ ಸುದ್ದಿಗಳೂ ಮಾಧ್ಯಮಗಳಲ್ಲಿ ಪ್ರಕಟವಾಗುತ್ತವೆ. ಈ ದೇಶದಲ್ಲಿ ತಿಂಗಳಿಗೊಮ್ಮೆಯಾದರೂ ಮಲದ ಗುಂಡಿಯಲ್ಲಿ ದಲಿತನೊಬ್ಬನ ಹೆಣ ತೇಲುತ್ತಿರುತ್ತದೆ. ಯಾಕೆ? ಅವರೇನು ಸ್ವ ಇಚ್ಛೆಯಲ್ಲಿ ಮಲದ ಗುಂಡಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡವರೆ? ಆ ದೇಶದಲ್ಲಿ ಮಲಹೊರುವ ಪದ್ಧತಿ ಇದೆ ಎನ್ನುವುದನ್ನೇ ಪ್ರಾಮಾಣಿಕವಾಗಿ ಒಪ್ಪಿಕೊಳ್ಳಲು ನಾಯಕರು ಸಿದ್ಧವಿಲ್ಲದ ಮೇಲೆ, ಇದಕ್ಕೊಂದು ಪರಿಹಾರವನ್ನು ಅವರಿಂದ ನಿರೀಕ್ಷಿಸಲು ಹೇಗೆ ಸಾಧ್ಯ? ಸರಕಾರವೇ ಲೋಕಸಭೆಯಲ್ಲಿ ನೀಡಿರುವ ಹೇಳಿಕೆಯಂತೆ 2017ರಲ್ಲಿ 300ಕ್ಕೂ ಅಧಿಕ ಮಲ ಹೊರುವ ಕಾರ್ಮಿಕರು ಮೃತಪಟ್ಟಿದ್ದಾರೆ. ಒಂದೆಡೆ ಶುಚಿತ್ವದ ಹೆಸರಿನಲ್ಲಿ ಸರಕಾರ ತೆರಿಗೆ ಸಂಗ್ರಹಕ್ಕೆ ಇಳಿದಿದೆ. ಸಾವಿರಾರು ಕೋಟಿ ರೂಪಾಯಿಯನ್ನು ಈ ಆಂದೋಲನಕ್ಕೆ ಸರಕಾರ ವ್ಯಯಿಸುತ್ತಿದೆ. ಆದರೆ ಮಲಹೊರುವ ಕಾರ್ಮಿಕರ ಬದುಕಿನಲ್ಲಿ ಮಾತ್ರ ಯಾವುದೇ ಬದಲಾವಣೆಯಾಗಿಲ್ಲ. ಪ್ರತೀ ವರ್ಷ ಅವರ ಸಾವಿನ ಸಂಖ್ಯೆ ಹೆಚ್ಚಳವಾಗುತ್ತಲೇ ಇದೆ. ಯಾಕೆ? ನರೇಂದ್ರ ಮೋದಿಯವರು ಗುಜರಾತಿನ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ತಮ್ಮ ಸರಕಾರಿ ಪ್ರಕಟಣೆಯಲ್ಲಿ ಈ ವೃತ್ತಿಯನ್ನು ಸಮರ್ಥಿಸುವಂತಹ ಹೇಳಿಕೆಯನ್ನು ಪ್ರಕಟಿಸಿದ್ದರು. ‘‘ಮಲಹೊರುವವರಿಗೆ ಆ ಕೆಲಸದಿಂದಲೇ ಮೋಕ್ಷ ಸಿಗುತ್ತದೆ’’ ಎನ್ನುವಂತಹ ಅವರ ಉವಾಚ ಭಾರೀ ಟೀಕೆಗೆ ಒಳಗಾಗಿತ್ತು. ಇಂದಿಗೂ ಈ ವೃತ್ತಿ ಯಾಕೆ ಜೀವಂತವಾಗಿ ಉಳಿದಿದೆ ಎಂದರೆ, ಈ ನೆಲದಲ್ಲಿ ಇದು ವೃತ್ತಿ ಮಾತ್ರವಲ್ಲ, ಜಾತಿಯೂ ಕೂಡ. ನಿರ್ದಿಷ್ಟ ಜಾತಿಯೊಂದು ಇರುವುದೇ ಇಂತಹ ಕೆಲಸಗಳನ್ನು ಮಾಡಲು ಎಂಬ ಮೇಲ್ಜಾತಿಯ ಮನಸ್ಥಿತಿ, ಈ ವೃತ್ತಿಯನ್ನು ಇಲ್ಲವಾಗಿಸುವುದಕ್ಕೆ ಬಿಡುತ್ತಿಲ್ಲ. ಈ ಸಮುದಾಯ ಏಳಿಗೆಯಾದರೆ ಮಲ ಹೊರುವ ವೃತ್ತಿಯನ್ನು ನಿರ್ವಹಿಸುವವರು ಯಾರು ಎನ್ನುವುದು ಮೇಲ್ಜಾತಿಯ ಮುಂದಿರುವ ಇನ್ನೊಂದು ಪ್ರಶ್ನೆ. ಈ ವೃತ್ತಿಯನ್ನು ಅಳಿಸಿ ಹಾಕಿದರೆ ಈ ಸಮುದಾಯ ಸಮಾಜದಲ್ಲಿ ಸ್ವಾಭಿಮಾನದ ವೃತ್ತಿಯ ಕಡೆಗೆ ಕಣ್ಣು ಹೊರಳಿಸುತ್ತದೆ. ಮೇಲ್ಜಾತಿಯ ಜನರ ಜೊತೆಗೆ ಸಮವಾದ ಪಾಲನ್ನು ಕೇಳುತ್ತದೆ ಎನ್ನುವ ಜಾತೀಯ ಮನಸ್ಸು ಇದರ ಹಿಂದೆ ಕೆಲಸ ಮಾಡುತ್ತಿದೆ. ಆದುದರಿಂದಲೇ ಈ ಕಾರ್ಮಿಕರನ್ನು ಮಲದ ಗುಂಡಿಗೆ ಇಳಿಸುವಾಗ ಮೇಲ್ಜಾತಿಯ ಅಧಿಕಾರಿಗಳ ಆತ್ಮಸಾಕ್ಷಿ ಚುಚ್ಚುವುದಿಲ್ಲ.

ಕಳೆದ ವರ್ಷ ತಮಿಳು ನಾಡಿನಲ್ಲಿ 140 ಮಂದಿ ಮೃತಪಟ್ಟಿದ್ದರೆ, ಕರ್ನಾಟಕದಲ್ಲಿ 59, ಉತ್ತರ ಪ್ರದೇಶದಲ್ಲಿ 52 ಮತ್ತು ದಿಲ್ಲಿಯಲ್ಲಿ 12 ಮಲಹೊರುವ ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಸರಕಾರಿ ಅಂಕಿಅಂಶಗಳು ಹೇಳುತ್ತವೆ. ಹಾಗೆ ನೋಡಿದರೆ ಎಲ್ಲೆಲ್ಲ ಜಾತಿ ವ್ಯವಸ್ಥೆ ಬಲವಾಗಿದೆಯೋ ಅಲ್ಲೆಲ್ಲ ಮಲ ಹೊರುವ ಪದ್ಧತಿ ಜೀವಂತವಾಗಿದೆ. ಅಂದರೆ ಮೇಲಿನ ಅಂಕಿಅಂಶಗಳು ಅಧಿಕೃತ ಅಲ್ಲ. ತೀರಾ ಸುದ್ದಿಯಾದ ಪ್ರಕರಣಗಳನ್ನಷ್ಟೇ ಅಧಿಕಾರಿಗಳು ದಾಖಲಿಸುತ್ತಾರೆ. ಮುಖ್ಯವಾಗಿ ನಗರ ಪ್ರದೇಶಗಳಲ್ಲಿ ಸಂಭವಿಸುವ ಸಾವುಗಳಷ್ಟೇ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತವೆ. ಇದೇ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದಲ್ಲಿ ನಡೆಯುವ ಸಾವುಗಳನ್ನು ಅಧಿಕಾರಿಗಳು ಮತ್ತು ರಾಜಕಾರಣಿಗಳ ನೇತೃತ್ವದಲ್ಲೇ ಮುಚ್ಚಿ ಹಾಕಲಾಗುತ್ತದೆ. ಹಾಗೆ ನೋಡಿದರೆ ಉತ್ತರ ಪ್ರದೇಶ, ರಾಜಸ್ಥಾನ, ಹರ್ಯಾಣದಂತಹ ಮೇಲ್ಜಾತಿ ಪ್ರಾಬಲ್ಯವಿರುವ ರಾಜ್ಯಗಳಲ್ಲಿಯೇ ಮಲಹೊರುವ ಪದ್ಧತಿ ಹೆಚ್ಚಿನ ಪ್ರಮಾಣದಲ್ಲಿ ಜೀವಂತವಿದೆ. ಅಧಿಕಾರ ಮೇಲ್ಜಾತಿಯ ಕೈಯಲ್ಲಿರುವ ಕಾರಣದಿಂದಲೇ ಅಲ್ಲಿ ನಡೆಯುವ ಸಾವುಗಳು ಬಹಿರಂಗವಾಗುವುದಿಲ್ಲ. ‘ಅಪಘಾತ’ವಾಗಿ ಅವುಗಳು ಮುಚ್ಚಿ ಹೋಗುತ್ತವೆ. ಈ ನಿಟ್ಟಿನಲ್ಲಿ ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಮಲಹೊರುವ ಪದ್ಧತಿಯ ಕುರಿತಂತೆ ಪ್ರಾಮಾಣಿಕ ಸಮೀಕ್ಷೆಯೊಂದು ನಡೆದರೆ ಆಘಾತಕಾರಿ ಅಂಕಿಅಂಶಗಳು ಹೊರ ಬೀಳುವುದರಲ್ಲಿ ಎರಡು ಮಾತಿಲ್ಲ. ಮಲಹೊರುವ ಕಾರ್ಮಿಕರ ಕುರಿತಂತೆ ಮೋದಿ ನೇತೃತ್ವದ ಸರಕಾರ ಎಷ್ಟರಮಟ್ಟಿಗೆ ಕಾಳಜಿ ಹೊಂದಿದೆ ಎನ್ನುವುದು ಕೂಡ ಇದೀಗ ಬಹಿರಂಗವಾಗಿದೆ. 2014ರಿಂದೀಚೆಗೆ ಸರಕಾರವು ಮಲಹೊರುವ ಕಾರ್ಮಿಕರ ಪುನರ್ವಸತಿಗೆಂದು ಬಜೆಟ್‌ನಲ್ಲಿ ತೆಗೆದಿಡುತ್ತಿದ್ದ ನಿಧಿಯಲ್ಲಿ ಶೇ. 95ರಷ್ಟು ಕಡಿತಗೊಳಿಸಿದೆ. 2014ರಲ್ಲಿ ಮಲ ಹೊರುವ ಕಾರ್ಮಿಕರ ಪುನರ್ವಸತಿ ಹಾಗೂ ಸ್ವ ಉದ್ಯೋಗ ಯೋಜನೆಗಾಗಿ 448 ಕೋಟಿ ರೂಪಾಯಿಯನ್ನು ತೆಗೆದಿಡಲಾಗಿತ್ತು. 2017ರ ವೇಳೆಗೆ ಇದು ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ. ಇದೀಗ ಇಡೀ ದೇಶದ ಮಲ ಹೊರುವ ಕಾರ್ಮಿಕರ ಪುನರ್ವಸತಿಗಾಗಿ ಬಜೆಟ್‌ನಲ್ಲಿ ತೆಗೆದಿಟ್ಟಿರುವುದು ಕೇವಲ 5 ಕೋಟಿ ರೂಪಾಯಿ. ಉತ್ತರ ಪ್ರದೇಶದ ರಾಮಾಯಣ ಮ್ಯೂಸಿಯಂಗೂ ಇದಕ್ಕಿಂತ ಹಲವು ಪಟ್ಟು ಹಣವನ್ನು ಮಂಜೂರು ಮಾಡಲಾಗುತ್ತದೆ. ಮಲಹೊರುವ ಕಾರ್ಮಿಕರನ್ನು ಮತ್ತೆ ಮನುಷ್ಯರನ್ನಾಗಿಸುವ ದೊಡ್ಡ ಕಾರ್ಯಕ್ಕೆ ಸರಕಾರದ ಬಳಿ ಇರುವುದು ಬರೇ 5 ಕೋಟಿ ರೂಪಾಯಿ. ಅಂದರೆ, ಸರಕಾರ ಮಲ ಹೊರುವ ಕಾರ್ಮಿಕರ ಕುರಿತಂತೆ ತಳೆದ ನಿಲುವನ್ನು ಇದು ಬಹಿರಂಗಪಡಿಸಿದೆ. ಅವರ ಪುನರ್ವಸತಿ ಸರಕಾರಕ್ಕೆ ಬೇಕಾಗಿಲ್ಲ. ಹಾಗಾದರೆ ಸರಕಾರ ಸ್ವಚ್ಛತಾ ಆಂದೋಲನಕ್ಕೆಂದು ಮೀಸಲಿರಿಸಿದ ಕೋಟ್ಯಂತರ ರೂಪಾಯಿ ಯಾರ ಜೇಬಿಗೆ ಹೋಗುತ್ತದೆ. ಸ್ವಚ್ಛತಾ ಆಂದೋಲನದ ನಿಜವಾದ ಯೋಧರು ಈ ಮಲಹೊರುವ ಕಾರ್ಮಿಕರು. ಸರಕಾರ ಸ್ವಚ್ಛತೆಗಾಗಿ ಬಿಡುಗಡೆ ಮಾಡುವ ಹಣದ ಮುಖ್ಯ ಫಲಾನುಭವಿಗಳೇ ಈ ಕಾರ್ಮಿಕರಾಗಿದ್ದಾರೆ. ಆದರೆ ಈ ಹಣವನ್ನು ಅಧಿಕಾರಿಗಳು, ರಾಜಕಾರಣಿಗಳು, ಮಧ್ಯವರ್ತಿಗಳು ನುಂಗಿ ಹಾಕುತ್ತಾರೆ.

 ಮಲ ಹೊರುವ ಕಾರ್ಮಿಕರು ಮಲದ ಗುಂಡಿಗೇ ಬಿದ್ದು ಸಾಯಬೇಕಾಗಿಲ್ಲ. ಈ ಕಾರ್ಮಿಕರ ಸರಾಸರಿ ಆಯಸ್ತು 45 ವರ್ಷ ಎಂದು ಊಹಿಸಲಾಗಿದೆ. ಯಾಕೆಂದರೆ ಕೆಲಸದ ಅವಧಿಯಲ್ಲಿ ಇವರು ಯಾವುದೇ ರಕ್ಷಾ ಕವಚಗಳನ್ನು ಬಳಸುವುದಿಲ್ಲ. ಅಧಿಕೃತವಾಗಿ ಕೆಲಸ ಮಾಡುವ ಪೌರ ಕಾರ್ಮಿಕರಿಗೆ ನೀಡುವ ಹಲವು ಸವಲತ್ತುಗಳನ್ನು ಮಧ್ಯವರ್ತಿಗಳು ತಮ್ಮದಾಗಿಸಿಕೊಳ್ಳುತ್ತಿದ್ದಾರೆ. ಕೈಗವಚ, ಬೂಟು, ಟೋಪಿ, ಮುಖಗವಚ, ವೈದ್ಯಕೀಯ ಸವಲತ್ತುಗಳಿಗಾಗಿ ಸರಕಾರ ಹಣ ವ್ಯಯ ಮಾಡುತ್ತದೆಯಾದರೂ ಕಾರ್ಮಿಕರಿಗೆ ತಲುಪುವುದು ಕಡಿಮೆ. ಲೆಕ್ಕ ಪುಸ್ತಕದಲ್ಲಿ ಮಾತ್ರ ಕಾರ್ಮಿಕರು ಇವುಗಳ ಫಲಾನುಭವಿಗಳಾಗಿದ್ದಾರೆ. ಆದರೆ ದಿನನಿತ್ಯ ಇವರು ಮುಖಗವಚವಿಲ್ಲದೆ, ಬೂಟುಗಳಿಲ್ಲದೆ, ಕೈಗವಚಗಳಿಲ್ಲದೆ ಕಸಗಳ ನಡುವೆ ಬದುಕುತ್ತಿರುತ್ತಾರೆ. ಹೆಚ್ಚಿನ ಕಾರ್ಮಿಕರನ್ನು ಕ್ಷಯ ರೋಗ ಮತ್ತು ಅಸ್ತಮಾಗಳಂತಹ ಮಾರಕ ರೋಗಗಳು ಕಾಡುತ್ತಿವೆ. ಹಾಗೆಯೇ ಚರ್ಮ ರೋಗಗಳಿಗೂ ಬೇಗ ಬಲಿಯಾಗುತ್ತಾರೆ. ಹೊಲಸಿನ ನಡುವೆಯೇ ಕೆಲಸ ಮಾಡಬೇಕಾಗಿರುವುದರಿಂದ, ಅಸಹ್ಯವನ್ನು ದೂರ ಮಾಡಲು ಅವರು ಸಹಜವಾಗಿಯೇ ಸಾರಾಯಿ ಅಮಲಿಗೆ ಅಂಟಿಕೊಳ್ಳುತ್ತಾರೆ. ಇದೂ ಅವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಈ ಎಲ್ಲ ಕಾರಣದಿಂದ ಅವರು 40 ವರ್ಷವಾಗುವಷ್ಟರಲ್ಲಿ ಭೀಕರ ಕಾಯಿಲೆಗೆ ಬಲಿಯಾಗಿ ಹಾಸಿಗೆಗೆ ಅಂಟಿಕೊಂಡಿರಬೇಕಾಗುತ್ತದೆ. ವಿಶ್ವಕ್ಕೆ ಗುರುವಾಗುವ ಹಂಬಲವಿರುವ ದೇಶವೊಂದರಲ್ಲಿ ಪ್ರತೀ ವರ್ಷ 300ಕ್ಕೂ ಅಧಿಕ ಕಾರ್ಮಿಕರು ಮಲದ ಗುಂಡಿಗೆ ಬಿದ್ದು ಸಾಯುತ್ತಾರೆ ಎನ್ನುವುದಕ್ಕಿಂತ ದೊಡ್ಡ ಕಳಂಕ ಇನ್ನೇನಿದೆ? ಈ ದೇಶದ ಅಭಿವೃದ್ಧಿ ಈ ಕಾರ್ಮಿಕರಿಂದಲೇ ಆರಂಭವಾಗಬೇಕು. ನಮ್ಮ ಅಂತರಂಗ ಶುಚಿಗೊಂಡ ದಿನ ಈ ಕಾರ್ಮಿಕರ ಬದುಕೂ ಮೇಲ್ ಸ್ತರಕ್ಕೆ ಬರುತ್ತದೆ. ದೇಶದ ಬಹಿರಂಗವೂ ಶುಚಿಯಾಗತೊಡಗುತ್ತದೆ. ಎಲ್ಲಿಯವರೆಗೆ ಮಲಹೊರುವ ವ್ಯವಸ್ಥೆ ಜೀವಂತವಾಗಿರುತ್ತದೆಯೋ ಅಲ್ಲಿಯವರೆಗೆ, ಭಾರತ ಮಲದ ದುರ್ವಾಸನೆಯನ್ನು ಹೊತ್ತುಕೊಂಡೇ ವಿಶ್ವದ ಮುಂದೆ ಗುರುತಿಸಬೇಕಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News