ಗ್ರಾಮೀಣ ಪ್ರದೇಶದಲ್ಲಿ ಮಾತ್ರ ಜಾನಪದದ ಕಂಪನ್ನು ಕಾಣಲು ಸಾಧ್ಯ: ಬಿ. ಪ್ರಕಾಶ್
ಚಿಕ್ಕಮಗಳೂರು, ಜ.24: ಜನವಾಣಿ ಬೇರು ಕವಿವಾಣಿ ಹೂ ಎಂಬಂತೆ ಜನಪದ ಸಾಗರದಷ್ಟು ಆಳವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಮಾತ್ರ ಜಾನಪದದ ಕಂಪನ್ನು ಕಾಣಲು ಸಾಧ್ಯ ಎಂದು ಜಿಲ್ಲಾ ಸಿರಿಗನ್ನಡ ವೇದಿಕೆ ಪ್ರಧಾನ ಕಾರ್ಯದರ್ಶಿ ಉಪನ್ಯಾಸಕ ಬಿ. ಪ್ರಕಾಶ್ ತಿಳಿಸಿದರು.
ಅವರು ಬೀರೂರು ಹೋಬಳಿಯ ಗುಮ್ಮನಹಳ್ಳಿ ಗ್ರಾಮದ ಗಂಗಮಾಳಮ್ಮ ದೇವಾಲಯದ ಆವರಣದಲ್ಲಿ ಆಯೋಜಿಸಿದ್ದ ಜಿಲ್ಲಾ ಕನ್ನಡ ಜಾನಪದ ಪರಿಷತ್ ಹೋಬಳಿ ಮತ್ತು ತಾಲೂಕು, ಹೋಬಳಿ ಘಟಕಗಳ ಆಶ್ರಯದಲ್ಲಿ ಸುಗ್ಗಿ ಹಬ್ಬದಲ್ಲಿ ಜಾನಪದ ಸಂಭ್ರಮ ಮಾಸಾಚರಣೆಯ ಕಾರ್ಯಕ್ರಮದಲ್ಲಿ ಜಾನಪದದಲ್ಲಿ ಆಸಾದಿ ಪದಗಳು ವಿಷಯದ ಕುರಿತು ಉಪನ್ಯಾಸ ನೀಡಿ ಸುಗ್ಗಿ ಹಬ್ಬದಲ್ಲಿ ಕಣದ ಸಂಸ್ಕೃತಿ ಮಾಯವಾಗುತ್ತಿದೆ. ನಮ್ಮ ನೆಲದ ಸಂಸ್ಕೃತಿ ಉಳಿಯಬೇಕು ಎಂದು ಹೇಳಿದರು.
ಜನಪದ ಸಾಹಿತ್ಯದಲ್ಲಿ ಅಸಾದಿ ಪದಗಳು ವಿಶಿಷ್ಠವಾದ ಪ್ರಕಾರವಾಗಿದೆ. ಜನಪದರು ಸೂಕ್ಷ್ಮ ಸಂವೇದನೆಯನ್ನು ಹೊಂದಿದವರು. ಬಯಲು ಸೀಮೆಯಲ್ಲಿ ಪ್ರಚಲಿತದಲ್ಲಿರುವ ಆಸಾದಿ ಪದಗಳಲ್ಲಿ ಜಾತ್ರೆ ಮತ್ತು ದೇವರ ಕೆಲಸಗಳಲ್ಲಿ ದೇವರನ್ನು ಮಾತನಾಡಿಸುವಾಗ ಹಲಗೆ ಬಡಿದು ದೇವತೆಗಳನ್ನು ಹೊಗಳುವುದು, ತೆಗಳುವುದನ್ನು ಪ್ರಾಸಬದ್ದವಾಗಿ ಹಾಡುವುದನ್ನು ಕಾಣುತ್ತೇವೆ ಎಂದರು.
ಈ ಕಾರ್ಯಕ್ರಮದಲ್ಲಿ ಚೌಳಹಿರಿಯೂರಿನ ಜಾನಪದ ಕಲಾವಿದ ಭೋಗಪ್ಪ ತತ್ವಪದಗಳನ್ನು, ಶಿವಮ್ಮ ಬೂದಾಳು, ಜಯಮ್ಮ ಸೋಬಾನಪದಗಳನ್ನು ಹಾಗೂ ಗುಮ್ಮನಹಳ್ಳಿ ಜಿ.ಬಿ.ಮಲ್ಲೇಶಪ್ಪ, ರೇವಣಸಿದ್ದಪ್ಪ ಮರುಳಸಿದ್ದಪ್ಪ ಸಂಗಡಿಗರು ಭಜನೆಯನ್ನು ಹಾಗೂ ಚೌಳಹಿರಿಯೂರಿನ ಗೀತ ಬಸವರಾಜು ಜಾನಪದಗೀತೆ ಹಾಡಿದರು. ಪ್ರಾಸ್ತಾವಿಕವಾಗಿ ಚೌಳಹಿರಿಯೂರು ಹೋಬಳಿ ಕನ್ನಡ ಜಾನಪದ ಪರಿಷತ್ ಅಧ್ಯಕ್ಷರಾದ ಹೆಚ್.ಎಸ್.ಬಸವರಾಜು ಮಾತನಾಡಿದರು.
ಕಡೂರು ತಾಲೂಕು ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಕುಪ್ಪಾಳು ಶಾಂತಮೂರ್ತಿ, ಸಿರಿಗನ್ನಡ ವೇದಿಕೆ ತಾಲೂಕು ಅಧ್ಯಕ್ಷ ಸಿಂಗಟಗೆರೆ ಸಿದ್ದಪ್ಪ, ಹಾಗೂ ಕರ್ನಾಟಕ ರಾಜ್ಯ ಅನುದಾನಿತ ಶಾಲೆಗಳ ಸಂಘದ ಉಪಾಧ್ಯಕ್ಷೆ ಶಕುಂತಲ, ಚೌಳಹಿರಿಯೂರು ಶಿಕ್ಷಕ ದೇವರಾಜು, ಗುಮ್ಮನಹಳ್ಳಿ ಅಶೋಕ್‍ಕುಮಾರ್, ಬಸವರಾಜು, ಅನಿಲ್‍ಕುಮಾರ್ ಉಪಸ್ಥಿತರಿದ್ದರು.