ಮೂಡಿಗೆರೆ: ಸುಗ್ಗಿ ಕಾಲದಲ್ಲಿ ಜಾನಪದ ಸಂಭ್ರಮ ಕಾರ್ಯಕ್ರಮ

Update: 2018-01-24 11:04 GMT

ಮೂಡಿಗೆರೆ, ಜ.24: ಜಾನಪದದ ಜೀವನ ವಿಧಾನದಲ್ಲಿ ಮಾನವೀಯತೆ, ಜೀವಂತಿಕೆ ಮತ್ತು ಎಲ್ಲದರಲ್ಲೂ ದೈವತ್ವವನ್ನು ಕಾಣುವ ಗುಣ ಅಡಗಿದೆ. ಆದರೆ ಆಧುನೀಕರಣದ ಈ ಯಾಂತ್ರಿಕ ಯುಗದ ಭರಾಟೆಗೆ ಸಿಲುಕಿ ಜಾನಪದದ ಬದುಕು ಕಾಣದಂತಾಗುತ್ತಿದೆ ಎಂದು ಪತ್ರಕರ್ತ ನಂದೀಶ್ ಬಂಕೇನಹಳ್ಳಿ ಅಭಿಪ್ರಾಯಪಟ್ಟರು. 

ಬಿದರಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕನ್ನಡ ಜಾನಪದ ಪರಿಷತ್ತಿನಿಂದ ಏರ್ಪಡಿಸಿದ್ದ ಸುಗ್ಗಿ ಕಾಲದಲ್ಲಿ ಜಾನಪದ ಸಂಭ್ರಮ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು. ಯಾಂತ್ರಿಕ ಬದುಕಿಗೆ ತನ್ನನ್ನ  ಸಂಪೂರ್ಣವಾಗಿ ಸಮರ್ಪಿಸಿಕೊಂಡಿರುವ ಮನುಜ ಕೃಷಿಯಿಂದ ಮಣ್ಣು, ಗಾಳಿ, ನೀರು, ಪ್ರಾಣಿ-ಪಕ್ಷಿಗಳ ಜೊತೆಗೆ ಇಡೀ ಪರಿಸರದೊಂದಿಗಿನ ತನ್ನ ಬಾಂಧವ್ಯವನ್ನು ಕಳೆದುಕೊಂಡು ಪಾಶ್ಚಾತ್ಯ ಅನುಕರಣೆಗೆ ಒಳಪಡುತ್ತಿರುವುದರಿಂದಲೇ ಜಾನಪದ ಸಂಸ್ಕೃತಿ, ಆಚರಣೆಗಳು ನಶಿಸುವ ಹಂತ ತಲುಪಿವೆ ಎಂದರು. 

ವಿದ್ಯಾರ್ಥಿಗಳಲ್ಲಿ ಜಾನಪದ  ಸಾಹಿತ್ಯ, ಕಲಾ ಪ್ರಕಾರಗಳು, ಒಗಟು-ಗಾದೆಗಳ ಬಗೆಗೆ ಹೆಚ್ಚು ಹೆಚ್ಚು ಮನವರಿಕೆ ಮಾಡಿಕೊಡುವ ಅಗತ್ಯವಿದೆ. ಶಾಸನ, ತಾಳೆಗರಿ, ಹಸ್ತಪ್ರತಿ ಮುಂತಾದ ಇತಿಹಾಸದ ಆಕರಗಳಂತೆ ಜಾನಪದವು ಕೂಡ ತನ್ನೊಳಗೆ ಇತಿಹಾಸದ ಕುರುಹುಗಳನ್ನು ಅಡಗಿಸಿಟ್ಟುಕೊಂಡಿದೆ. ಇವುಗಳೆಲ್ಲವನ್ನು ದೃಶ್ಯ-ಶ್ರಾವ್ಯ ಮತ್ತು ಬರಹದ ರೂಪದಲ್ಲಿ ದಾಖಲಿಸುವ ಕೆಲಸಗಳು ಆಗಬೇಕು ಎಂದು ತಿಳಿಸಿದರು.

ಪ್ರಾಚಾರ್ಯ ಟಿ.ಸತೀಶ್ ಕಾರ್ಯಕ್ರಮ ಉದ್ಘಾಟಿಸಿದರು. ಮಣಿಕಂಠ ಬಿಳ್ಳೂರು ಪ್ರಾಸ್ತಾವಿಕ ಮಾತನಾಡಿದರು. ವಿದ್ಯಾರ್ಥಿಗಳಿಗೆ ಜಾನಪದ ಗೀತಗಾಯನ ಸ್ಪರ್ಧೆ ನಡೆಸಿ ಬಹುಮಾನ ವಿತರಿಸಲಾಯಿತು. 

ಕಜಾಪ ತಾಲೂಕು ಅಧ್ಯಕ್ಷ ಬಕ್ಕಿ ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ನಗರ ಘಟಕ ಅಧ್ಯಕ್ಷ ಎಂ.ಎಸ್.ನಾಗರಾಜ್, ಕಾರ್ಯದರ್ಶಿ ಆರ್.ಪ್ರಕಾಶ್, ಕೋಮ್‍ರಾಜ್, ಸತೀಶ್, ಹಾ.ಬಾ.ನಾಗೇಶ್, ಪ್ರದೀಪ್, ಚೇತನ್, ಶಾಂತಕುಮಾರ್ ಮತ್ತಿತರರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News