ಗುಂಡ್ಲುಪೇಟೆ: ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಹೆಣ್ಣಾನೆ ಸಾವು
ಗುಂಡ್ಲುಪೇಟೆ,ಜ.24: ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಎರಡು ವರ್ಷದ ಹೆಣ್ಣಾನೆ ಮರಿಯೊಂದು ಸಾವಿಗೀಡಾಗಿರುವ ಘಟನೆ ನಡೆದಿದ್ದು ವನ್ಯ ಜೀವಿ ಪ್ರಿಯರ ಆತಂಕಕ್ಕೆ ಕಾರಣವಾಗಿದೆ.
ಹುಲಿಯೋಜನೆಯ ಕುಂದಕೆರೆ ವಲಯಕ್ಕೆ ಸೇರಿದ ಮಂಗಲ ಗ್ರಾಮದ ಕಾಡಂಚಿನ ಕೆರೆಯ ಬಳಿ ಮರಿಯಾನೆ ಸಾವಿಗೀಡಾಗಿದೆ. ಮರಿಯ ಹತ್ತಿರ ಯಾರನ್ನೂ ಹೋಗಲು ಬಿಡದೆ ಆನೆಗಳ ಹಿಂಡು ಕಳೇಬರದ ಸುತ್ತಲೂ ಓಡಾಡುತ್ತಿದ್ದುದನ್ನು ಕಂಡ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಕೂಡಲೇ ಸ್ಥಳಕ್ಕೆ ಎಸಿಎಫ್ ರವಿಕುಮಾರ್, ಆರ್‍ಎಫ್‍ಓ ಪ್ರಭುಸ್ವಾಮಿ ಸಿಬ್ಬಂದಿಯೊಂದಿಗೆ ತೆರಳಿ ಪಟಾಕಿ ಸಿಡಿಸಿ ಆನೆಗಳನ್ನು ಕಾಡಿಗಟ್ಟಿದರು. ಅರಣ್ಯ ಇಲಾಖೆಯ ಪಶುವೈದ್ಯ ಡಾ.ನಾಗರಾಜು ಮರಿಯಾನೆಯ ಕಳೇಬರವನ್ನು ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಹೂತು ಹಾಕಲಾಯಿತು. ಹೊಟ್ಟೆಯಲ್ಲಿ ಅಲ್ಸರ್ ಹುಣ್ಣಿನಿಂದ ಕೀವುಂಟಾಗಿ ಸಾವಿಗೀಡಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದೇ ಜ.2 ರಂದು ಓಂಕಾರ್ ವಲಯದಿಂದ ಕಾಡಂಚಿನ ಕುರುಬರಹುಂಡಿ ಗ್ರಾಮದ ಬಳಿ ತಾಯಿಯಿಂದ ಬೇರಾಗಿದ್ದ ಮರಿಯಾನೆ ಹಾಗೂ 20 ರಂದು ಗೋಪಾಲಸ್ವಾಮಿ ಬೆಟ್ಟ ವಲಯದಲ್ಲಿಯೂ ಅನಾರೋಗ್ಯದಿಂದ ಮರಿಯಾನೆ ಸಾವಿಗೀಡಾಗಿರುವ ಘಟನೆಗಳು ಮರೆಯಾಗುವ ಮೊದಲೇ ಇನ್ನೊಂದು ಮರಿ ಸಾವಿಗೀಡಾಗಿರುವುದು ಪರಿಸರ ಪ್ರಿಯರ ಆತಂಕಕ್ಕೆ ಕಾರಣವಾಗಿದೆ.