×
Ad

ಧನ್ಯಶ್ರೀ ಆತ್ಮಹತ್ಯೆ ಪ್ರಕರಣ: ಆರೋಪಿಗಳ ಬಂಧನಕ್ಕೆ ವಿಳಂಬವೇಕೆ?

Update: 2018-01-24 17:17 IST

ಮೂಡಿಗೆರೆ, ಜ.24: ನೈತಿಕ ಪೊಲೀಸ್‍ಗಿರಿಗೆ ನೊಂದು ಆತ್ಮಹತ್ಯೆ ಮಾಡಿಕೊಂಡ ಬಿಕಾಂ ವಿದ್ಯಾರ್ಥಿನಿ ಛತ್ರ ಮೈದಾನದ ಧನ್ಯಶ್ರೀ(20) ಪ್ರಕರಣದ ಇತರೆ ಹಲವು ಆರೋಪಿಗಳ ಬಂಧನವಾಗದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿ ಕೊಟ್ಟಿದೆ.

ಜ.6 ರಂದು ಧನ್ಯಶ್ರೀ ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ಸಂಬಂಧ ಪೊಲೀಸರು ಬಂಟ್ವಾಳದ ಸಂತೋಷ್ ಮತ್ತು ಮೂಡಿಗೆರೆ ನಗರ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಅನೀಲ್‍ನನ್ನು ಬಂಧಿಸಿ ಕ್ರಮ ಜರುಗಿಸಿದ್ದರು. ಧನ್ಯಶ್ರೀ ಆತ್ಮಹತ್ಯೆಗೂ ಮುನ್ನ ಬಂಟ್ವಾಳದ ಸಂತೋಷ್ ಎಂಬಾತ ವಾಟ್ಸಾಪ್ ಚಾಟ್ ಮಾಡಿ ಬೇರೆ ಕೋಮಿನ ಯುವಕನೊಂದಿಗೆ ಸ್ನೇಹದಿಂದ ಇರದಂತೆ ಒತ್ತಡ ಹೇರಿದ್ದ. ಅದನ್ನು ಕಡೆಗಣಿಸಿದ್ದ ಧನ್ಯಶ್ರೀಗೆ ಬೆದರಿಕೆ ಹಾಕಿ ವಾಟ್ಸಾಪ್ ಚಾಟ್ ಅನ್ನು ಸ್ಕ್ರೀನ್‍ಶಾಟ್ ತೆಗೆದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದ ಎಂದು ದೂರಲಾಗಿತ್ತು.

ನಂತರ ಧನ್ಯಶ್ರೀ ಮನೆಗೆ ಬಿಜೆಪಿ ಮತ್ತು ಸಂಘಪರಿವಾರದ ಐವರು ಕಾರ್ಯಕರ್ತರು ತೆರಳಿ ಬೆದರಿಕೆ ಹಾಕಿದ್ದರು ಎಂದು ತಿಳಿದು ಬಂದಿತ್ತು. ಪೋಸ್ಟ್ ಮಾರ್ಟಂ ರಿಪೋರ್ಟ್‍ನಲ್ಲಿ ಧನ್ಯಶ್ರೀ ಆತ್ಮಹತ್ಯೆಗೂ ಮುನ್ನ 36 ಗಂಟೆಗ ಕಾಲ ಅಹಾರ ಸೇವಿಸದಿರುವುದು ಪತ್ತೆಯಾಗಿತ್ತು.

ಅಲ್ಲದೇ ‘ತನ್ನ ಸಾವಿಗೆ ಕಾರಣರಾದವರನ್ನು ಬಿಡುವುದಿಲ್ಲ. ಅವರಿಗೆ ಶಿಕ್ಷೆಯಾಗಬೇಕು’ ಎಂದು ಡೆತ್‍ನೋಟ್ ಬರೆದಿಟ್ಟಿದ್ದಳು. ಈ ಹಿನ್ನೆಲೆಯಲ್ಲಿ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ವ್ಯಾಪಕ ಪ್ರತಿಭಟನೆಗಳು ನಡೆದಿದ್ದವು. ಆರಂಭದಲ್ಲಿ ಪೊಲೀಸರ ತನಿಖೆಯಲ್ಲಿ ಪ್ರಗತಿ ಕಂಡಿತ್ತಾದರೂ ಇದೀಗ ಉಳಿದ ಆರೋಪಿಗಳ ಬಂಧನವಾಗದಿರುವುದು ಪ್ರಕರಣ ಹಳ್ಳ ಹಿಡಿದಿರುವ ಗುಮಾನಿಗೆ ಕಾರಣವಾಗಿದೆ.

ಚಿಕ್ಕಮಗಳೂರು ಎಸ್‍ಪಿ ಕೆ.ಅಣ್ಣಾಮಲೈ ಧನ್ಯಶ್ರೀ ಪ್ರಕರಣದಲ್ಲಿ ಮುತುವರ್ಜಿ ವಹಿಸಿದ್ದರು. ಮೊದಲ ಎಫ್ಐಆರ್‍ನಲ್ಲಿ ಧನ್ಯಶ್ರೀಯು ‘ತಂದೆ ಮೊಬೈಲ್ ಕಿತ್ತುಕೊಂಡಿದ್ದಕ್ಕೆ ಮನನೊಂದು ಆತ್ಮಹತ್ಯೆ’ ಮಾಡಿಕೊಂಡಿದ್ದಾಗಿ ಪ್ರಕರಣ ದಾಖಲಿಸಲಾಗಿತ್ತು. ಆದರೆ ಸಂಜೆ ವೇಳೆ ಸ್ಥಳೀಯರು ಪ್ರಕರಣವನ್ನು ಎಸ್ಪಿ ಕೆ.ಅಣ್ಣಾಮಲೈ ಗಮನಕ್ಕೆ ತಂದಿದ್ದರಿಂದ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುವಂತೆ ಮೂಡಿಗೆರೆ ಪಿಎಸೈ ರಫೀಕ್‍ರನ್ನು ಸೂಚಿಸಿದ್ದರು. ಪೊಲೀಸರು ‘ಪ್ರಕರಣದಲ್ಲಿ ಸಂತೋಷ್ ಮತ್ತಿತರರು ಆರೋಪಿಗಳು’ ಎಂದು ರಾತ್ರಿ ಎರಡನೇ ಎಫ್ಐಆರ್ ದಾಖಲಿಸಿದ್ದರಲ್ಲದೇ ಅನೀಲ್‍ನನ್ನು ಬಂಧಿಸಿದ್ದರು.

ನಂತರ ಎಸ್ಪಿ ಅಣ್ಣಾಮಲೈ ಮಾಧ್ಯಮಗಳಿಗೆ ಹೇಳಿಕೆ ನೀಡಿ, ಪ್ರಕರಣದಲ್ಲಿ ನೇರವಾಗಿ ಭಾಗಿಯಾದವರ ಸಹಿತ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಮಾಡಿದವರು, ಪ್ರಕರಣದ ದಿಕ್ಕು ತಪ್ಪಿಸಲು ನಿಂತವರು, ಪ್ರಭಾವ ಬಳಸಿದವರು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದವರ ಮೇಲೆ ಒಟ್ಟು ನಾಲ್ಕು ಎಫೈಆರ್ ದಾಖಲಿಸುವುದಾಗಿ ಹೇಳಿಕೊಂಡಿದ್ದರು. ಆದರೆ ಈ ತನಕ ಪ್ರಕರಣದಲ್ಲಿ ಯಾವುದೇ ಪ್ರಗತಿ ಕಂಡು ಬಾರದಿರುವುದು ಸಾರ್ವಜನಿಕರಲ್ಲಿ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News