ಕಾಂಗ್ರೆಸ್ ಸರಕಾರ ರಾಜ್ಯದ ಲೂಟಿಯಲ್ಲಿ ತೊಡಗಿದೆ : ಬಿ.ಎಸ್ ಯಡಿಯೂರಪ್ಪ

Update: 2018-01-24 12:49 GMT

ಮಡಿಕೇರಿ ಜ.24 : ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಇತಿಮಿತಿಗಳಿಲ್ಲದೆ ರಾಜ್ಯವನ್ನು ಲೂಟಿ ಮಾಡುತ್ತಿದ್ದು, ತುಘಲಕ್ ದರ್ಬಾರ್ ನಡೆಸುತ್ತಿದೆ ಎಂದು ಆರೋಪಿಸಿರುವ ರಾಜ್ಯ ಬಿಜೆಪಿ ಅಧ್ಯಕ್ಷರಾದ ಬಿ.ಎಸ್.ಯಡಿಯೂರಪ್ಪ, ಮರಳು ನೀತಿ ಮತ್ತು ಅಧಿಕಾರಿಗಳ ವರ್ಗಾವಣೆಯ ಬಗ್ಗೆ ರಾಜ್ಯ ಉಚ್ಚ ನ್ಯಾಯಾಲಯವೇ ಸರ್ಕಾರಕ್ಕೆ ಕಪಾಳಮೋಕ್ಷ ಮಾಡಿದೆ ಎಂದು ಹೇಳಿದರು.

ನಗರದ ಗಾಂಧಿ ಮೈದಾನದಲ್ಲಿ ನಡೆದ ‘ಪರಿವರ್ತನಾ ಯಾತ್ರೆ’ಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಲೇಷಿಯಾದಿಂದ  ತಮಿಳುನಾಡಿಗೆ ಬರುತ್ತಿರುವ ಮರಳಿಗೆ ಪ್ರತಿ ಮೆಟ್ರಿಕ್ ಟನ್ ದರ 925 ರೂ,.ಗಳಾಗಿದ್ದರೆ, ಅದೇ ಕರ್ನಾಟಕ ರಾಜ್ಯ ಸರ್ಕಾರ 2300 ರೂ.ಗಳನ್ನು ನಿಗದಿಪಡಿಸುವ ಮೂಲಕ ಹಣವನ್ನು ಲೂಟಿ ಮಾಡುತ್ತಿದೆ ಎಂದು ಆರೋಪಿಸಿದರು. 

ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತದಿಂದ ರಾಜ್ಯದ ಜನತೆ ಬೇಸತ್ತಿದ್ದಾರೆ. ಸರ್ಕಾರದ ಮರಳು ನೀತಿಯೇ ಅವಾಸ್ತವಿಕವೆಂದು ರಾಜ್ಯ ಉಚ್ಚ ನ್ಯಾಯಾಲಯ ಸ್ಪಷ್ಟಪಡಿಸಿರುವುದಲ್ಲದೆ, ಮನಬಂದಂತೆ ಅಧಿಕಾರಿಗಳ ವರ್ಗಾವಣೆಯ ಬಗ್ಗೆಯೂ ತನ್ನ ತೀವ್ರ ಅಸಮಾಧಾನವನ್ನು ವ್ಯಕ್ತಪಸಡಿಸಿದೆ. ಮಲೇಷಿಯಾದಿಂದ ಮರಳು ಆಮದಿನ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರದಿಂದ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದರು.

ರಾಜ್ಯದ ಮುಖ್ಯಮಂತ್ರಿಗಳು ತಮ್ಮ ವಿರುದ್ಧದ 67 ಪ್ರಕರಣಗಳನ್ನು ಸಿಐಡಿಯನ್ನು ಬಳಸಿ ಮುಚ್ಚಿ ಹಾಕುತ್ತಿದ್ದಾರೆ. ಆದರೆ, ಬಿಜೆಪಿ ಅಧಿಕಾರಕ್ಕೆ ಬಂದ ಇಪ್ಪತ್ತನಾಲ್ಕು ಗಂಟೆಗಳಲ್ಲಿ ಈ ಎಲ್ಲ ಪ್ರಕರಣಗಳ ಮರು ತನಿಖೆಗೆ ಕ್ರಮ ವಹಿಸುವುದಾಗಿ ತಿಳಿಸಿದರು.

ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಮಾತನಾಡಿ, ಮುಖ್ಯ ಮಂತ್ರಿ ಸಿದ್ದರಾಮಯ್ಯ ಕಳೆದ ಬಾರಿ 1.85 ಲಕ್ಷ ಕೋಟಿಯ ಬಜೆಟ್ ಮಂಡಿಸಿದ್ದರೆ, 2.40 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಇಷ್ಟು ದೊಡ್ಡ ಮೊತ್ತದ ಸಾಲವನ್ನು ಆಡಳಿತದ ಕ್ಷಿಪ್ರ ಅವಧಿಯಲ್ಲಿ ನಡೆಸಿರುವ ಧೀಮಂತ ಮುಖ್ಯಮಂತ್ರಿಯೆಂದು ಲೇವಡಿ ಮಾಡಿದರು.

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಯಡಿಯೂರಪ್ಪ ಅವರು, 32 ಸಾವಿರ ಕೋಟಿ ಬಜೆಟ್ ಮಂಡನೆ ಮಾಡಿ, ಮೂರು ವರ್ಷಗಳ ತಮ್ಮ ಅವಧಿಯಲ್ಲಿ 1.18 ಲಕ್ಷ ಕೋಟಿ ಸಂಪನ್ಮೂಲ ಕ್ರೋಡೀಕರಣ ಮಾಡಿದ್ದರು ಮತ್ತು ಆ ಅವಧಿಯಲ್ಲಿ ಕೊಡಗಿಗೆ 1800 ಕೋಟಿಯಷ್ಟು ಅನುದಾನವನ್ನು ಒದಗಿಸಿದ್ದರು. ಇದೀ ಸಿದ್ದರಾಮಯ್ಯ ಸರ್ಕಾರ ಕೊಡಗಿಗೆ ನೀಡಿರುವ ಅನುದಾನಗಳ ಬಗ್ಗೆ ಶ್ವೇತ ಪತ್ರವನ್ನು ಹೊರಡಿಸಬೇಕೆಂದು ಆಗ್ರಹಿಸಿದರು.

ತನಿಖಾ ಪ್ರಗತಿಯ ವರದಿ ನೀಡಿ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯೆ ಇಲ್ಲದ ಸ್ಥಿತಿ ನಿರ್ಮಾಣವಾಗಿದ್ದು, ಹಲವು ಪೊಲೀಸ್ ಅಧಿಕಾರಿಗಳು ಕೆಲಸ ತೊರೆದರೆ ಮತ್ತೆ ಹಲವು ಮಂದಿ ಆತ್ಮಹತ್ಯೆಗೆ ಶರಣಾದ ಘಟನೆಗಳು ನಡೆದಿದೆಯೆಂದು ಬೇಸರ ವ್ಯಕ್ತಪಡಿಸಿದರು. ಕಾಂಗ್ರೆಸ್ ಆಡಳಿತಾವಧಿಯಲ್ಲಿ ನಡೆಸಿರುವ 21 ಮಂದಿ ಹಿಂದೂ ಕಾರ್ಯಕರ್ತರ ಸಾವಿಗೆ ಸಂಬಂಧಿಸಿದ ತನಿಖಾ ಪ್ರಗತಿಯ ಸ್ಟೇಟಸ್ ವರದಿಯನ್ನು ನೀಡುವಂತೆ ಸದಾನಂದ ಗೌಡ ಆಗ್ರಹಿಸಿದರು.

ಶಾಸಕರುಗಳಾದ ಕೆ.ಜಿ. ಬೋಪಯ್ಯ, ಅಪ್ಪಚ್ಚು ರಂಜನ್, ಎಂಎಲ್‍ಸಿ ಸುನಿಲ್ ಸುಬ್ರಮಣಿ, ರಾಜ್ಯ ಬಿಜೆಪಿ ಉಪಾಧ್ಯಕ್ಷೆ ರೀನಾ ಪ್ರಕಾಶ್, ರಾಜ್ಯ ಕಾರ್ಯದರ್ಶಿ ತೇಜಸ್ವಿನಿ ರಮೇಶ್ ಮಾತನಾಡಿದರು.

ವೇದಿಕೆಯಲ್ಲಿ ಪಕ್ಷದ ರಾಜ್ಯ ಪ್ರ.ಕಾ. ರವಿ ಕುಮಾರ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ, ಭಾರತೀಶ್, ಜಿಪಂ ಅಧ್ಯಕ್ಷ ಬಿ.ಎ. ಹರೀಶ್, ರಾಜ್ಯ ಕಾರ್ಯದರ್ಶಿ ಮನು ಮುತ್ತಪ್ಪ, ಮಾಜಿ ಎಂಎಲ್‍ಸಿ ಎಸ್.ಜಿ. ಮೇದಪ್ಪ, ರಾಜ್ಯ ಪ್ರಧಾನ ಕಾರ್ಯದರ್ಶಿ ಕಿರಣ್ ಕುಮಾರ್, ಉದಯ ಕುಮಾರ್ ಶೆಟ್ಟಿ, ರವಿ ಕುಶಾಲಪ್ಪ, ರಾಬಿನ್ ದೇವಯ್ಯ, ರವಿ ಕಾಳಪ್ಪ ಮೊದಲಾದ ಗಣ್ಯರು ಉಪಸ್ಥಿತರಿದ್ದರು. 

ಸಭಾ ಕಾರ್ಯಕ್ರಮಕ್ಕೂ ಮೊದಲು ಬಿಜೆಪಿ ಕಾರ್ಯಕರ್ತರು ನಗರದ ಮುಖ್ಯ ಬೀದಿಗಳಲ್ಲಿ ಬೃಹತ್ ಮೆರವಣಿಗೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News