ಕಾಂಗ್ರೆಸ್ ಸರಕಾರ ತೊಲಗಿದರೆ ಮಾತ್ರ ಕರ್ನಾಟಕಕ್ಕೆ ಉಳಿಗಾಲ: ಶೋಭಾ ಕರಂದ್ಲಾಜೆ

Update: 2018-01-24 13:01 GMT

ಮಡಿಕೇರಿ, ಜ.24 : ಭಾರತೀಯ ಜನತಾ ಪಕ್ಷದ ಈಗಿನ ಹೋರಾಟ ಕೇವಲ ‘ಕುರ್ಚಿ’ಗಾಗಿ ನಡೆಯುತ್ತಿರುವ ಹೋರಾಟವಲ್ಲ. ಬದಲಾಗಿ, ನಮ್ಮ ಆಚಾರ, ವಿಚಾರ ಮತ್ತು ಭಾರತೀಯತೆಯ ಉಳಿವಿಗಾಗಿ ನಡೆಸುತ್ತಿರುವ ಪ್ರಯತ್ನವಾಗಿದ್ದು, ಮುಂದಿನ ಚುನಾವಣೆಯಲ್ಲಿ ಮುಖವಾಡ ಹೊತ್ತ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ತೊಲಗಿಸಬೇಕೆಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಕರೆ ನೀಡಿದರು.

ನಗರದ ಗಾಂಧಿ ಮೈದಾನದಲ್ಲಿ ಆಯೋಜಿತ ‘ಪರಿವರ್ತನಾ ರ್ಯಾಲಿ’ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಸರಕಾರ ತೊಲಗಿದರೆ ಮಾತ್ರ ಕರ್ನಾಟಕಕ್ಕೆ ಉಳಿಗಾಲವಿದೆ ಎಂದರು. ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯುವ ಮೂಲಕ ಭ್ರಷ್ಟಾಚಾರ ರಹಿತ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಬೇಕಾಗಿದೆ ಎಂದು ತಿಳಿಸಿದರು.
 

ನೆರೆಯ ರಾಜ್ಯಕ್ಕೆ ಅಕ್ಕಿ-ಗೋಧಿ ಸಾಗಾಟ: 

ರಾಜ್ಯದ ಕಾಂಗ್ರೆಸ್ ಸರ್ಕಾರದ ಅನ್ನಭಾಗ್ಯ ಯೋಜನೆಯಡಿ ಪ್ರತಿ ಕೆ.ಜಿ. ಅಕ್ಕಿಗೆ 29 ರೂ. ಹಣವನ್ನು ಕೇಂದ್ರ ಸರ್ಕಾರ ಭರಿಸುತ್ತಿದೆಯಾದರೆ, ಕೇವಲ 3 ರೂ. ಹಣ ಭರಿಸುವ ರಾಜ್ಯ ಸರ್ಕಾರ ಯೋಜನೆಯನ್ನೇ ದೊಡ್ಡ ಸಾಧನೆಯೆಂದು ಬಿಂಬಿಸಿಕೊಳ್ಳುತ್ತಿದೆಯೆಂದು ಟೀಕಿಸಿದ ಶೋಭಾ ಕರಂದ್ಲಾಜೆ, ಪ್ರತಿ ತಿಂಗಳು ಕೇಂದ್ರ ಸರ್ಕಾರ 2.10 ಲಕ್ಷ ಮೆಟ್ರಿಕ್ ಟನ್ ಅಕ್ಕಿಯನ್ನು ರಾಜ್ಯ ಸರ್ಕಾರಕ್ಕೆ ಒದಗಿಸಲು ನೆರವಾಗುತ್ತಿದೆ. ಅನ್ನಭಾಗ್ಯ ಯೋಜನೆಯಡಿ ನೀಡಬೇಕಿರುವ ಗೋಧಿ ಸಮರ್ಪಕವಾಗಿ ದೊರಕುತ್ತಿಲ್ಲವೆಂದು ಆರೋಪಿಸಿದರು. ರಾಜ್ಯ ಸರ್ಕಾರ ಅಕ್ಕಿಯನ್ನು ಪಾಲಿಶ್ ಮಾಡಿ ನೆರೆಯ ರಾಜ್ಯಕ್ಕೆ ಮಾರಾಟ ಮಾಡುತ್ತಿರುವುದಾಗಿ ಗಂಭೀರ ಆರೋಪ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News