ಮರಕ್ಕೆ ಕಾರು ಢಿಕ್ಕಿ: ಹಸೆ ಮಣೆ ಏರಬೇಕಿದ್ದ ವಧು-ವರ ಸೇರಿ ಮೂವರು ಮೃತ್ಯು

Update: 2018-01-24 17:16 GMT

ಆಲೂರು, ಜ. 24: ಕಾರೊಂದು ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ವಿವಾಹವಾಗಬೇಕಿದ್ದ ನವ ಜೋಡಿ ಹಾಗೂ ಪಾದಚಾರಿ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75ರಲ್ಲಿನ ಪಾಳ್ಯ ಗ್ರಾಮದಲ್ಲಿ ಬುಧವಾರ ನಡೆದಿದೆ.

ತುಮಕೂರು ಜಿಲ್ಲೆಯ ತುರುವೇಕೆರೆಯ ಸುಪ್ರೀತ್ (27) ಹಾಗೂ ಗುಬ್ಬಿ ಬಳಿಯ ಬಾಗೂರು ಗ್ರಾಮದ ರಾಧಿಕಾ (21) ಹಾಗೂ ಹಾಸನ ಜಿಲ್ಲೆಯ ಆಲೂರು ತಾಲೂಕಿನ ಹರಳಹಳ್ಳಿ ಗ್ರಾಮದ ಬುದ್ಧಿ ಮಾಂದ್ಯ ಮಹಿಳೆ ರತ್ನಮ್ಮ (55) ಮೃತಪಟ್ಟವರೆಂದು ಗುರುತಿಸಲಾಗಿದೆ.

ಘಟನೆ ವಿವರ: ಸುಪ್ರೀತ್ ಹಾಗೂ ರಾಧಿಕಾ ಅವರ ವಿವಾಹ ಫೆಬ್ರವರಿ 4ರಂದು ನಿಶ್ಚಯವಾಗಿತ್ತು. ವಿವಾಹಪೂರ್ವವಾಗಿ ವಿಡಿಯೊ ಶೂಟಿಂಗ್‌ಗಾಗಿ ತುರುವೇಕೆರೆಯಿಂದ ಫಾರ್ಚೂನರ್ ಕಾರಿನಲ್ಲಿ ಹಾಸನ ಬಳಿಯ ಶೆಟ್ಟಿಹಳ್ಳಿ ಚರ್ಚ್‌ಗೆ, ಈ ಜೋಡಿ ಅಲ್ಲಿ ಕುಟುಂಬದವರು ಹಾಗೂ ಫೋಟೋಗ್ರಾಫರ್‌ಗಳೊಂದಿಗೆ ಬಂದಿದ್ದರು. ಅಲ್ಲಿ ಶೂಟಿಂಗ್ ಮುಗಿಸಿ ಸಕಲೇಶಪುರ ತಾಲೂಕಿನ ಮಂಝ್ರಾಬಾದ್ ಕೋಟೆಯಲ್ಲಿ ವಿಡಿಯೋ ಶೂಟಿಂಗ್‌ಗೆ ತೆರಳುತ್ತಿದ್ದ ವೇಳೆ ವಧುವಿನ ಸಹೋದರ ಪ್ರಭುದೇವ ಅತಿವೇಗದಿಂದ ವಾಹನ ಚಲಾಯಿಸಿದ್ದರ ಪರಿಣಾಮ ಕಾರು ಮರಕ್ಕೆ ಢಿಕ್ಕಿ ಹೊಡೆದಿದೆ. ಬಳಿಕ ರಸ್ತೆ ಬದಿಯಲ್ಲಿ ಹೋಗುತ್ತಿದ್ದ ರತ್ಮಮ್ಮ ಎಂಬ ಬುದ್ಧಿ ಮಾಂದ್ಯ ಮಹಿಳೆಗೂ ಢಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ.

ಘಟನೆಯಲ್ಲಿ ರತ್ನಮ್ಮ ಸೇರಿದಂತೆ ಕಾರಿನಲ್ಲಿದ್ದ ನವ ಜೋಡಿಗಳಾದ ಸುಪ್ರೀತ್, ರಾಧಿಕಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರು ಚಾಲಕ ಪ್ರಭುದೇವ, ರಾಧಿಕಾಳ ತಾಯಿ ಶಶಿಕಲಾ ಹಾಗೂ ಇಬ್ಬರೂ ಫೋಟೋ ಗ್ರಾಫರ್ ಮತ್ತು ಒಬ್ಬಳು ಮೇಕಪ್ ಮಾಡುವ ಯುವತಿ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದಾರೆನ್ನಲಾಗಿದೆ.

ಗಾಯಾಳುಗಳು ಹಾಸನದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇವರಲ್ಲಿ ವಧುವಿನ ತಾಯಿ ಶಶಿಕಲಾರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. ಪಟ್ಟಣದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News