ಜೆಸಿಐ ಸಂಸ್ಥೆ ಪ್ರಪಂಚದ 120 ದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ: ವಿಜಯಕುಮಾರ್
ಚಿಕ್ಕಮಗಳೂರು, ಜ.24: ಕೇವಲ 15 ಸ್ನೇಹಿತರಿಂದ ಆರಂಭಗೊಂಡ ಜೆಸಿಐ ಸಂಸ್ಥೆ ಇಂದು ಪ್ರಪಂಚದ 120 ದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಭಾರತದಲ್ಲಿ 3 ಲಕ್ಷಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದೆ ಎಂದು ಸಂಸ್ಥೆಯ ವಲಯ ನಿರ್ದೇಶಕ ವಿಜಯಕುಮಾರ್ ಹೇಳಿದರು.
ನಗರದ ಎಂಇಎಸ್ ಕಾಲೇಜು ಸಭಾಂಗಣದಲ್ಲಿ ಮಂಗಳವಾರ ನಡೆದ ಜೆಸಿಐ ಚಿಕ್ಕಮಗಳೂರು ಮಲ್ನಾಡ್ ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು. ಜೆಸಿಐ ಕಳೆದ 106 ವರ್ಷಗಳಿಂದ ವಿಶ್ವಾದ್ಯಂತ ಯುವಜನತೆಯ ವ್ಯಕ್ತಿತ್ವ ವಿಕಸನಗೊಳಿಸುವ ಕೆಲಸ ಮಾಡುತ್ತಿದೆ, ಪಠ್ಯೇತರ ಚಟುವಟಿಕೆ, ಮ್ಯಾನೇಜ್‍ಮೆಂಟ್, ವೃತ್ತಿಪರ ತರಬೇತಿ ಸೇರಿದಂತೆ ಅನೇಕ ತರಬೇತಿಗಳನ್ನು ಯುವಜನತೆಗೆ ನೀಡುವ ಮೂಲಕ ಅವರ ಕೌಶಲ್ಯಾಭಿವೃದ್ದಿಗಾಗಿ ದುಡಿಯುತ್ತಿದೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜೆಸಿಐ ವಲಯ ಉಪಾದ್ಯಕ್ಷೆ ಸಮತಾ ಮಿಸ್ಕಿತ್, ಯುವಜನತೆ ತಮ್ಮ ಸಂಸ್ಥೆಗೆ ಸದಸ್ಯರಾಗುವ ಮೂಲಕ ನಾಯಕತ್ವ ಗುಣವನ್ನು ಬೆಳೆಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ನಿಕಟಪೂರ್ವ ಅಧ್ಯಕ್ಷ ಕೆ.ಟಿ.ಚೇತನ್ ಕುಮಾರ್ ತಮ್ಮ ಅವಧಿಯಲ್ಲಿ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.
ನಿಕಟಪೂರ್ವ ಕಾರ್ಯದರ್ಶಿ ವಿಜಯಕುಮಾರ್ ವಾರ್ಷಿಕ ವರದಿಯನ್ನು ಮಂಡಿಸಿದರು, ನೂತನ ಕಾರ್ಯದರ್ಶಿ ಗಿರಿಧರ್‍ರಾಜ್ ಅರಸ್, ಮಾಜಿ ಅಧ್ಯಕ್ಷ ಟಿ.ಕೆ.ಹರ್ಷವರ್ಧನ್, ಪ್ರಾಜಕ್ಟ್ ಡೈರಕ್ಟರ್ ಮನು, ಸ್ಥಾಪಕ ಅಧ್ಯಕ್ಷ ಸಿ.ಆರ್.ವೇಣುಗೋಪಾಲ್ ಉಪಸ್ಥಿತರಿದ್ದರು.