×
Ad

ಜಾವಡೇಕರ್ ಅವರಿಗೆ ಕರ್ನಾಟಕದ ಬಗ್ಗೆ ಏನು ಗೊತ್ತು: ಸಿಎಂ ತಿರುಗೇಟು

Update: 2018-01-24 23:24 IST

ಮೈಸೂರು, ಜ.24: ಕೇಂದ್ರ ಸಚಿವ ಜಾವಡೇಕರ್ ಅವರಿಗೆ ಕರ್ನಾಟಕದ ಬಗ್ಗೆ ಏನು ಗೊತ್ತು? ಅವರೇನು ಭವಿಷ್ಯ ಹೇಳುತ್ತಾರಾ? ಜಾವಡೇಕರ್, ಅಮಿತ್ ಶಾ, ನರೇಂದ್ರ ಮೋದಿ ಯಾರೇ ಬಂದರೂ ಕರ್ನಾಟಕದಲ್ಲಿ ಅವರ ಆಟ ನಡೆಯುವುದಿಲ್ಲ. ನೂರಕ್ಕೆ ನೂರು ನಾವೇ ಗೆಲುವು ಸಾಧಿಸುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇನ್ನು ನೂರು ದಿನಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿಕೆ ನೀಡಿದ್ದ ಕೇಂದ್ರ ಸಚಿವ ಜಾವಡೇಕರ್ ಹೇಳಿಕೆಗೆ ನಗರದ ಟಿ.ಕೆ.ಲೇಔಟ್‌ನ ತಮ್ಮ ನಿವಾಸದಲ್ಲಿ ಬುಧವಾರ ತಿರುಗೇಟು ನೀಡಿದ ಅವರು, ಜಾವಡೇಕರ್‌ಗೆ ಕರ್ನಾಟಕದ ಬಗ್ಗೆ ಏನು ಗೊತ್ತಿಲ್ಲ. ಇನ್ನೂ ಯಡಿಯೂರಪ್ಪನವರಿಗಂತೂ ಇಲ್ಲಿನ ಬಗ್ಗೆ ಏನೂ ತಿಳಿದಿಲ್ಲ. ಕೇಂದ್ರ ಸರಕಾರದ ಅನುದಾನ ಯಡಿಯೂರಪ್ಪನವರ ಮನೆಯದ್ದಾ? ನಮಗೆ ಭಿಕ್ಷೆ ಕೊಡುವ ರೀತಿಯಲ್ಲಿ ಅಮಿತ್ ಶಾ, ಯಡಿಯೂರಪ್ಪ ನಾವು ಕೇಂದ್ರದಿಂದ ಹಣ ಕೊಟ್ಟಿದ್ದೇವೆ ಎಂದು ಹೇಳುತ್ತಾರೆ. ಅವರಿಗೆ ಸಂವಿಧಾನ, ಕಾನೂನು ಗೊತ್ತಿಲ್ಲ. ಸುಮ್ಮನೆ ಜನರಿಗೆ ತಪ್ಪು ಮಾಹಿತಿ ನೀಡಬಾರದು. ಕಾನೂನಾತ್ಮಕವಾಗಿ ಕೇಂದ್ರದಲ್ಲಿ ಯಾವುದೇ ಸರಕಾರ ಇದ್ದರೂ ರಾಜ್ಯಕ್ಕೆ ಅನುದಾನ ನೀಡಲೇಬೇಕು. ಯಡಿಯೂರಪ್ಪಗೆ ಈ ರೀತಿ ಮಾತನಾಡಲು ನಾಚಿಕೆಯಾಗಬೇಕು. ಅವರು ಮುಖ್ಯಮಂತ್ರಿಯಾಗಿದ್ದವರು, ಸ್ವಲ್ಪ ಕಾನೂನು ತಿಳಿದುಕೊಳ್ಳಬೇಕು ಎಂದು ಹರಿಹಾಯ್ದರು.

ವಿ.ಶ್ರೀನಿವಾಸಪ್ರಸಾದ್ ‘ಸಿದ್ದರಾಮಯ್ಯ ಕುರಿ’ ಎಂದು ಹೇಳಿಕೆ ನೀಡಿದ್ದ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಅವರು, ಕೀಳು ಮಟ್ಟದ ರಾಜಕಾರಣಕ್ಕೆ ಪ್ರತಿಕ್ರಿಯೆ ನೀಡಲ್ಲ ಎಂದ ಅವರು, ನಾಳಿನ ಬಂದ್ ವೇಳೆ ಸಾರ್ವಜನಿಕರು ಶಾಂತಿ ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಬೇಕು ಎಂದು ಹೇಳಿದರು.

ಈ ಸಂದರ್ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ ಮಾನಸ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಸಿಎಂ ಜೊತೆಗಿದ್ದರು. ಇದೇ ವೇಳೆ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿದರು.

ವರ್ಗಾವಣೆಯಲ್ಲಿ ರಾಜಕೀಯ ಇಲ್ಲ:

ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿಚಾರವಾಗಿ ಹಾಸನ ಮಾಜಿ ಶಾಸಕ ಶಿವರಾಂ ನನ್ನ ಜೊತೆ ಮಾತನಾಡಿಲ್ಲ. ಈ ವರ್ಗಾವಣೆ ಆಡಳಿತಾತ್ಮಕ ಪ್ರಕ್ರಿಯೆ. ಇದರಲ್ಲಿ ರಾಜಕೀಯ ಇಲ್ಲ. ಇದನ್ನೇ ಯಾಕೆ ದೊಡ್ಡ ವಿಚಾರ ಮಾಡಬೇಕು. ದೇವೇಗೌಡರ ಹೇಳಿಕೆ ಬಗ್ಗೆ ನಾನು ಟೀಕೆ ಮಾಡಲ್ಲ. ಅವರು ಯಜಮಾನರು. ಅವರು ಏನು ಬೇಕಾದರೂ ಮಾತನಾಡಿಕೊಳ್ಳಲಿ. ನಾನು ಯಾವುದೇ ಪ್ರತಿಕ್ರಿಯೆ ನೀಡಲ್ಲ.
-ಸಿದ್ದರಾಮಯ್ಯ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News