ಕರ್ನಾಟಕ ಬಂದ್: ಚಿಕ್ಕಮಗಳೂರಿನಲ್ಲಿ ಉತ್ತಮ ಪ್ರತಿಕ್ರಿಯೆ
ಚಿಕ್ಕಮಗಳೂರು, ಜ.25: ಮಹದಾಯಿ-ಕಳಸಾಬಂಡೂರಿ ಯೋಜನೆಗೆ ಆಗ್ರಹಿಸಿ ಕನ್ನಡಪರ ಸಂಘಟನೆಗಳು ನೀಡಿರುವ ರಾಜ್ಯ ಬಂದ್ ಕರೆಗೆ ಚಿಕ್ಕಮಗಳೂರು ನಗರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕೆಎಸ್‍ಆರ್‍ಟಿಸಿ ಬಸ್, ಖಾಸಗಿ ಬಸ್ ಸೇರಿದಂತೆ ಆಟೋ ಸಂಚಾರಗಳು ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಬಸ್ ನಿಲ್ದಾಣದಲ್ಲಿ ಸಾರಿಗೆ ಬಸ್ ಕಾಣಿಸದ ಹಿನ್ನೆಲೆಯಲ್ಲಿ, ಹಲವು ಪ್ರಯಾಣಿಕರು ಪರದಾಡಬೇಕಾಯಿತು. ಬೆಳಗ್ಗೆ 6 ಗಂಟೆಯಿಂದಲೇ ಬೆಂಗಳೂರು, ಧರ್ಮಸ್ಥಳ, ಮಂಗಳೂರು ಸೇರಿದಂತೆ ಬೇರೆ ಜಿಲ್ಲೆಗಳಿಗೆ ತೆರಳುವ ಪ್ರಯಾಣಿಕರು ಬಸ್ ಇಲ್ಲದೇ ಪರದಾಟ ನಡೆಸಬೇಕಾಯಿತು.
ನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ ಮುಂಭಾಗದಲ್ಲಿ ವಿವಿಧ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟಿಸಿದರು. ಚಲಿಸುತ್ತಿರುವ ವಾಹನಗಳನ್ನು ತಡೆದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ವಿವಿಧ ಕನ್ನಡ ಪರ ಸಂಘಟನೆಗಳಿಂದ ವಿಭಿನ್ನವಾಗಿ ಉರುಳು ಸೇವೆ ಹಾಗೂ ತಲೆ ಬೋಳಿಸಿಕೊಂಡು ನಗರದ ಹನುಮಂತಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿದವು. ಕೆಲವು ಕನ್ನಡಪರ ಕಾರ್ಯಕರ್ತರು ಶ್ರೀ ಗಣಪತಿ ದೇವಾಲಯದಿಂದ ಹನುಮಂತಪ್ಪ ವೃತ್ತದವರೆಗೆ ಉರುಳು ಸೇವೆ ಮಾಡಿದರು. ಇಬ್ಬರು ತಲೆ ಬೋಳಿಸಿಕೊಂಡು, ಖಾಲಿ ಕೊಡ ಪ್ರದರ್ಶಿಸಿ ಗಮನ ಸೆಳೆದರು.
ಮಳಲೂರು ಗ್ರಾಮದ ಪ್ರಗತಿಪರ ರೈತ ಚಂದ್ರೇಗೌಡ ಎಂಬವರು ನಗರದ ಹನುಮಂತಪ್ಪ ವೃತ್ತದಲ್ಲಿ ಏಕಾಂಗಿಯಾಗಿ ಸೈಕಲ್‍ನಲ್ಲಿ ಹಸಿರು ಬಾವುಟ ಹಾಗೂ ಕ್ಯಾರಿಯರ್‍ಗೆ ಹಾಲು ಕ್ಯಾನ್ ಕಟ್ಟಿಕೊಂಡು ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಬಂದ್ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಚಿಕ್ಕಮಗಳೂರು ಜಿಲ್ಲೆಯ ಎಲ್ಲಾ ಶಾಲೆ ಕಾಲೇಜಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಶ್ರೀರಂಗಯ್ಯ ಆದೇಶ ಹೊರಡಿಸಿದ್ದರು. ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿತ್ತು.