×
Ad

ಹನೂರು: ಗಿರಿ ಜನರಿಗೆ ಅರಣ್ಯ ಹಕ್ಕು ಪತ್ರ, ಕಂಬಳಿ ವಿತರಣಾ ಕಾರ್ಯಕ್ರಮ

Update: 2018-01-25 17:07 IST

ಹನೂರು,ಜ.25: ಗಿರಿಜನರು ಉಳುಮೆ ಮಾಡುವ ಜಮೀನುಗಳಿಗೆ ಅರಣ್ಯ ಹಕ್ಕುಪತ್ರ ವಿತರಣೆ ಮತ್ತು ಅವರಿಗೆ ಉಚಿತ ಅನಿಲ ಸಂಪರ್ಕ ವಿತರಣೆಯಲ್ಲಿ ಹನೂರು ಕ್ಷೇತ್ರವು ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ ಎಂದು ಶಾಸಕ ನರೇಂದ್ರ ತಿಳಿಸಿದರು.

ಕ್ಷೇತ್ರ ವ್ಯಾಪ್ತಿಯ  ಜೀರಿಗೆಗದ್ದೆ ಗ್ರಾಮದ ಗಿರಿಜನ ಆಶ್ರಮ ಶಾಲಾ ಆವರಣದಲ್ಲಿ ಗಿರಿಜನರಿಗೆ ಅರಣ್ಯ ಹಕ್ಕು ಪತ್ರ ಮತ್ತು ಕಂಬಳಿ ವಿತರಣಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ನರೇಂದ್ರ, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಸೊರಬ ಮತ್ತು ಮೈಸೂರು ಜಿಲ್ಲೆಯ ಹೆಗ್ಗಡ ದೇವನಕೋಟೆ ಕ್ಷೇತ್ರಗಳಲ್ಲಿ ಹನೂರು ಕ್ಷೇತ್ರಕ್ಕಿಂತಲೂ ಹೆಚ್ಚು ಅರಣ್ಯ ಪ್ರದೇಶವಿದ್ದರೂ ಕೂಡ ಅರಣ್ಯ ಹಕ್ಕು ಕಾಯ್ದೆಯನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡಿರುವುರದಲ್ಲಿ ಹನೂರು ಕ್ಷೇತ್ರ ಪ್ರಥಮ ಸ್ಥಾನದಲ್ಲಿದೆ. ಕಳೆದ ನಾಲ್ಕೂವರೆ ವರ್ಷಗಳ ಅವಧಿಯಲ್ಲಿ 1500 ಗಿರಿಜನರಿಗೆ 2865 ಎಕರೆ ಜಮೀನುಗಳನ್ನು ಮಂಜೂರು ಮಾಡಿಸಿ ಅರಣ್ಯ ಹಕ್ಕು ಪತ್ರ ವಿತರಿಸಲಾಗಿದೆ. ಅಲ್ಲದೆ ಅರಣ್ಯದ ಮೇಲಿನ ಗಿರಿಜನರ ಒತ್ತಡವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ 30 ಸಾವಿರ ಗಿರಿಜನರಿಗೆ ಅರಣ್ಯ ಇಲಾಖೆ ವತಿಯಿಂದ ಉಚಿತವಾಗಿ ಗ್ಯಾಸ್ ಸಂಪರ್ಕವನ್ನು ಕಲ್ಪಿಸಲಾಗಿದೆ. ಈ ಪ್ರಮಾಣದಲ್ಲಿ ರಾಜ್ಯದ ಎಲ್ಲಿಯೂ ಕೂಡ ಅನಿಲ ಸಂಪರ್ಕಗಳನ್ನು ಕಲ್ಪಿಸಿಲ್ಲ ಎಂದು ತಿಳಿಸಿದರು.

82 ಹಾಡಿಗಳಿಗೂ ಮೂಲಸೌಕರ್ಯ: ನಮ್ಮ ಸಮಾಜದ ಕಟ್ಟಕಡೆಯ ಪ್ರಜೆಗೂ ಕನಿಷ್ಟ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕೆಂಬ ಉದ್ದೇಶದಿಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ನಾಲ್ಕೂವರೆ ವರ್ಷಗಳ ಅವಧಿಯಲ್ಲಿ ಕ್ಷೇತ್ರ ವ್ಯಾಪ್ತಿಯ 82 ಗಿರಿಜನರ ಹಾಡಿಗಳಿಗೂ ರಸ್ತೆ, ಕುಡಿಯುವ ನೀರು, ಸಮುದಾಯ ಭವನಗಳು ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯವನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಶಿಕ್ಷಣಕ್ಕೆ ಒತ್ತು ನೀಡಿ: ಯಾವುದೇ ಒಂದು ಸಂಸಾರ, ಸಮಾಜ, ಗ್ರಾಮ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಪ್ರಗತಿ ಹೊಂದಬೇಕಾದಲ್ಲಿ ಶೈಕ್ಷಣಿಕ ಪ್ರಗತಿ ಪ್ರಮುಖ ಪಾತ್ರವಹಿಸುತ್ತದೆ. ಆದುದರಿಂದ ಗಿರಿಜನರ ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಈ ನಿಟ್ಟಿನಲ್ಲಿ ಗಿರಿಜನರ ಅನುಕೂಲಕ್ಕಾಗಿ ಏಕಲವ್ಯ ಶಾಲೆಯನ್ನು ತೆರೆಯಲಾಗಿದೆ. ಪ್ರತಿ ಹೋಬಳಿಗೊಂದು ವಸತಿ ಶಾಲೆಯನ್ನು ತೆರೆಯಲಾಗುತ್ತಿದೆ. ಅಲ್ಲದೆ ಕ್ಷೀರಭಾಗ್ಯ, ಅಕ್ಷರ ದಾಸೋಹ, ಸೈಕಲ್ ವಿತರಣೆ, ಶೂ ವಿತರಣೆಯಂತಹ ಹತ್ತು ಹಲವಾರು ಕಾರ್ಯಕ್ರಮಗಳನ್ನು ಸರ್ಕಾರ ನೀಡಿದ್ದು ಈ ಎಲ್ಲಾ ಯೋಜನೆಗಳನ್ನು ಸದ್ಭಳಕೆ ಮಾಡಿಕೊಂಡು ಶೈಕ್ಷಣಿಕವಾಗಿ ಪ್ರಗತಿ ಸಾಧಿಸುವತ್ತ ಹೆಚ್ಚಿನ ಗಮನಹರಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ತಾ.ಪಂ ಅಧ್ಯಕ್ಷ ರಾಜು, ಜಿ.ಪಂ ಸದಸ್ಯೆ ಮರುಗದಮಣಿ, ಗ್ರಾ.ಪಂ ಅಧ್ಯಕ್ಷ ಬಸವಣ್ಣ, ತಾ.ಪಂ ಸದಸ್ಯೆ ಶಿವಮ್ಮ, ಸೋಲಿಗರ ಸಂಘದ ಅಧ್ಯಕ್ಷ ದೊಡ್ಡಯ್ಯ, ರಾಜ್ಯ ವನ್ಯಜೀವಿ ಸಮಿತಿ ಸದಸ್ಯ ಡಾ.ಮಾದೇಗೌಡ, ಸಮಾಜ ಕಲ್ಯಾಣ ಇಲಾಖಾ ಅಧಿಕಾರಿ ಗಂಗಾಧರ್ ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News