ಮೈಸೂರು: ಸಿಎಂ ಸಿದ್ದರಾಮಯ್ಯ ವಿರುದ್ಧ ಅಮಿತ್ ಶಾ ವಾಗ್ದಾಳಿ
ಮೈಸೂರು, ಜ.25: ನಗರದಲ್ಲಿ ನಡೆದ ಬಿಜೆಪಿ ಪರಿವರ್ತನಾ ರ್ಯಾಲಿಯಲ್ಲಿ ರಾಜ್ಯದ ಯಾವುದೇ ಸಮಸ್ಯೆ ಬಗ್ಗೆ ಮಾತನಾಡದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕಾಂಗ್ರೆಸ್ ಹಾಗೂ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಗುರುವಾರ ನಡೆದ ಬಿಜೆಪಿ ಪರಿವರ್ತನಾ ರ್ಯಾಲಿಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಸರಕಾರ ಭ್ರಷ್ಟಾಚಾರ ಪ್ರಕರಣಗಳನ್ನು ಹೇಳುತ್ತಾ ಹೋದರೆ 7 ದಿನ ಬೇಕಾಗುತ್ತದೆ. ಅಷ್ಟು ಮಾಹಿತಿ ನನ್ನ ಬಳಿ ಇದೆ, ಭ್ರಷ್ಟ ಸಿದ್ದರಾಮಯ್ಯ ಸರಕಾರವನ್ನು ಕಿತ್ತೊಗೆಯಲೇಬೇಕೆಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಸಿದ್ದರಾಮಯ್ಯ ಸರಕಾರ ರೈತಮಿತ್ರ ಸರಕಾರ ಎಂದು ಕಾಂಗ್ರೆಸ್‌ನವರು ಹೇಳುತ್ತಿದ್ದಾರೆ. ಆದರೆ 2,500ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದಕ್ಕೆ ಉತ್ತರ ನೀಡುವುದಿಲ್ಲ. ಇಂದು ಮೈಸೂರಿನಲ್ಲಿ ಪರಿವರ್ತನೆ ಯಾತ್ರೆ ನಡೆಯುತ್ತಿದ್ದು, ಬೆಂಗಳೂರಿನಲ್ಲಿ ನ.2ರಂದು ಆರಂಭಗೊಂಡ ಈ ಯಾತ್ರೆ ಫೆ.4ರಂದು ಕೊನೆಗೊಳ್ಳಲಿದೆ, ಈ ಯಾತ್ರೆ ಕಾಂಗ್ರೆಸ್‌ನಲ್ಲಿ ಭಯವನ್ನು ಉಂಟು ಮಾಡುತ್ತಿದೆ. ಸರಕಾರ ಯಾತ್ರೆಗೆ ಹೆದರಿ ಬಂದ್‌ಗೆ ಕರೆ ನೀಡಿ ತೊಂದರೆ ನೀಡಿದೆ ಎಂದು ಹರಿಹಾಯ್ದರು.
ಇಲ್ಲಿನ ಸರಕಾರಕ್ಕೆ ನಾನು ಚಾಲೆಂಜ್ ಮಾಡುತ್ತೇನೆ. ಮುಂದಿನ ಬಾರಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಫೆ.4 ರಂದು ಮೋದಿಯವರ ರ್ಯಾಲಿಯನ್ನು ತಡೆಯಲು ಬಂದ್ ಮಾಡಲು ಯತ್ನಿಸುತ್ತಿದ್ದಾರೆ. ಫೆ.4ರಂದು ನಡೆಯುವ ರ್ಯಾಲಿಯಲ್ಲಿ ಬೆಂಗಳೂರಿನ ಯಾತ್ರೆಗೆ ಜನರು ಬರುತ್ತಾರೆ. ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಕೇಂದ್ರ ಸಚಿವರಾದ ಸದಾನಂದಗೌಡ, ಪ್ರಕಾಶ್ ಜಾವಡೇಕರ್ ಮಾತನಾಡಿದರು. ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ, ಶೋಭಾಕರಂದ್ಲಾಜೆ, ಪ್ರತಾಪ್ ಸಿಂಹ, ವಿ.ಶ್ರೀನಿವಾಸಪ್ರಸಾದ್, ಆರ್.ಅಶೋಕ್, ಅರವಿಂದ ಲಿಂಬಾವಳಿ ಸೇರಿದಂತೆ ಹಲವು ಬಿಜೆಪಿ ನಾಯಕರು ಉಪಸ್ಥಿತರಿದ್ದರು.