ಮಹಾದಾಯಿ ವಿಚಾರ: ಪ್ರಧಾನಿ ಮದ್ಯ ಪ್ರವೇಶಕ್ಕೆ ಆಗ್ರಹಿಸಿ ಬಂದ್

Update: 2018-01-25 16:53 GMT

ತುಮಕೂರು.ಜ.25:ಮಹಾದಾಯಿ ವಿಚಾರದಲ್ಲಿ ಪ್ರಧಾನಿ ಮಧ್ಯ ಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕೆಂದು ಒತ್ತಾಯಿಸಿ ಕನ್ನಡ ಪರ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್‍ಗೆ ತುಮಕೂರು ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬಂದ್ ಗುರುವಾರ ಬೆಳಗ್ಗೆ 6 ಗಂಟೆಯಿಂದಲೇ ಆರಂಭವಾಗಿದ್ದು,ಕರ್ನಾಟಕ ಬಂದ ಜೊತಗೆ ಕೆ.ಎಸ್.ಆರ್.ಟಿ.ಸಿ. ನೌಕರರು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದರ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತೆ ಕೆ.ಎಸ್.ಆರ್.ಟಿ.ಸಿ. ಬಸ್ ಸಂಚಾರ ಸ್ಥಗಿತಗೊಂಡಿತ್ತು. ಖಾಸಗಿ ಬಸ್‍ಗಳ ಓಡಾಟವೂ ಸಹ ವಿರಳವಾಗಿದ್ದು, ಆಟೋಗಳು ಎಂದಿನಂತೆ ಸಂಚಾರ ನಡೆಸಿದ್ದವು.

ಈ ಹಿಂದಿನ ಕರ್ನಾಟಕ ಬಂದ್‍ಗೆ ಹೊಲಿಕೆ ಮಾಡಿದರೆ, ಇಂದಿನ ಬಂದ್ ಅತ್ಯಂತ ಶಾಂತಿಯಿಂದ ಕೂಡಿದ್ದು, ಯಾವುದೇ ಆಹಿತಕರ ಘಟನೆ ಬಗ್ಗೆ ವರದಿಯಾಗಿಲ್ಲ. ಆದರೆ ರೈಲು ತಡೆಯಲು ಮುಂದಾದ ಕರ್ನಾಟಕ ರಕ್ಷಣಾ ವೇದಿಕೆಯ 12 ಜನ ಕಾರ್ಯಕರ್ತರನ್ನು ತಿಲಕ್‍ ಪಾರ್ಕು ಠಾಣೆಯ ಪೊಲೀಸರು ಬಂಧಿಸಿ, ನಂತರ ಬಿಡುಗಡೆ ಮಾಡಿದರು.

ಬಂದ್ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಖಾಸಗಿ ಶಾಲಾ ಕಾಲೇಜುಗಳ ಒಕ್ಕೂಟ ಮುಂಜಾಗ್ರತಾ ಕ್ರಮವಾಗಿ ಖಾಸಗಿ ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಬಂದ್ ಆಗಿದ್ದವು. ಆದರೆ ಸರಕಾರಿ ಶಾಲೆಗಳು ಎಂದಿನಂತೆ ಕಾರ್ಯನಿರ್ವಹಿಸಿದ್ದು, ಸರಕಾರಿ ಮತ್ತು ಖಾಸಗಿ ಬಸ್ ಸಂಚಾರ ಇಲ್ಲದ ಕಾರಣ ಗ್ರಾಮೀಣ ಭಾಗದಿಂದ ಬರುವ ಮಕ್ಕಳ ಸಂಖ್ಯೆ ವಿರಳವಾಗಿತ್ತು.

ಎಂದಿನಂತೆ ನಡೆದ ಸರಕಾರಿ ಕಚೇರಿಗಳು: ಬಂದ್ ಹಿನ್ನೆಲೆಯಲ್ಲಿ ಪ್ರಯಾಣಿಕರ ವಾಹನಗಳ ಸಂಚಾರವಿಲ್ಲದಿದ್ದರೂ ಸರಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಿದ್ದು, ನಗರದಿಂದ ಬೆಳಗಿನ ಸಮಯ ಗ್ರಾಮೀಣ ಭಾಗದ ಶಾಲಾ ಕಾಲೇಜುಗಳಿಗೆ ಹೋಗುವ ನೌಕರರು ಬಸ್ಸುಗಳಿಲ್ಲದೆ ಪರದಾಡಿದರು. ಆದರೆ ನಗರದ ಸರಕಾರಿ ಕಚೇರಿಗಳು, ಶಾಲಾ, ಕಾಲೇಜುಗಳ ಸಿಬ್ಬಂದಿ ಎಂದಿನಂತೆ ಕಾರ್ಯನಿರ್ವಹಿಸಿದ್ದರು. ನಗರದ ಸರಕಾರಿ ಅಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಇಳಿಮುಖವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News