ತುಮಕೂರು: ಕರ್ನಾಟಕ ಬಂದ್‍ ಬೆಂಬಲಿಸಿ ದಸಂಸ ಪ್ರತಿಭಟನೆ

Update: 2018-01-25 16:56 GMT

ತುಮಕೂರು,ಜ.25: ಮಹಾದಾಯಿ,ಕಾವೇರಿ,ಮೇಕೆದಾಟು ಯೋಜನೆಗಳ ಅನುಷ್ಠಾನಕ್ಕೆ ಕೇಂದ್ರ ಸರಕಾರ ಮಧ್ಯ ಪ್ರವೇಶಿಸಿ ಕನ್ನಡಿಗರಿಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿ ಗುರುವಾರ ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಪಿ.ಎನ್. ರಾಮಯ್ಯ ನೇತೃತ್ವದಲ್ಲಿ ನಗರದ ರೈಲ್ವೆ ನಿಲ್ದಾಣ ಮತ್ತು ಟೌನ್‍ಹಾಲ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಮಹದಾಯಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಕನ್ನಡ ಪರ ಸಂಘಟನೆಗಳ ಕರೆ ನೀಡಿರುವ ಕರ್ನಾಟಕ ಬಂದ್‍ಗೆ ಪೂರಕವಾಗಿ ಹೋರಾಟವನ್ನು ಬೆಂಬಲಿಸಿ ನಗರದ ರೈಲ್ವೆ ನಿಲ್ದಾಣ ಮತ್ತು ಟೌನ್‍ಹಾಲ್ ವೃತ್ತದಲ್ಲಿ ದಸಂಸ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ದಸಂಸ ಜಿಲ್ಲಾಧ್ಯಕ್ಷ ಪಿ.ಎನ್.ರಾಮಯ್ಯ,ಕೇಂದ್ರದಲ್ಲಿ ಯಾವುದೇ ಸರಕಾರವಿದ್ದರೂ ನಾಡಿನ ನೆಲ, ಜಲ ವಿಚಾರದಲ್ಲಿ ಅನಾದಿ ಕಾಲದಿಂದಲೂ ಅನ್ಯಾಯವೆಸಗುತ್ತಲೇ ಬಂದಿವೆ. ಪ್ರಸ್ತುತ ಉತ್ತರ ಕರ್ನಾಟಕದ ನಾಲ್ಕು ಜಿಲ್ಲೆಗಳಿಗೆ ಜೀವ ಜಲವಾಗಿರುವ ಮಹಾದಾಯಿ ವಿಚಾರದಲ್ಲಿ ಕೇಂದ್ರದ ಮಲತಾಯಿ ಧೋರಣೆ ಮುಂದುವರೆದಿದೆ. ಮುಖ್ಯ ಮಂತ್ರಿಗಳು, ಜನಪ್ರತಿನಿಧಿಗಳು ನಿಯೋಗ ಹೋಗಿ ಪ್ರಧಾನಮಂತ್ರಿಗಳನ್ನು ಭೇಟಿಯಾಗಿ ಮನವಿ ಮಾಡಿದ್ದರೂ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಮಹದಾಯಿ ನದಿ ವಿವಾದವನ್ನು 15 ದಿನದಲ್ಲಿ ಬಗೆಹರಿಸುತ್ತೇನೆ ಎಂದು ಹೊರಟ ಯಡಿಯೂರಪ್ಪ ನಗೆಪಾಟಲಿಗೀಡಾಗುವಂತಾಯಿತು. ಜನಪ್ರತಿನಿಧಿಗಳ ಈ ಸೋಗಲಾಡಿ ರಾಜಕಾರಣದಿಂದಾಗಿ ಉತ್ತರ ಕರ್ನಾಟಕದ ಜನರು ತತ್ತರಿಸುವಂತಾಗಿದೆ. ಕುಡಿಯುವ ನೀರಿಗೆ ವರ್ಷಗಟ್ಟಲೇ ಪ್ರತಿಭಟನೆ ನಡೆಸಿದರೂ ಪರಿಹಾರವಿಲ್ಲದೆ ಪರದಾಡುತ್ತಿದ್ದು, ಇದನ್ನು ಬೆಂಬಲಿಸಿ, ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ಬಂದ್‍ಗೆ ಬೆಂಬಲವನ್ನು ದಸಂಸ ನೀಡುತ್ತಿದೆ ಎಂದರು.

ಪ್ರತಿಭಟನೆಯಲ್ಲಿ ಮುಖಂಡರಾದ ಸುನೀಲ್, ಚಿಕ್ಕರಂಗಯ್ಯ, ಟಿ.ಎನ್.ಮಧು, ಮಹೇಂದ್ರ, ಮಹೇಶ್.ಜಿ.ಎ, ಮಂಜುನಾಥ್, ನಾಗರಾಜು.ಸಿ., ರಂಗಸ್ವಾಮಿ ಹೆಚ್.,ಮನೋಜ್, ಬಾಬಾ, ಕೃಷ್ಣಮೂರ್ತಿ, ರಂಜನ್,ಬಿ.ಎಸ್.ಪಿಯ ದಾಸಪ್ಪ ಮತ್ತಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News