ಕರ್ನಾಟಕ ಬಂದ್ : ಶಿವಮೊಗ್ಗದಲ್ಲಿ ನೀರಸ ಪ್ರತಿಕ್ರಿಯೆ

Update: 2018-01-25 17:00 GMT

ಶಿವಮೊಗ್ಗ, ಜ. 25: ಮಹದಾಯಿ ನದಿ ನೀರು ಹಂಚಿಕೆ ವಿಚಾರದಲ್ಲಿ ಪ್ರಧಾನಮಂತ್ರಿ ಮಧ್ಯಸ್ಥಿಕೆಗೆ ಆಗ್ರಹಿಸಿ ಗುರುವಾರ ಕನ್ನಡ ಪರ ಸಂಘಟನೆಗಳು ಕರೆ ನೀಡಿದ್ದ ರಾಜ್ಯ ಬಂದ್‍ಗೆ ಶಿವಮೊಗ್ಗ ನಗರದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸಂಪೂರ್ಣ ವಿಫಲವಾಗಿದೆ. 

ಸ್ಥಳೀಯವಾಗಿ ಯಾವುದೇ ಸಂಘಟನೆಗಳು ಬಂದ್‍ಗೆ ಸಹಕಾರ ನೀಡುವಂತೆ ನಾಗರೀಕರಿಗೆ ಮನವಿ ಮಾಡಿರಲಿಲ್ಲ. ಹಾಗೆಯೇ ಈ ಬಗ್ಗೆ ಜಿಲ್ಲಾಡಳಿತಕ್ಕೂ ಮನವಿ ಕೊಟ್ಟಿರಲಿಲ್ಲ. ಆದರೆ ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯ ಶಿಕ್ಷಣ ಇಲಾಖೆಯ ಸೂಚನೆಯಂತೆ ಇಂದು ನಡೆಯಬೇಕಾಗಿದ್ದ ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆಗಳನ್ನು ಜಿಲ್ಲಾಡಳಿತ ಮುಂದೂಡಿತ್ತು. ಉಳಿದಂತೆ ಕರ್ನಾಟಕ ಚಲನಚಿತ್ರ ಮಂಡಳಿ ಬಂದ್ ಗೆ ಬೆಂಬಲ ಸೂಚಿಸಿದ್ದ ಕಾರಣದಿಂದ, ಚಿತ್ರಮಂದಿರಗಳಲ್ಲಿ ಚಲನಚಿತ್ರ ಪ್ರದರ್ಶನ ಸ್ಥಗಿತಗೊಳಿಸಲಾಗಿತ್ತು. 

ಉಳಿದಂತೆ ಕನ್ನಡ ಪರ ಸಂಘಟನೆಗಳು ರೈಲ್ವೆ, ಬಸ್ ಹಾಗೂ ಗೋಪಿ ವೃತ್ತದಲ್ಲಿ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದವು. ಉಳಿದಂತೆ ಬಂದ್‍ನ ಯಾವುದೇ ಪರಿಣಾಮ ಜನಸಾಮಾನ್ಯರ ದೈನಂದಿನ ಜೀವನದ ಮೇಲೆ ಬೀರಲಿಲ್ಲ. ಎಲ್ಲವೂ ಸಹಜ ಸ್ಥಿತಿಯಲ್ಲಿದ್ದುದು ಕಂಡುಬಂದಿತು. ಉಳಿದಂತೆ ನಗರದ ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸ್ ಇಲಾಖೆಯು ಪೊಲೀಸ್ ಪಹರೆಯ ವ್ಯವಸ್ಥೆ ಮಾಡಿತ್ತು. 

ಸಹಜ ಸ್ಥಿತಿ: ನಗರದಲ್ಲಿ ಜನಜೀವನ ಸಹಜ ಸ್ಥಿತಿಯಲ್ಲಿತ್ತು. ಶಾಲಾ-ಕಾಲೇಜು, ಸರ್ಕಾರಿಕಚೇರಿಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು. ಹೊರ ಊರುಗಳಿಗೆ ತೆರಳುವ ಹಾಗೂ ನಗರ ವ್ಯಾಪ್ತಿಯಲ್ಲಿ ಸಂಚರಿಸುವ ಸರ್ಕಾರಿ, ಖಾಸಗಿ ಬಸ್‍ಗಳ ಸಂಚಾರ, ರೈಲು, ಆಟೋ, ಟ್ಯಾಕ್ಸಿಗಳ ಸಂಚಾರ ಸಾಮಾನ್ಯವಾಗಿತ್ತು.

ನಗರದ ಪ್ರಮುಖ ರಸ್ತೆಗಳಲ್ಲಿ ಜನ-ವಾಹನ ಸಂಚಾರ ಸಹಜ ಸ್ಥಿತಿಯಲ್ಲಿತ್ತು. ಹೋಟೆಲ್, ಅಂಗಡಿ -ಮುಂಗಟ್ಟು, ಪೆಟ್ರೋಲ್ ಬಂಕ್, ಖಾಸಗಿ ಕಚೇರಿಗಳ ಕಾರ್ಯನಿರ್ವಹಣೆಗೆ ಯಾವುದೇ ಅಡ್ಡಿಯಾಗಲಿಲ್ಲ. ಪ್ರಮುಖ ಮಾರುಕಟ್ಟೆಗಳಲ್ಲಿ ವ್ಯಾಪಾರ-ವಹಿವಾಟು ಎಂದಿನಂತಿತ್ತು. ಒಟ್ಟಾರೆ ರಾಜ್ಯ ಬಂದ್‍ಗೆ ಮಲೆನಾಡ ನಗರಿ ನಾಗರೀಕರ ಸ್ಪಂದನೆ ವ್ಯಕ್ತಪಡಿಸದಿದ್ದುದು ಕಂಡುಬಂದಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News