×
Ad

ಮಂಡ್ಯ: ಕನ್ನಡ ಪರ ಸಂಘಟನೆಗಳ ಪ್ರತಿಭಟನೆ; ಬಂದ್‍ಗೆ ಮಿಶ್ರ ಪ್ರತಿಕ್ರಿಯೆ

Update: 2018-01-25 22:36 IST

ಮಂಡ್ಯ, ಜ.25: ಮಹಾದಾಯಿ ನದಿ ನೀರು ಸಂಬಂಧ ಕನ್ನಡಪರ ಸಂಘಟನೆಗಳು ಗುರುವಾರ ಕರೆ ನೀಡಿದ್ದ ರಾಜ್ಯ ಬಂದ್‍ಗೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಹಲವು ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು.

ಜಿಲ್ಲಾ, ತಾಲೂಕು ಕೇಂದ್ರ ಸೇರಿದಂತೆ ಜಿಲ್ಲೆಯ ಇತರೆ ವ್ಯಾಪಾರೀ ಕೇಂದ್ರಗಳಲ್ಲಿ ಕೆಲವು ಹೊರತುಪಡಿಸಿದರೆ ಉಳಿದಂತೆ ಎಲ್ಲ ಬಗೆಯ ಅಂಗಡಿ ಮುಂಗಟ್ಟುಗಳು ಎಂದಿನಂತೆ ತೆರೆದಿದ್ದವು.

ಜಿಲ್ಲಾಡಳಿತವೇ ಶಾಲೆಗಳಿಗೆ ರಜೆ ಘೋಷಿಸಿತ್ತು. ಕೆಲವೆಡೆ ಕಾಲೇಜು ತರಗತಿಗಳು ನಡೆದವು. ಚಿತ್ರಮಂದಿರಗಳಲ್ಲಿ ಪ್ರದರ್ಶನ ರದ್ದುಪಡಿಸಲಾಗಿತ್ತು. ಬ್ಯಾಂಕ್ ಸೇರಿದಂತೆ ಸರಕಾರಿ ಕಚೇರಿಗಳು ತೆರೆದಿದ್ದವು. ಬಸ್ ಸಂಚಾರ ಸ್ಥಗಿತಗೊಂಡಿದ್ದರಿಂದ ಜನಸಂದಣಿ ಕಡಿಮೆ ಇತ್ತು.

ಮಂಡ್ಯ ನಗರದ ಪೇಟೆಬೀದಿ, ಸಂಜಯ ವೃತ್ತ, ಹೊಳಲು ವೃತ್ತ ಹಾಸುಪಾಸಿನಲ್ಲಿ ಬಹುತೇಕ ಅಂಗಡಿಗಳು ಬಂದ್ ಆಗಿದ್ದರೆ, ಉಳಿದೆಡೆ ತೆರೆದಿದ್ದವು.
ಸಾರಿಗೆ ಬಸ್ ಸಂಚಾರ ರದ್ದುಪಡಿಸಿದ್ದರಿಂದ ಬಸ್‍ನಿಲ್ದಾಣ ಬಿಕೋ ಅನ್ನುತ್ತಿತ್ತು. ನಗರದ ಮಧ್ಯೆ ಹಾದುಹೋಗುವ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ವಾಹನ ಸಂಚಾರ ವಿರಳವಾಗಿತ್ತು. ಜನರು ಟೆಂಪೋ, ಆಟೋಗಳನ್ನು ಆಶ್ರಯಿಸಿದ್ದರು.

ಪ್ರತಿಕೃತಿ ದಹನ, ಪ್ರತಿಭಟನೆ: ಬಂದ್ ಬೆಂಬಲಿಸಿ ಕದಂಬ ಸೈನ್ಯ, ಕನ್ನಡ ಸೇನೆ ಕರ್ನಾಟಕ, ಕರ್ನಾಟಕ ರಕ್ಷಣಾ ವೇದಿಕೆ, ಇತರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಕೇಂದ್ರ, ಗೋವಾ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸಂಜಯ ವೃತ್ತದಲ್ಲಿ ಕದಂಬ ಸೈನ್ಯ, ದಸಂಸ ಕಾರ್ಯಕರ್ತರು ಗೋವಾ, ಮಹಾರಾಷ್ಟ್ರ ರಾಜ್ಯಗಳ ವಿಪಕ್ಷಗಳ ಪ್ರತಿಕೃತಿ ದಹಿಸಿ, ಕೇಂದ್ರ ಸರಕಾರ ಮಧ್ಯೆಪ್ರವೇಶಿಸಿ ಕರ್ನಾಟಕಕ್ಕೆ ನ್ಯಾಯ ಕೊಡಿಸಬೇಕೆಂದು ಆಗ್ರಹಿಸಿದರು.

ಕದಂಬ ಸೈನ್ಯ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್, ಉಮ್ಮಡಹಳ್ಳಿ ನಾಗೇಶ್, ಎಸ್.ಚಂದ್ರಶೇಖರ್, ಡಿ.ಸಿ.ರವೀಂದ್ರ, ಭಗವಾನ್, ದಸಂಸ ಸಂಚಾಲಕ ಅಂದಾನಿ ಸೋಮನಹಳ್ಳಿ, ಸುಂಡಹಳ್ಳಿ ನಾಗರಾಜು, ವೆಂಕಟಚಲುವಯ್ಯ, ಎಸ್.ಕೆ.ರಾಜೇಶ್, ದಾಮೋಜಿರಾವ್, ಥಾಮಸ್ ಕಿಟ್ಟಣ್ಣ, ಹೇಮಂತ್‍ಕುಮಾರ್, ಬ್ರಹ್ಮಕುಮಾರಿ ಸಮಾಜದ ತಿಮ್ಮಯ್ಯ, ವಕೀಲ ರಾಮಚಂದ್ರ, ಸುನಿಲ್‍ಕುಮಾರ್ ಇತರರು ಪಾಲ್ಗೊಂಡಿದ್ದರು.

ಕೇಂದ್ರ ಸರಕಾರದ ಧೋರಣೆ ಖಂಡಿಸಿ ರೈಲ್ವೆ ನಿಲ್ದಾಣ ಮುತ್ತಿಗೆಗೆ ಯತ್ನಿಸಿದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ವೇದಿಕೆ ಜಿಲ್ಲಾಧ್ಯಕ್ಷ ಶಂಕರೇಗೌಡ, ಇತರರು ಭಾಗವಹಿಸಿದ್ದರು.

ಕರ್ನಾಟಕ ರಕ್ಷಣಾ ವೇದಿಕೆಯ(ಶಿವರಾಮೇಗೌಡ ಬಣ) ಜಿಲ್ಲಾಧ್ಯಕ್ಷ ಎಚ್.ಡಿ.ಜಯರಾಮು, ಟಿ.ಕೆ.ಸೋಮಶೇಖರ್, ಇತರರು ಬೈಕ್ ರ್ಯಾಲಿ ನಡೆಸಿದರೆ, ಜಿಲ್ಲಾಧ್ಯಕ್ಷ ಎಚ್.ಸಿ.ಮಂಜುನಾಥ್ ನೇತೃತ್ವದಲ್ಲಿ ಕನ್ನಡ ಸೇನೆ ಕಾರ್ಯಕರ್ತರು ಮತ್ತು ಗ್ರಾಮ ಪಂಚಾಯತ್ ಸದಸ್ಯರ ಒಕ್ಕೂಟದ ಕಾರ್ಯಕರ್ತರು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News