×
Ad

ಝೈಬುನ್ನಿಸಾ ನಿಗೂಢ ಆತ್ಮಹತ್ಯೆ ಪ್ರಕರಣ : ಪ್ರೇರಣೆ ನೀಡಿದ ಆರೋಪದಲ್ಲಿ ಶಿಕ್ಷಕ ಬಂಧನ

Update: 2018-01-25 22:57 IST

ಮಂಡ್ಯ, ಜ.25: ಕೆ.ಆರ್. ಪೇಟೆ ಪಟ್ಟಣ ನವೋದಯ ಮಾದರಿ ಅಲ್ಪಸಂಖ್ಯಾತರ ವಸತಿಶಾಲೆ ವಿದ್ಯಾರ್ಥಿನಿ ಝೈಬುನ್ನಿಸಾ (ಸಫ್ರಿನಾ) ಅನುಮಾನಾಸ್ಪದ ಸಾವು ಪ್ರಕರಣ ಆರೋಪಿ ಶಾಲೆಯ ಶಿಕ್ಷಕ ನಾರ್ಗೋನಹಳ್ಳಿ ರವಿ ಶಿವ ಕುಮಾರ್ ಎಂಬಾತನ್ನು ಕೆ.ಆರ್. ಪೇಟೆ ಪೊಲೀಸರು ಬಂಧಿಸಿದ್ದಾರೆ.

ಕಳೆದ 3 ತಿಂಗಳಿನಿಂದ ಝೈಬುನ್ನಿಸಾ ನವೋದಯ ಮಾದರಿ ಅಲ್ಪಸಂಖ್ಯಾತರ ವಸತಿ ಶಾಲೆಯಲ್ಲಿ ಕಲಿಯುತ್ತಿದ್ದು, ಆಕೆಗೆ ಶಾಲೆಯ ಅಧ್ಯಾಪಕ ರವಿ ಎಂಬಾತ ಮಾನಸಿಕ, ದೈಹಿಕ ಕಿರುಕುಳ ನೀಡಿದ್ದಾನೆ. ಈ ಬಗ್ಗೆ ಆಕೆ ಆತ್ಮಹತ್ಯೆ ಮಾಡಿಕೊಳ್ಳುವ ಅರ್ಧ ಗಂಟೆಯ ಮುನ್ನ ತನ್ನ ತಾಯಿಯೊಂದಿಗೆ ದೂರವಾಣಿ ಮೂಲಕ ಹೇಳಿ ಕೊಂಡಿದ್ದಳು.

ಕವಾಯಿತು ಮಾಡಿಸುವ ಸಮಯದಲ್ಲಿ ಸರಿಯಾಗಿ ವ್ಯಾಯಾಮ ಮಾಡಿಲ್ಲ ಎಂದು ಶಿಕ್ಷಕ ರವಿಶಿವಕುಮಾರ್ ಎಲ್ಲಾ ವಿದ್ಯಾರ್ಥಿಗಳ ಮುಂದೆ ದೈಹಿಕ ಹಲ್ಲೆ ನಡೆಸಿದ್ದಾರೆ. ಅಲ್ಲದೆ, ಬಟ್ಟೆ ಬಿಚ್ಚಿಸಿ ಹೊಡೆಯುವುದಾಗಿ ಆಕೆಗೆ ಬೆದರಿಸಿದ್ದಾರೆ. ಈ ಬಗ್ಗೆ ಆಕೆ ತನ್ನ ತಾಯಿಯೊಂದಿಗೆ ಹೇಳಿಕೊಂಡಿದ್ದಾಳೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಅಧ್ಯಾಪಕ ರವಿ ಅವರ ನಿಂದನೆ, ದೈಹಿಕ ಹಾಗೂ ಮಾನಸಿಕ ಕಿರುಕುಳಕ್ಕೆ ಬೇಸತ್ತು ಝೈಬುನ್ನಿಸಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆಕೆಯ ಸೋದರ ಮಾವ ಹಸೈನಾರ್ ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ರವಿ ಶಿವ ಕುಮಾರ್‌ನನ್ನು ಗುರುವಾರ ಬಂಧಿಸಿದ್ದಾರೆ.

ಆತ್ಮಹತ್ಯೆಗೆ ಪ್ರೇರಣೆ ನೀಡಿದ ಆರೋಪದಲ್ಲಿ ಅಧ್ಯಾಪಕ ರವಿ ವಿರುದ್ಧ ಸೆಕ್ಷನ್ 306ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News