ಕರ್ನಾಟಕಕ್ಕೂ ಹಬ್ಬಿದ 'ಪದ್ಮಾವತ್' ಕಿಚ್ಚು
ಬೆಳಗಾವಿ ,ಜ.25: ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ವಿವಾದಾತ್ಮಕ ಹಿಂದಿ ಚಿತ್ರ ‘ಪದ್ಮಾವತ್’ ಗುರುವಾರ ರಾಷ್ಟ್ರಾದ್ಯಂತ ಬಿಡುಗಡೆಯಾಗಿದ್ದು, ಗುರುವಾರ ರಾತ್ರಿ ಬೆಳಗಾವಿಯ ಪ್ರಕಾಶ್ ಥಿಯೇಟರ್‌ನಲ್ಲಿ ಚಿತ್ರ ವೀಕ್ಷಿಸಿ ಹೊರ ಬರುತ್ತಿದ್ದ ಪ್ರೇಕ್ಷಕರ ಮೇಲೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಯೊಬ್ಬ ಸೀಮೆಎಣ್ಣೆ ಬಾಟಲಿ ಎಸೆದು ಆತಂಕ ಸೃಷ್ಟಿಸಿರುವ ಘಟನೆ ನಡೆದಿದೆ.
ಸೀಮೆಎಣ್ಣೆ ಬಾಟಲಿ ಎಸೆದಾಗ ಬೆಂಕಿ ಹತ್ತಿಕೊಂಡಿದ್ದು, ಜನರು ದಿಕ್ಕಾಪಾಲು ಓಡಿದ್ದಾರೆ. ಪೊಲೀಸರು ತಕ್ಷಣವೇ ಬೆಂಕಿ ನಂದಿಸಿ ಅನಾಹುತವನ್ನು ತಡೆದಿದ್ದಾರೆ. ದುಷ್ಕರ್ಮಿ ಬೈಕ್‌ನಲ್ಲಿ ಬಂದು ಸೀಮೆಎಣ್ಣೆ ಬಾಟಲಿ ಎಸೆಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಘಟನೆಯು ನಗರದ ಖಡೇಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಘಟನೆಯಿಂದ ಆತಂಕಪಡುವ ಅಗತ್ಯವಿಲ್ಲ ಎಂದು ಬೆಳಗಾವಿ ಪೊಲೀಸ್ ಆಯುಕ್ತ ರಾಜಪ್ಪ ಹೇಳಿದ್ದಾರೆ.
ಕರ್ಣಿ ಸೇನೆಯು ‘ಪದ್ಮಾವತ್’ ಚಿತ್ರ ಪ್ರದರ್ಶನ ಖಂಡಿಸಿ ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರ ಹಾಗೂ ಉತ್ತರಪ್ರದೇಶದಲ್ಲಿ ಹಿಂಸಾಚಾರ ನಡೆಸಿದ್ದು, ಇದೀಗ ಕರ್ನಾಟಕಕ್ಕೆ ಪ್ರತಿಭಟನೆಯ ಕಿಚ್ಚು ಹಬ್ಬಿದೆ.