ಬಂಡೀಪುರ: ಜೋಡಿ ಹುಲಿಗಳ ನಿಗೂಢ ಸಾವು
ಗುಂಡ್ಲುಪೇಟೆ, ಜ.25: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಜೋಡಿ ಹುಲಿಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳು ಹುಲಿಗಳ ಸಾವಿನ ರಹಸ್ಯ ಭೇದಿಸಲು ಕಾರ್ಯತಂತ್ರ ರೂಪಿಸುತ್ತಿದ್ದಾರೆ.
ಬಂಡೀಪುರ ಉದ್ಯಾನವನ ವ್ಯಾಪ್ತಿಯ ಹಂಗಳ ಗ್ರಾಮದ ಹಿರಿಕೆರೆ ಬಳಿ 3-4 ದಿನಗಳ ಹಿಂದೆ ಸಾವನ್ನಪ್ಪಿದೆ ಎನ್ನಲಾದ ಎರಡು ಹುಲಿಗಳ ಮೃತ ದೇಹ ದೊರೆತಿದೆ. ಕೊಳೆತ ಸ್ಥಿತಿಯಲ್ಲಿದ್ದ ಹುಲಿಗಳ ಮೃತ ದೇಹದ ಕೆಲವೇ ಅಂತರದಲ್ಲಿ ಆನೆಯೊಂದು ಸಾವನ್ನಪ್ಪಿರುವುದು ಗಮನಿಸಿದರೆ ಹುಲಿ ಮತ್ತು ಆನೆ ಸಾವು ನಿಗೂಢವಾಗಿದೆ ಎಂದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ನಿದೇರ್ಶಕ ಅಂಬಾಡಿ ಮಾದನ್ ಹೇಳಿದ್ದಾರೆ.
ಕರ್ನಾಟಕ, ತಮಿಳುನಾಡು, ಕೇರಳ ರಾಜ್ಯಗಳಿಗೆ ಹೊಂದಿಕೊಂಡಂತಿರುವ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ತಿಂಗಳ ಅಂತರದಲ್ಲಿ ಮೂರು ಹುಲಿಗಳು ಸಾವನ್ನಪ್ಪಿವೆ. ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹುಲಿಗಳು ನಿಗೂಢವಾಗಿ ಸಾವನ್ನಪ್ಪುತ್ತಿರುವ ಬಗ್ಗೆ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಅರಣ್ಯಾಧಿಕಾರಿಗಳು ಕಂಗಲಾಗಿದ್ದಾರೆ. ಎರಡು ಹುಲಿಗಳು ಮತ್ತು ಆನೆ ಸಾವಿಗೆ ನಿಖರವಾದ ಕಾರಣಗಳು ತಿಳಿದು ಬಂದಿಲ್ಲ. ಮೃತ ದೇಹದಿಂದ ಅಂಗಾಗಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿ ವರದಿ ಬಂದ ಬಳಿಕ ಸತ್ಯಾಸತ್ಯತೆ ತಿಳಿಯಲಿದೆ ಎಂದು ಅರಣ್ಯ ಇಲಾಖೆಯ ವೈದ್ಯಾಧಿಕಾರಿ ಡಾ.ನಾಗರಾಜು ತಿಳಿಸಿದ್ದಾರೆ.