×
Ad

ಮಡಿಕೇರಿ: ಕೊಡವ ಸಾಹಿತ್ಯ ಅಕಾಡೆಮಿ; ತಜ್ಞರೊಂದಿಗೆ ಸಂವಾದ ಕಾರ್ಯಕ್ರಮ

Update: 2018-01-25 23:29 IST

ಮಡಿಕೇರಿ, ಜ.25 :ಕೊಡವ ಭಾಷೆ ಮಾತನಾಡುವ ಎಲ್ಲರೂ ಒಟ್ಟು ಗೂಡಿ ಕೊಡವ ಭಾಷೆ, ಆಚಾರ ವಿಚಾರಗಳನ್ನು ಉಳಿಸಲು ಶ್ರಮಿಸಬೇಕಿದೆ ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ನೂತನ ಅಧ್ಯಕ್ಷರಾದ ಪೆಮ್ಮಂಡ ಕೆ.ಪೊನ್ನಪ್ಪ ಅವರು ಮನವಿ ಮಾಡಿದ್ದಾರೆ.

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ನಗರದ ಅರಸು ಭವನದಲ್ಲಿ ಗುರುವಾರ ನಡೆದ ತಜ್ಞರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಕೊಡವ ಭಾಷೆ ಮಾತನಾಡುವ 21 ಸಮಾಜಗಳು ಒಟ್ಟುಗೂಡಿ ಅಕಾಡೆಮಿ ವತಿಯಿಂದ ಏರ್ಪಡಿಸುವ ಕಾರ್ಯಕ್ರಮಗಳಿಗೆ ಕೈಜೋಡಿಸಬೇಕು. ಕೊಡವ ಭಾಷೆ ಮಾತನಾಡುವ ಎಲ್ಲರೂ ಒಟ್ಟುಗೂಡಿದಾಗ ಕೊಡವ ಭಾಷೆ, ಸಾಹಿತ್ಯ ಸಂಸ್ಕೃತಿ ಉಳಿಸಲು ಸಾಧ್ಯ ಎಂದು ಪೆಮ್ಮಂಡ ಕೆ. ಪೊನ್ನಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷರಾದ ಬಿ.ಎಸ್ ತಮ್ಮಯ್ಯ ಮಾತನಾಡಿ, ಕೊಡವ ಭಾಷಿಕರೆಲ್ಲರೂ ವಿವಿಧ ಕಲೆ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ನಿಟ್ಟಿನಲ್ಲಿ ಕೊಡವ ಭಾಷೆಯ ನಾಟಕ, ಜಾನಪದ, ಸಂಗೀತ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸಬೇಕು ಎಂದು ಅವರು ಹೇಳಿದರು.

ಮಾಜಿ ಅಧ್ಯಕ್ಷರಾದ ಉಳ್ಳಿಯಡ ಎಂ.ಪೂವಯ್ಯ ಮಾತನಾಡಿ, ಕೊಡವ ಭಾಷೆಯನ್ನು ಸಂವಿಧಾನ 8 ನೇ ಪರಿಚ್ಛೇದದಲ್ಲಿ ಸೇರ್ಪಡೆ ಮಾಡಬೇಕು. ಆ ನಿಟ್ಟಿನಲ್ಲಿ ಗಮನ ಸೆಳೆಯಬೇಕಿದೆ. ಹಾಗೆಯೇ ಪ್ರಾಥಮಿಕ ಶಾಲಾ ಹಂತದಲ್ಲಿ ಕೊಡವ ಭಾಷೆಯನ್ನು ಪಠ್ಯ ಪುಸ್ತಕದಲ್ಲಿ ಸೇರಿಸಲು ಪ್ರಯತ್ನಿಸಬೇಕಿದೆ ಎಂದರು. ಅಕಾಡೆಮಿ ಸದಸ್ಯರಾದ ಐತಿಚಂಡ ರಮೇಶ್ ಉತ್ತಪ್ಪ ಅವರು ಮಾತನಾಡಿದರು. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News