ಸಂವಿಧಾನವನ್ನು ಬದಲಾಯಿಸಬೇಕೆನ್ನುವ ಹೇಳಿಕೆ ಅವಿವೇಕತನದ್ದು: ಶಾಸಕ ನರೇಂದ್ರ

Update: 2018-01-26 17:36 GMT

ಹನೂರು,ಜ.26: ಡಾ ಬಿ.ಆರ್.ಅಂಬೇಡ್ಕರ್ ಅವರು ರಚನೆ ಮಾಡಿ ಕೊಟ್ಟಿರುವಂತಹ ಸಂವಿಧಾನದಲ್ಲಿ ಅಡಕವಾಗಿರುವ ಅಂಶಗಳಿಂದ ಭಾರತ ದೇಶ ವಿಶ್ವಮಟ್ಟದಲ್ಲಿ ತಲೆ ಎತ್ತುವಂತಾಗಿದೆ. ಆದರೆ ಅಂತಹ ಸಂವಿಧಾನವನ್ನು ಬದಲಾಯಿಸಬೇಕೆನ್ನುವ ಕೆಲ ಕಿಡಿಗೇಡಿಗಳ ಹೇಳಿಕೆ ಅವಿವೇಕತನದ್ದು ಎಂದು ಶಾಸಕ ನರೇಂದ್ರ ಅಭಿಪ್ರಾಯಪಟ್ಟರು.

ಪಟ್ಟಣದ ಮಲೆ ಮಹದೇಶ್ವರ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ 69ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಧ್ವಜವಂದನೆ ಸ್ವೀಕರಿಸಿ ಮಾತನಾಡಿದ ಶಾಸಕ ನರೇಂದ್ರ, ಸ್ವಾತಂತ್ರ್ಯ ನಂತರ ದೇಶದಲ್ಲಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ವೈಜ್ಞಾನಿಕ ಸೇರಿದಂತೆ ಹಲವಾರು ರಂಗಗಳಲ್ಲಿ ಪ್ರಗತಿ ಸಾಧಿಸಿದ್ದು, ಈ ಎಲ್ಲಾ ಸಾಧನೆಗಳಿಗೆ ಸಂವಿಧಾನದಲ್ಲಿ ಅಡಕವಾಗಿರುವ ಅಂಶಗಳೇ ಕಾರಣ. ಇಂದು ಭಾರತ ವಿಶ್ವ ಮಟ್ಟದಲ್ಲಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಇಡೀ ವಿಶ್ವವೇ ಭಾರತದ ಸಂವಿಧಾನವನ್ನು ಗೌರವಿಸುತ್ತಿದೆ. ಹಾಗೆಯೇ ಕಾಲಕ್ಕನುಗುಣವಾಗಿ ಸಂವಿಧಾನದಲ್ಲಿ ಕೆಲ ತಿದ್ದುಪಡಿಗಳನ್ನು ತರಲಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲ ಕಿಡಿಗೇಡಿಗಳು ಸಂವಿಧಾನವನ್ನೇ ಬದಲಾಯಿಸುತ್ತೇವೆ ಎನ್ನುತ್ತಿರುವುದು ಅವಿವೇಕತನದ ಪರಮಾವಧಿ ಎಂದು ತಿಳಿಸಿದರು. 

ವಿಶೇಷ ಗಣರಾಜ್ಯೋತ್ಸವ: ಈ ಬಾರಿಯ ಗಣರಾಜ್ಯೋತ್ಸವ ಹನೂರು ತಾಲೂಕಿಗೆ ವಿಶೇಷ ದಿನವಾಗಿದ್ದು, ಹನೂರು ಪಟ್ಟಣವು ಅಧಿಕೃತ ತಾಲೂಕು ಕೇಂದ್ರವಾಗಿ ಜ.18ರಂದು ಕರ್ನಾಟಕ ರಾಜ್ಯಪತ್ರದಲ್ಲಿ ಘೋಷಣೆಯಾಗಿದೆ. ತಾಲೂಕು ಕೇಂದ್ರವಾದ ಬಳಿಕ ಪ್ರಥಮ ರಾಷ್ಟ್ರೀಯ ಹಬ್ಬ ಆಚರಣೆ ಮಾಡುತ್ತಿರುವ ಈ ಸಂದರ್ಭದಲ್ಲಿ ತಾಲೂಕು ಕೇಂದ್ರವನ್ನಾಗಿಸಲು ಶ್ರಮಿಸಿದ ಎಲ್ಲರನ್ನೂ ಸ್ಮರಿಸುವ ಸುದಿನವಾಗಿದೆ ಎಂದು ಅಭಿಪ್ರಾಯಪಟ್ಟರು.

ಧ್ವಜಾರೋಹಣ, ಧ್ವಜವಂದನೆ: ಕಾರ್ಯಕ್ರಮಕ್ಕೂ ಮುನ್ನ ಶಾಸಕ ನರೇಂದ್ರ ಧ್ವಜಾರೋಹಣ ನೆರವೇರಿಸಿದರು. ಬಳಿಕ ಪಟ್ಟಣದ ಕ್ರಿಸ್ತರಾಜಶಾಲೆ, ವಿವೇಕಾನಂದ ಶಾಲೆ, ಏಕಲವ್ಯ ಶಾಲೆ, ಮೊರಾರ್ಜಿ ದೇಸಾಯಿ ವಸತಿ ಶಾಲೆ, ಗೌತಮ್‍ಶಾಲೆ, ಜಿ.ವಿ,ಗೌಡ ಪ್ರೌಢಶಾಲೆ ಮತ್ತು ಸರ್ಕಾರಿ ಮಾದರಿ ಶಾಲೆಯ ವಿದ್ಯಾರ್ಥಿಗಳು ಮತ್ತು ವಿವಿಧ ಶಾಲೆಗಳ ವಾದ್ಯ ವೃಂದಗಳು ಆಕರ್ಷಕ ಪಥ ಸಂಚಲನ ನಡೆಸುವ ಮೂಲಕ ಧ್ವಜವಂದನೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಉತ್ತಮ ಪಥಸಂಚಲನ ಪ್ರದರ್ಶನ ನೀಡಿದ ವಿವೇಕಾನಂದ ಶಾಲೆ ತಂಡಕ್ಕೆ ಪ್ರಥಮ ಸ್ಥಾನ, ಏಕಲವ್ಯ ಶಾಲೆಗೆ ದ್ವಿತೀಯ ಸ್ಥಾನ ಮತ್ತು ತೃತೀಯ ಸ್ಥಾನ ಪಡೆದ ಕ್ರಿಸ್ತರಾಜ ಶಾಲೆಗೆ ನೆನೆಪಿನ ಕಾಣಿಕೆ ನೀಡಿ ಗೌರವಿಸಲಾಯಿತು.

ಇದೇ ವೇಳೆ 2016-17ನೇ ಸಾಲಿನ ಎಸ್‍ಎಸ್‍ಎಲ್ ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ 3 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಬಳಿಕ ವಿವಿಧ ಶಾಲೆಗಳ ಮಕ್ಕಳು ದೇಶಭಕ್ತಿ ಗೀತೆಗಳಿಗೆ ನೃತ್ಯ ಪ್ರದರ್ಶನ ನೀಡುವ ಮೂಲಕ ನೆರೆದಿದ್ದವರ ಮನರಂಜಿಸಿದರು.

ಕಾರ್ಯಕ್ರಮದಲ್ಲಿ ತಾ.ಪಂ ಅಧ್ಯಕ್ಷ ರಾಜು, ಜಿ.ಪಂ ಸದಸ್ಯರುಗಳಾದ ಮರುಗದಮಣಿ, ಶಿವಮ್ಮ, ಲೇಖಾರವೀಂದ್ರ, ತಾ.ಪಂ ಸದಸ್ಯರಾದ ಸಿದ್ದಪ್ಪಾಜಿ, ಅರುಣ್‍ಕುಮಾರ್, ಪ.ಪಂ ಅಧ್ಯಕ್ಷೆ ಮಮತಾ ಮಹಾದೇವು, ಉಪಾಧ್ಯಕ್ಷ ಬಸವರಾಜು, ಸದಸ್ಯರಾದ ರಾಜುಗೌಡ, ನಾಗಣ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ಸ್ವಾಮಿ, ವಿಶೇಷ ತಹಸೀಲ್ದಾರ್ ಮಹದೇವಸ್ವಾಮಿ, ಪ.ಪಂ ಮುಖ್ಯಾಧಿಖಾರಿ ಮೋಹನ್‍ಕೃಷ್ಣ,ರಾಜಸ್ವ ನಿರೀಕ್ಷಕ ಮಾದೇಶ್, ಮುಖಂಡರಾದ ಮಾದೇಶ್, ಪಾಳ್ಯಕೃಷ್ಣ, ಲೊಕ್ಕನಹಲ್ಳಿ ರವಿ ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News