×
Ad

ಪರಿಶಿಷ್ಟರ ಕಲ್ಯಾಣಕ್ಕೆ 28,700 ಕೋಟಿ ರೂ. ಅನುದಾನ ವೆಚ್ಚ: ಟಿ.ಬಿ.ಜಯಚಂದ್ರ

Update: 2018-01-26 23:20 IST

ತುಮಕೂರು,ಜ.26: ದೇಶದಲ್ಲಿಯೇ ಪ್ರಥಮ ಬಾರಿಗೆ ಪರಿಶಿಷ್ಟ ಜಾತಿ, ಪಂಗಡದವರ ಏಳಿಗೆಗೆ ಕರ್ನಾಟಕ ರಾಜ್ಯ ಸರಕಾರ ತನ್ನ ಬಜೆಟ್‍ನಲ್ಲಿ 28,700 ಕೋಟಿ ರೂ ಅನುದಾನವನ್ನು ವೆಚ್ಚ ಮಾಡುತ್ತಿದೆ ಎಂದು ಕಾನೂನು ಸಂಸದೀಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದ್ದಾರೆ.

ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಅಮಾನಿಕರೆಯ ಗಾಜಿನ ಮನೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಯೋಜನೆಗಳ ಬಗ್ಗೆ ಜನಜಾಗೃತಿ ಕಾರ್ಯಕ್ರಮ, ಇಲಾಖಾ ಕಾರ್ಯ ಕ್ರಮಗಳ ಪುಸ್ತಕ ಬಿಡುಗಡೆ ಹಾಗೂ ಇಲಾಖೆ ವೆಬ್‍ಸೈಟ್ ಲೋಕಾರ್ಪಣೆ ಮಾಡಿ ಮಾತನಾಡುತಿದ್ದ ಅವರು, ಪರಿಶಿಷ್ಟರ ಕಲ್ಯಾಣಕ್ಕಾಗಿ ಮೀಸಲಿಟ್ಟಿರುವ ಅನುದಾನವನ್ನು ವೆಚ್ಚ ಮಾಡದೇ ನಿರ್ಲಕ್ಷ್ಯತಾಳುವ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ಹೂಡುವ ಮಸೂದೆಯನ್ನು ಜಾರಿಗೆ ತಂದ ಪ್ರಥಮ ರಾಜ್ಯ ಕರ್ನಾಟಕವಾಗಿದೆ ಎಂದರು.

ಅಧಿಕಾರಿಗಳು ಶೋಷಿತರ ಕಲ್ಯಾಣಕ್ಕಾಗಿ ಸರಕಾರ ಮೀಸಲಿಟ್ಟಿರುವ ಅನುದಾನವನ್ನು ವಿವಿಧ ಯೋಜನೆಗಳನ್ನು ಸದ್ಬಳಕೆ ಮಾಡುವ ಮೂಲಕ ಶೋಷಿತರು ಸಹ ಸಮಾಜದಲ್ಲಿ ಎಲ್ಲರಂತೆ ಕೂಡಿ ಬಾಳುವ ಅವಕಾಶಗಳನ್ನು ಕಲ್ಪಿಸಿ, ಸರ್ವರಿಗೂ ಸಮಪಾಲು-ಸರ್ವರಿಗೂ ಸಮಬಾಳು ಎಂಬ ಕರ್ನಾಟಕ ರಾಜ್ಯ ಸರಕಾರದ ಘನ ಉದ್ದೇಶವನ್ನು ಸಾಕಾರಗೊಳಿಸಬೇಕು ಎಂದರು.

ಜ.26 ಡಾ.ಬಿ.ಆರ್.ಅಂಬೇಡ್ಕರ್ ಅವರ ಕನಸು ನನಸಾದ ದಿನವಾಗಿದ್ದು, ಈ ದಿನ ಇತಿಹಾಸದಲ್ಲಿ ದಾಖಲೆಯಾಗಿದ್ದು, ಶೋಷಿತರು ಸರ್ಕಾರದ ಅನುದಾನದಿಂದ ತಮ್ಮ ಬಾಳನ್ನು ಸುಗಮಗೊಳಿಸಿಕೊಳ್ಳಲು ಅನುಕೂಲವಾಗಿದೆ ಎಂದು ಸಚಿವರು ನುಡಿದರು.

ಸಮಾರಂಭದಲ್ಲಿ ಶಾಸಕ ಡಾ.ರಫೀಕ್ ಅಹಮದ್, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ಜಿ.ಪಂ.ಸದಸ್ಯರಾದ ಕೆಂಚಮಾರಯ್ಯ, ಜಿಲ್ಲಾಧಿಕಾರಿ ಕೆ.ಪಿ.ಮೋಹನ್‍ರಾಜ್, ಜಿ.ಪಂ.ಸಿಇಒ ಅನೀಸ್ ಕಣ್ಮಣಿ ಜಾಯ್, ಬಿಸಿಎಂ ಜಿಲ್ಲಾ ಅಧಿಕಾರಿ ರಂಗೇಗೌಡ ಇತರರು ಉಪಸ್ಥಿತರಿದ್ದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News