ಸಂವಿಧಾನ ಬದಲಾವಣೆ ಪ್ರಜಾಪ್ರಭುತ್ವ ವಿರೋಧಿ ಹೇಳಿಕೆ: ಡಾ.ಅರವಿಂದ ಮಾಲಗತ್ತಿ

Update: 2018-01-26 18:18 GMT

ಮಂಡ್ಯ, ಜ.26: ಸಂವಿಧಾನವನ್ನು ವಿರೋಧಿಸಿದರೆ ಅದು ಭಾರತದ ರಾಷ್ಟ್ರೀಯ ನೀತಿಯನ್ನೇ ವಿರೋಧಿಸಿದಂತೆ. ಸಂವಿಧಾನದ ಬಗ್ಗೆ ಮಾತನಾಡಿ ಅದನ್ನು ಟೀಕಿಸುವವರು ಸಂವಿಧಾನ ವಿರೋಧಿಗಳು ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಅರವಿಂದ ಮಾಲಗತ್ತಿ ಹೇಳಿದ್ದಾರೆ.

ನಗರದ ಗಾಂಧಿಭವನದಲ್ಲಿ ಡಾ.ಜೀಶಂಪ ಸಾಹಿತ್ಯ ವೇದಿಕೆ ಹಾಗೂ ಕನ್ನಂಬಾಡಿ ದಿನಪತ್ರಿಕೆ ವತಿಯಿಂದ ರಾಷ್ಟ್ರಕವಿ ಕುವೆಂಪು ಹಾಗೂ ಡಾ.ಬಾಲಗಂಗಾಧರನಾಥಸ್ವಾಮೀಜಿ ಸ್ಮರಣಾರ್ಥ ಗುರುವಾರ ನಡೆದ 23ನೆ ರಾಜ್ಯಮಟ್ಟದ ಕವಿಕಾವ್ಯ ಮೇಳ, ಕುವೆಂಪು, ಡಾ.ಬಿಜಿಎಸ್ ಮತ್ತು ಕಾವ್ಯಶ್ರೀ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಂವಿಧಾನದ ಮೇಲೆ ಪ್ರಮಾಣವಚನ ಸ್ವೀಕರಿಸಿದ ಜನಪ್ರತಿನಿಧಿಗಳೇ ಸಂವಿಧಾನವನ್ನೇ ಬದಲಾವಣೆ ಮಾಡಬೇಕೆಂಬ ಪ್ರಜಾಪ್ರಭುತ್ವ ವಿರೋಧಿ ಹೇಳಿಕೆ ಕೊಡುತ್ತಿರುವುದು ದುರಾದೃಷ್ಟಕರ ಎಂದು ಅವರು ಹೇಳಿದರು.

ಪ್ರಧಾನಿ ನರೇಂದ್ರಮೋದಿ ಸಂವಿಧಾನ ದಿನಾಚರಣೆ ಮಾಡಲು ಹೊರಟಿದ್ದರೆ, ಇತ್ತ ಅವರ ಸಂಪುಟದ ಮಂತ್ರಿಯೊಬ್ಬರು ಸಂವಿಧಾನವನ್ನೇ ಬದಲಿಸುತ್ತೀನಿ ಅಂತಾರೆ. ಪ್ರಜಾಪ್ರಭುತ್ವದಲ್ಲಿ ಟೀಕೆ ಮಾಡಲು ಎಲ್ಲರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ಟೀಕೆಗಳು ಸಮಾಜವನ್ನು ತಿದ್ದುವಂತಿರಬೇಕು. ಅದನ್ನು ಬಿಟ್ಟು ಸಮಾಜವನ್ನು ಕೊಲ್ಲುವಂತಿರಬಾರದು ಎಂದು ಅವರು ಹೇಳಿದರು.

ಕಾವ್ಯ, ಕವಿಗಳಿಗೆ ಬರವಿಲ್ಲ:
ಕರ್ನಾಟಕದಲ್ಲಿ ಕಾವ್ಯಕ್ಕೆ ಮತ್ತು ಕವಿಗಳಿಗೆ ಬರಗಾಲವಿಲ್ಲ. ಸಾಹಿತಿಗಳು, ಕವಿಗಳು ಸೇರಿದಂತೆ ಅನೇಕ ಮಹನೀಯರಿಗೆ ಪ್ರಶಸ್ತಿ ನೀಡಲು ಸರಕಾರಿ ಸಂಸ್ಥೆಗಳು ಆಗಬೇಕೆಂದೇನಿಲ್ಲ. ಖಾಸಗಿ ಸಂಸ್ಥೆಗಳೂ ನೀಡುವ ಪ್ರಶಸ್ತಿಗೆ ಬೆಲೆ ಇದೆ ಎಂದು ಮಾಲಗತ್ತಿ ಅಭಿಪ್ರಾಯಪಟ್ಟರು.

ಪ್ರಶಸ್ತಿ ಕೊಡುವುದು ವ್ಯಕ್ತಿಯ ವ್ಯಕ್ತಿತ್ವ ವಿಕಸನಗೊಳಿಸಲು ಆಗಿರುತ್ತದೆ. ಸಾಧಕನ ಸೇವೆ, ಆತನ ವ್ಯಕ್ತಿತ್ವ, ಸಾರ್ಥಕತೆಯನ್ನು ನೋಡಿ ಪ್ರಶಸ್ತಿ ನೀಡಲಾಗುತ್ತದೆ. ಆದರೆ, ಯಾವೊಬ್ಬ ವ್ಯಕ್ತಿಯೂ ಪ್ರಶಸ್ತಿಯ ಬೆನ್ನತ್ತಿ ಹೋಗಬಾರದು ಎಂದು ಅವರು ಹೇಳಿದರು.

ಅಧ್ಯಕ್ಷತೆವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಎಂ.ಕೃಷ್ಣಪ್ಪ ಮಾತನಾಡಿ, ಮಂಡ್ಯ ಜಿಲ್ಲೆ ಸಾಹಿತ್ಯ ಹಾಗೂ ಸಾಂಸ್ಕೃತಿಕ ಲೋಕಕ್ಕೆ ಅನೇಕ ಮಹನೀಯರನ್ನು ಕೊಟ್ಟಿದೆ. ಅನೇಕ ಮಹನೀಯರು ಕಲೆ, ಸಂಸ್ಕೃತಿಗೆ ಗಣನೀಯ ಕೊಡುಗೆ ನೀಡಿದ್ದಾರೆ ಎಂದರು.

ಆದಿಚುಂಚನಗಿರಿ ಹೇಮಗಿರಿ ಶಾಖಾ ಮಠದ ಡಾ.ಜೆ.ಎನ್.ರಾಮಕೃಷ್ಣೇಗೌಡ ಸಾನಿಧ್ಯ ವಹಿಸಿದ್ದರು. ಸಮ್ಮೇಳನಾಧ್ಯಕ್ಷ ಹಾಗೂ ವಿ.ಸಿ.ಫಾರಂ ಕೃಷಿ ವಿಜ್ಞಾನ ಕೇಂದ್ರದ ಸಹ ಪ್ರಾಧ್ಯಾಪಕ ಡಾ.ಎಂ.ವೆಂಕಟೇಶ್, ರಾಜ್ಯ ಸರಕಾರಿ ನೌಕರರ ಸಂಘದ ಬಿ.ಎಂ.ಅಪ್ಪಾಜಪ್ಪ, ಕನ್ನಡಸೇನೆ ಜಿಲ್ಲಾಧ್ಯಕ್ಷ ಮಂಜುನಾಥ್, ಡಾ.ಜೀಶಂಪ ಸಾಹಿತ್ಯ ವೇದಿಕೆ ಅಧ್ಯಕ್ಷ ಎಸ್.ಕೃಷ್ಣಸ್ವರ್ಣಸಂದ್ರ ಹಾಗೂ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News