ಸಮಾಜದ ಸ್ವಾಸ್ಥ್ಯ ಹಾಳುಗೆಡುವ ಶಕ್ತಿಗಳ ಧಮನ ಮಾಡಬೇಕು: ಸಚಿವ ಎಂ.ಕೃಷ್ಣಪ್ಪ

Update: 2018-01-26 18:25 GMT

ಮಂಡ್ಯ,ಜ.26: ದೇಶದ ಭದ್ರತೆಗೆ ಸವಾಲಾಗಿರುವ ಭಯೋತ್ಪಾದನೆ, ಜಾತಿ ಧರ್ಮದ ಹೆಸರಿನಲ್ಲಿ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವ ಶಕ್ತಿಗಳನ್ನು ಧಮನ ಮಾಡಿ ಸರ್ವ ಧರ್ಮೀಯರೂ ಸೋದರತ್ವದಿಂದ ಬಾಳುವ ವಾತಾವರಣ ನಿರ್ಮಿಸುವ ಸವಾಲು ಎಲ್ಲರ ಮುಂದಿದೆ ಎಂದು ವಸತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಕೃಷ್ಣಪ್ಪ ಕರೆ ನೀಡಿದ್ದಾರೆ.

ನಗರದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಶುಕ್ರವಾರ ಗಣರಾಜ್ಯೋತ್ಸವದ ಸಮಾರಂಭದಲ್ಲಿ ಧ್ವಜವಂದನೆ ಸ್ವೀಕರಿಸಿ ಸಂದೇಶ ನೀಡಿದ ಅವರು, ಆರೋಗ್ಯಕರ ಸಮಾಜ ನಿರ್ಮಾಣಕ್ಕಾಗಿ ಕಂಕಣ ಬದ್ಧರಾಗಿ ಶ್ರಮಿಸುವ ಸಂಕಲ್ಪ ಮಾಡಬೇಕಿದೆ ಎಂದರು.

ಭಾರತದ ಸಂವಿಧಾನವು ವಿಶ್ವದಲ್ಲೇ ಅತಿ ದೊಡ್ಡ ಸಂವಿಧಾನವಾಗಿದ್ದು, ನಮ್ಮ ಗಣತಂತ್ರ ವ್ಯವಸ್ಥೆಗೆ ವಿಶೇಷವಾದ ಸ್ಥಾನಮಾನವಿದೆ. ಇಂತಹ ಸಂವಿಧಾನ ರಚನೆಯಲ್ಲಿ  ಡಾ.ಬಿ.ಆರ್.ಅಂಬೇಡ್ಕರ್ ಅವರ ಶ್ರಮ ಅಪಾರವಾಗಿದೆ ಎಂದು ಅವರು ಹೇಳಿದರು.

ಸರ್ವರಿಗೂ ಸಮ ಪಾಲು- ಸರ್ವರಿಗೂ ಸಮ ಬಾಳು ಎಂಬ ವಿಶ್ವ ಮಾನವ ತತ್ವದಡಿ ಜನರಿಂದ, ಜನರಿಗಾಗಿ, ಜನರೇ ನಡೆಸುವ ಆಡಳಿತ ಹೊಂದಿರುವ ವಿನೂತನ ಗಣತಂತ್ರ ವ್ಯವಸ್ಥೆಯಲ್ಲಿ ಎಲ್ಲ ಜಾತಿ, ಧರ್ಮ, ಭಾಷೆಗಳಿಗೂ ಸಮಾನ ಗೌರವ, ಸಮಾನ ಮಾನ್ಯತೆ ಇದೆ ಎಂದು ಅವರು ತಿಳಿಸಿದರು.

ಹಲವಾರು ಭಾಷೆ, ಧರ್ಮಗಳನ್ನು ಹೊಂದಿದ್ದರೂ ವಿವಿಧತೆಯಲ್ಲಿ ಏಕತೆ ನಮ್ಮ ಸಂವಿಧಾನದ ವಿಶೇಷ. ಇಂತಹ ಅತ್ಯುತ್ತಮ ವ್ಯವಸ್ಥೆಯಲ್ಲಿ ನಾವು ಹಲವಾರು ಸುಧಾರಣೆಗಳನ್ನು ತಂದಿದ್ದೇವೆ. ಭಾರತದ ಜನಜೀವನ ಉತ್ತಮ ಮಟ್ಟದಲ್ಲಿ ನಡೆಯುವಂತಾಗಲು ಬೇಕಾಗುವ ನಾಗರಿಕ ಸೌಲಭ್ಯಗಳನ್ನು ಒದಗಿಸಲು ನಿರಂತರ ಪ್ರಯತ್ನ ಮಾಡಲಾಗಿದೆ ಎಂದು ಅವರು ನುಡಿದರು.

ಹಸಿವು, ಬಡತನ, ಅನಕ್ಷರತೆ, ನಿರುದ್ಯೋಗ ಸಮಸ್ಯೆಗಳ ನಿವಾರಣೆಗೆ ದೊಡ್ಡ ಮಟ್ಟದಲ್ಲಿ ಪ್ರಯತ್ನ ಮಾಡಲಾಗಿದೆ. ದೇಶ ಆಹಾರದಲ್ಲಿ ಸ್ವಾವಲಂಬನೆ ಸಾಧಿಸಿದೆ. ಯಾವ ಒಬ್ಬ ವ್ಯಕ್ತಿಯೂ ಹಸಿವಿನಿಂದ ಸಾಯಬಾರದು ಹಾಗೂ ನರಳಬಾರದು ಎಂಬ ಮೂಲಭೂತ ಆಶಯದೊಂದಿಗೆ ಯೋಜನೆಗಳನ್ನು ರೂಪಿಸಲಾಗಿದೆ ಎಂದು ಅವರು ವಿವರಿಸಿದರು.

ಶಿಕ್ಷಣ, ಆರೋಗ್ಯ, ವಸತಿ ಮುಂತಾದ ಮೂಲಭೂತ ಸೌಕರ್ಯ ಕಲ್ಪಿಸುವಲ್ಲಿ ದೇಶ ಪ್ರಗತಿ ಸಾಧಿಸಿದೆ. ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಲ್ಲಿಯೂ ಬಹುದೊಡ್ಡ ಸಾಧನೆ ಮಾಡಲಾಗಿದೆ. ಕೈಗಾರಿಕೆ ಹಾಗೂ ವಾಣಿಜ್ಯ ಕ್ಷೇತ್ರದಲ್ಲಿಯೂ ಗಮನಾರ್ಹ ಸಾಧನೆಯಾಗಿದೆ ಎಂದು ಅವರು ವಿವರಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ನಮ್ಮ ರಾಜ್ಯ ಸರಕಾರ ಜನರ ಕಲ್ಯಾಣಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿದೆ. ರೈತರ, ಕೃಷಿಕಾರ್ಮಿಕರ, ಆರ್ಥಿಕವಾಗಿ ದುರ್ಬಲರಾದವರ, ಹಿಂದುಳಿದ ವರ್ಗದವರ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ಮತ್ತು ಅಲ್ಪಸಂಖ್ಯಾತರ ಜೀವನಮಟ್ಟ ಸುಧಾರಣೆಗೆ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಿದೆ ಎಂದು ಕೃಷ್ಣಪ್ಪ ಹೇಳಿದರು.

ಸರಕಾರ ಜಾರಿಗೊಳಿಸಿರುವ ಯೋಜನೆಗಳು ಶ್ರೀಸಾಮಾನ್ಯನ ಬದುಕಿಗೆ ಆಧಾರವಾಗಿವೆ ಎಂದರೆ ತಪ್ಪಾಗಲಾರದು ಎಂದ ಅವರು, ಸಕಲರನ್ನು ಒಳಗೊಂಡ ಸರ್ವಾಂಗೀಣ ಅಭಿವೃದ್ಧಿ ನಮ್ಮ ಧ್ಯೇಯವಾಗಿದೆ. ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಗರಿಷ್ಠ ಆಶ್ವಾಸನೆಗಳನ್ನು ಈಡೇರಿಸುವಲ್ಲಿ ಮಹತ್ತರ ಸಾಧನೆಯಾಗಿದೆ ಎಂದರು.

ರೈತರ ಸಾಲಮನ್ನಾ, ಕೃಷಿಭಾಗ್ಯ, ಅನ್ನಭಾಗ್ಯ, ಕ್ಷೀರಭಾಗ್ಯ, ಶಾದಿಭಾಗ್ಯ, ವಿದ್ಯಾಸಿರಿಯಂತಹ ಯೋಜನೆಗಳ ಜತೆಗೆ, ನೀರಾವರಿ, ಕೃಷಿ, ಸಾಮಾಜಿಕ ಭದ್ರತೆಗೆ ರಾಜ್ಯ ಸರಕಾರ ನೀಡಿರುವಷ್ಟು ಅನುದಾನವನ್ನು ಹಿಂದಿನ ಯಾವ ಸರಕಾರಗಳೂ ನೀಡಿಲ್ಲ ಎಂದು ಅವರು ಹೇಳಿದರು.

ಗುಡಿಸಲು ಮುಕ್ತ ರಾಜ್ಯವನ್ನಾಗಿಸುವ ದಿಶೆಯಲ್ಲಿ ನಮ್ಮ ಸತಕಾರ 5 ವರ್ಷಗಳ ಅವಧಿಯಲ್ಲಿ ಒಟ್ಟು 15 ಲಕ್ಷ ಮನೆಗಳನ್ನು ನಿರ್ಮಿಸುವ ಗುರಿ ಹೊಂದಿದ್ದು, ಈವರೆಗೆ ಒಟ್ಟು. 13.26 ಲಕ್ಷ ಮನೆಗಳನ್ನು ನಿರ್ಮಿಸಲಾಗಿದೆ. 60 ಸಾವಿರ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಜಿಪಂ ಅಧ್ಯಕ್ಷೆ ಜೆ.ಪ್ರೇಮಕುಮಾರಿ, ವಿಧಾನಪರಿಷತ್ ಸದಸ್ಯರಾದ ಕೆ.ಟಿ.ಶ್ರೀಕಂಠೇಗೌಡ, ಅನ್.ಅಪ್ಪಾಜಿಗೌಡ, ಜಿಪಂ ಅಧ್ಯಕ್ಷೆ ಜೆ.ಪ್ರೇಮಕುಮಾರಿ, ನಗರಸಭಾಧ್ಯಕ್ಷ ಹೊಸಹಳ್ಳಿ ಬೋರೇಗೌಡ, ತಾಪಂ ಉಪಾಧ್ಯಕ್ಷೆ ಮಂಜುಳ, ಜಿಲ್ಲಾಧಿಕಾರಿ ಎನ್.ಮಂಜುಶ್ರೀ, ಎಸ್ಪಿ ಜಿ.ರಾಧಿಕಾರ, ಜಿಪಂ ಸಿಇಓ ಬಿ.ಶರತ್, ಇತರೆ ಅಧಿಕಾರಿ ಗಣ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News