ಸೂಲಗಿತ್ತಿ ನರಸಮ್ಮಗೆ ಪರಮೇಶ್ವರ್ ಅಭಿನಂದನೆ
ತುಮಕೂರು,ಜ.27: ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೇಂದ್ರ ಸರ್ಕಾರ ಕೊಡ ಮಾಡುವ ಪದ್ಮಶ್ರೀ ಪ್ರಶಸ್ತಿಗೆ ಭಾಜನವಾಗಿರುವ ಸೂಲಗಿತ್ತಿ ನರಸಮ್ಮ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಭೇಟಿ ಮಾಡಿ ಆರೋಗ್ಯ ವಿಚಾರಿಸಿ ಅಭಿನಂದಿಸಿದರು.
ನಗರದ ಆದರ್ಶ ಆಸ್ಪತ್ರೆಗೆ ಶನಿವಾರ ತೆರಳಿದ ಪರಮೇಶ್ವರ್ ಸೂಲಗಿತ್ತಿ ನರಸಮ್ಮರವರಿಗೆ ಶಾಲು ಹೊದಿಸಿ ಫಲತಾಂಬೂಲ ನೀಡಿ ಗೌರವಿಸಿ ಶುಭಾಶಯ ಕೋರಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ್, ನಮ್ಮೆಲ್ಲರಿಗೂ ಅತ್ಯಂತ ಗೌರವ ತರುವಂತ ರೀತಿಯಲ್ಲಿ ಕೇಂದ್ರ ಸರ್ಕಾರ ಸೂಲಗಿತ್ತಿ ನರಸಮ್ಮ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿದೆ ಎಂದು ಸಂತಸ ವ್ಯಕ್ತಪಡಿಸಿದರು.
ತುಮಕೂರು ಜಿಲ್ಲೆ ಹಾಗೂ ಕರ್ನಾಟಕ ರಾಜ್ಯಕ್ಕೆ ಪ್ರಮುಖವಾಗಿ ಕೆಳ ಹಂತದ ಸಮುದಾಯದಿಂದ ಬಂದ ನರಸಮ್ಮರಿಗೆ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿರುವುದು ಹೆಮ್ಮೆಯ ಸಂಗತಿ ಎಂದರು.
ಯಾರು ಪ್ರಾಮಾಣಿಕವಾಗಿ ಕೆಲಸ ಮಾಡಿರುತ್ತಾರೋ ಅಂತಹವರಿಗೆ ಪ್ರಶಸ್ತಿ ನೀಡಿರುವುದಕ್ಕೆ ಇದೊಂದು ನಿದರ್ಶನ. ಸೂಲಗಿತ್ತಿ ನರಸಮ್ಮನವರು ಅತ್ಯಂತ ಬಡ ಕುಟುಂಬದಿಂದ ಬಂದು ಈ ಸಾಧನೆ ಮಾಡಿದ್ದಾರೆ. ಅದರಲ್ಲೂ ಜಿಲ್ಲೆಯ ಗಡಿ ತಾಲ್ಲೂಕು ಪಾವಗಡದಿಂದ ಬಂದು ಈ ಸಾಧನೆ ಮಾಡಿರುವುದು ಅತ್ಯಂತ ಸಂತೋಷಕರ ಸಂಗತಿ ಎಂದರು.
ಸೂಲಗಿತ್ತಿ ನರಸಮ್ಮ ಅವರು ನಿಸ್ವಾರ್ಥ, ಪ್ರಾಮಾಣಿಕ ಸೇವೆ ಬಹಳಷ್ಟು ಜನರಿಗೆ ಆದರ್ಶವಾಗಲಿದೆ ಎಂದು ಅವರು ಹೇಳಿದರು.
ಅಭಿನಂದನೆ: ಜಿಲ್ಲೆಯ ಗಡಿತಾಲ್ಲೂಕು ಪಾವಗಡದ ಸೂಲಗಿತ್ತಿ ನರಸಮ್ಮರವರ ಸೇವೆಯನ್ನು ಪರಿಗಣಿಸಿ ಪ್ರಶಸ್ತಿ ನೀಡಿದ ಕೇಂದ್ರ ಸರ್ಕಾರ, ರಾಷ್ಟಪತಿ ಹಾಗೂ ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಸಂಸದ ಎಸ್.ಪಿ. ಮುದ್ದಹನುಮೇಗೌಡ, ಶಾಸಕ ಡಾ. ರಫೀಕ್ ಅಹಮದ್ ಉಪಸ್ಥಿತರಿದ್ದರು.